ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಷ್ಣತೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ತಡೆಯಲು, ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯದ ರಾಷ್ಟ್ರೀಯ ಕಾರ್ಯಕ್ರಮ (NPCCHH) ಹೊರಡಿಸಿದ ನಿರ್ದೇಶನಗಳು ಮತ್ತು ಸಲಹೆಗಳ ಆಧಾರದಲ್ಲಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಬಿಸಿಲಿನ ತಾಪ, ಬಿಸಿಗಾಳಿ ಹಾಗೂ ಕಾಲರಾ ಬಗ್ಗೆ ಕಟ್ಟೆಚ್ಚರ ವಹಿಸಲು ಸುತ್ತೋಲೆ ಹೊರಡಿಸಲಾಗಿದೆ. ಸಾಂಕ್ರಾಮಿಕ ರೋಗಿಗಳ ಡೇಟಾ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ.
ಎರಡು ಜಿಲ್ಲೆಗಳಲ್ಲಿ ತಲಾ ಇಬ್ಬರು ಸಾವು: ಕಲಬುರಗಿ, ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ ಇಬ್ಬರು ಮೃತಪಟ್ಟಿದ್ದು, ಬಿಸಿಲಿನ ತಾಪದಿಂದ ಸಾವನ್ನಪ್ಪಿಲ್ಲ ಎಂಬ ಮಾಹಿತಿ ಬಂದಿದೆ. ಇತರ ರೋಗಗಳಿಂದ ಬಳಲುತ್ತಿದ್ದ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಬಿಸಿಲಿನ ತಾಪವೂ ಇದಕ್ಕೆ ಕಾರಣವೇ ಎಂಬುದರ ಬಗ್ಗೆ ಪರೀಕ್ಷೆ ನಡೆಯುತ್ತಿದೆ. ಬಿಸಿಗಾಳಿ ಆಘಾತದ ನಿರ್ವಹಣೆಗೆ ಜಿಲ್ಲಾಸ್ಪತ್ರೆಯಲ್ಲಿ 5, ತಾಲೂಕು ಆಸ್ಪತ್ರೆಯಲ್ಲಿ 2 ಬೆಡ್ ಮೀಸಲಿಡಲಾಗಿದೆ. ಜಿಲ್ಲಾಮಟ್ಟದಲ್ಲಿ ನೋಡಲ್ ಅಧಿಕಾರಿ, ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಈವರೆಗೂ ಬಿಸಿಲಿನ ತಾಪದ ಸಂಬಂಧ 341, ಹೀಟ್ ಕ್ರಾಂಪ್ನಿಂದ 212, ಹೀಟ್ ಎಕ್ಸ್ಹಾಷನ್ ಬಗ್ಗೆ 58 ಪ್ರಕರಣಗಳು ವರದಿ ಆಗಿವೆ. ಒಟ್ಟು 521 ಕೇಸ್ಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಬಿಸಿಲಿನ ತಾಪದಿಂದ ಯಾವುದೇ ಸಾವು ಸಂಭವಿಸಿಲ್ಲ. ಅಗತ್ಯ ಔಷಧಿಗಳನ್ನು ಸಂಗ್ರಹಿಸಿಡಲು ತಿಳಿಸಿದ್ದೇವೆ. ಅಲ್ಲದೇ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿ.ರಂದೀಪ್ ಮಾಹಿತಿ ನೀಡಿದರು.
ಕಾಲರಾ ವಿಚಾರವಾಗಿ ಮಾತನಾಡಿದ ಅವರು, ಕೇವಲ ವಾಂತಿ - ಭೇದಿಯನ್ನು ಕಾಲರಾ ಅಂತಾ ಭಾವಿಸಬಾರದು. ಶುದ್ದ ನೀರಿನ ಕೊರತೆಯಿಂದಾಗಿ ಕಾಲರಾ ಬರುತ್ತದೆ. ಕಳಪೆ ಗುಣಮಟ್ಟದ ಆಹಾರ ಮತ್ತು ನೀರು ಸೇವನೆಯಿಂದ ಕಾಲರಾ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಕಾಲರಾ ಬಗ್ಗೆ ಸುಳ್ಳು ಮಾಹಿತಿ: ಕಾಲರಾ ಬಗ್ಗೆ ಸುಳ್ಳು ಮಾಹಿತಿಗಳು ಹರಿದಾಡುತ್ತಿದೆ. ಶೇ.50ರಷ್ಟು ಕಾಲರಾ ಏರಿಕೆ ಆಗಿಲ್ಲ. ಇದು ಸತ್ಯಕ್ಕೆ ದೂರವಾದದ್ದು, ಬೆಂಗಳೂರು ನಗರದಲ್ಲಿ ಮೂರು ತಿಂಗಳುಗಳಲ್ಲಿ 2 ಪ್ರಕರಣ, ರಾಮನಗರ ಜಿಲ್ಲೆಗಳಲ್ಲಿ 1 ಸೇರಿ ಒಟ್ಟು 6 ಪ್ರಕರಣಗಳು ವರದಿಯಾಗಿವೆ. ಕಾಲರಾ ಔಟ್ ಬ್ರೇಕ್ ಆಗಿಲ್ಲ. ಎಲ್ಲೂ ಕೂಡ ಒಂದೇ ಲೊಕ್ಯಾಲಿಟಿಯಲ್ಲಿ ಹೆಚ್ಚು ಕೇಸ್ ಪ್ರಕರಣಗಳು ಬಂದಿಲ್ಲ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರದಲ್ಲಿ ಮಾತ್ರ ಕಾಲರಾ ಪ್ರಕರಣ ವರದಿಯಾಗಿವೆ ಎಂದು ಡಿ.ರಂದೀಪ್ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರಂ ನಿವಾಸಿಗೆ ಕಾಲರಾ ಪತ್ತೆ ವಿಚಾರವಾಗಿ ಮಾತನಾಡಿದ ಆಯುಕ್ತರು, ಆ ವ್ಯಕ್ತಿಯಲ್ಲಿ ಕಾಲರಾ ಕಂಡುಬಂದಿಲ್ಲ. ಚಿಕಿತ್ಸೆಗೆ ಸ್ಪಂದಿಸಿ, ಗುಣಮುಖರಾಗಿ ತಮ್ಮ ಊರು ಶಿರಾಗೆ ತೆರಳಿದ್ದಾರೆ. ಹೀಗಾಗಿ, ಯಾವುದೇ ಕಾಲರಾ ಪ್ರಕರಣಗಳು ಪತ್ತೆಯಾಗಿಲ್ಲ. ಪಿಜಿಯಲ್ಲಿ 32 ಮಹಿಳೆಯರು ವಾಸವಿದ್ದು, ಯಾರಿಗೂ ಇಂತಹ ತೊಂದರೆ ಕಾಣಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ದೃಢವಾದ ಕಾಲರಾ ಪ್ರಕರಣಗಳ ವರ್ಷವಾರು ಮಾಹಿತಿ ಈ ಕೆಳಕಂಡಂತಿದೆ.
- 2019 - 02
- 2020 - 40
- 2021 - 20
- 2022 - 42
- 2023 - 108
- 2024 - 06
2024ರಲ್ಲಿ ದೃಢಪಟ್ಟ ಕಾಲರಾ ಪ್ರಕರಣಗಳು:
ಮಾರ್ಚ್ ತಿಂಗಳಲ್ಲಿ ಬೆಂಗಳೂರು ನಗರ - 02
ಬಿಬಿಎಂಪಿ ವ್ಯಾಪ್ತಿಯಲ್ಲಿ - 03
ರಾಮನಗರ - 01
ಒಟ್ಟು - 06
ಆರೋಗ್ಯ ಇಲಾಖೆ ಸಲಹೆ, ಸೂಚನೆಗಳು:
- ಕುಡಿಯುವ ನೀರಿನ ಶುದ್ಧತೆ ಬಗ್ಗೆ ಎಚ್ಚರಿಕೆ ವಹಿಸಬೇಕು.
- ಶುದ್ದೀಕರಿಸಿದ ಅಥವಾ ಚೆನ್ನಾಗಿ ಕುದಿಸಿ, ಆರಿಸಿದ ನೀರನ್ನೇ ಕುಡಿಯಬೇಕು.
- ಲಾವಂಚ ಬೇರು ಹಾಕಿ ನೀರು ಕುಡಿಯುವುದು ಒಳ್ಳೆಯದು.
- ಮಲ ವಿಸರ್ಜನೆ ನಂತರ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.
- ಸೊಪ್ಪು ಮತ್ತು ತರಕಾರಿಯನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು.
- ಅತಿಯಾಗಿ ಖಾರ, ಎಣ್ಣೆ, ಉಪ್ಪು ಹಾಗೂ ಮಸಾಲೆ ಪದಾರ್ಥಗಳನ್ನು ಸೇವಿಸಬಾರದು.
- ಗಂಜಿ, ಮಜ್ಜಿಗೆ, ಎಳನೀರು ಹಾಗೂ ಹಣ್ಣಿನ ರಸದಂತಹ ಆಹಾರ ಸೇವನೆ ಒಳ್ಳೆಯದು.
- ದೇಹದಲ್ಲಿ ಬಳಲಿಕೆ ಕಂಡುಬಂದ ಕೂಡಲೇ ಒಆರ್‌ಎಸ್, ಉಪ್ಪು ಬೆರೆಸಿದ ನಿಂಬೆ ಪಾನಕ, ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು.
- ಪೌಷ್ಟಿಕಾಂಶ ಇರುವ ಆಹಾರವನ್ನು ಸೇವಿಸಬೇಕು. ಮನೆ ಊಟ ಸೇವನೆಗೆ ಆದ್ಯತೆ ನೀಡಬೇಕು.
ಇದನ್ನೂ ಓದಿ: ನಂದ್ಯಾಲ ಏಷ್ಯಾದ ನಾಲ್ಕನೇ ಅತ್ಯಂತ ಬಿಸಿಯಾದ ನಗರ: ಭುವನೇಶ್ವರ, ಕಲಬುರಗಿಯಲ್ಲೂ ನಿಗಿ ನಿಗಿ ಕೆಂಡ