ಕಲಬುರಗಿ : ಜಮೀನು ವ್ಯಾಜ್ಯದ ಹಿನ್ನೆಲೆ ಪೆಟ್ರೋಲ್ ಬಾಂಬ್ ಎಸೆದು ಸಾಮೂಹಿಕ ಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ಕಡಣಿ ಗ್ರಾಮದಲ್ಲಿ ನಡೆದಿದೆ. ಗುಂಡೆರಾವ್ ಕುಟುಂಬದವರ ಹತ್ಯೆಗೆ ಶಿವಲಿಂಗಪ್ಪ ಎಂಬುವವರು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಏನಿದು ಘಟನೆ?: ಕಡಣಿ ಗ್ರಾಮದ ಗುಂಡೆರಾವ್ ಸಹೋದರ ಸಂಬಂಧಿ ಶಿವಲಿಂಗಪ್ಪ ಎಂಬುವವರು ತನ್ನ 4 ಎಕರೆ ಜಮೀನನ್ನ ಮಾರಾಟ ಮಾಡಿ 13 ಲಕ್ಷ ರೂ ಅಡ್ವಾನ್ಸ್ ಹಣ ಪಡೆದಿದ್ದರು. ಬಳಿಕ ಆ ನಾಲ್ಕು ಎಕರೆ ಜಮೀನು ರಿಜಿಸ್ಟರ್ ಮಾಡುವ ವಿಚಾರದಲ್ಲಿ ಗುಂಡೆರಾವ್ ಮತ್ತು ಶಿವಲಿಂಗಪ್ಪ ಮಧ್ಯೆ ಮನಸ್ತಾಪ ಬಂದಿದೆ. ಅದಕ್ಕೆ ಇಬ್ಬರ ಮಧ್ಯೆ ಕಳೆದ ಹಲವು ದಿನಗಳಿಂದ ಜಗಳ ಹೊಡೆದಾಟ ನಡೆದಿತ್ತು.
ಈ ಬಗ್ಗೆ ಮನೆ ಮಾಲೀಕ ಗುಂಡೆರಾವ್ ಮಾತನಾಡಿ, ಘಟನೆಯಿಂದ ಕೆರಳಿದ ಶಿವಲಿಂಗಪ್ಪ ಬಟ್ಟೆಯನ್ನ ಬಾಲ್ ಆಕಾರ ಮಾಡಿ ಅದನ್ನ ಪೆಟ್ರೋಲ್‌ನಲ್ಲಿ ಅದ್ದಿ ಮನೆಯೊಳಗೆ ಬಿಸಾಕಿದ್ದಾನೆ. ನಾವು ಮನೆ ಬಾಗಿಲು ಹಾಕಿಕೊಂಡೆವು. ಇದೇ ಸರಿಯಾದ ಸಮಯ ಅಂತಾ ಕೀಟನಾಶಕ ಸ್ಪ್ರೈಯರ್‌ನಿಂದ ಮನೆಯೊಳಗೆ ಪೆಟ್ರೋಲ್ ಸ್ಪ್ರೇ ಮಾಡಿ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ.
ಅವಘಡದಲ್ಲಿ ಮನೆ ಮಾಲೀಕ ಗುಂಡೆರಾವ್ ಪತ್ನಿ ಸರುಬಾಯಿ, ಸೊಸೆ ಮುಕ್ತಾಬಾಯಿ, ಮೂರು ವರ್ಷದ ಮೊಮ್ಮಗಳು ಲಕ್ಷ್ಮಿ ಹಾಗೂ ಒಂದು ವರ್ಷದ ನಂದಿತಾ ಎಂಬುವರಿಗೆ ಸುಟ್ಟ ಗಾಯಗಳಾಗಿವೆ. ತಕ್ಷಣ ಗ್ರಾಮಸ್ಥರು ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆ ಸಂಬಂಧ ಕಲಬುರಗಿ ಸಿಟಿ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್ ಡಿ ಕಡಣಿ ಗ್ರಾಮಕ್ಕೆ ಭೇಟಿ ನೀಡಿ ಸುಟ್ಟುಹೋಗಿರುವ ಮನೆ ಪರಿಶೀಲನೆ ನಡೆಸಿ, ಕುಟುಂಬಸ್ಥರು ಮತ್ತು ಗ್ರಾಮಸ್ಥರಿಂದ ಮಾಹಿತಿ ಪಡೆದಿದ್ದಾರೆ.
ಕಮಿಷನರ್ ಡಾ. ಶರಣಪ್ಪ ಹೇಳಿದ್ದೇನು?: ಗ್ರಾಮಸ್ಥರ ಸಮಯಪ್ರಜ್ಞೆಯಿಂದ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರಿಂದ ಆರು ಜನರ ಪ್ರಾಣ ಉಳಿದಿದೆ. ಕುಟುಂಬಸ್ಥರು ನೀಡುವ ದೂರಿನ ಅನ್ವಯ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಶೀಘ್ರವೇ ಆರೋಪಿಗಳನ್ನ ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೆಳಗಾವಿ: ಜಮೀನು ವ್ಯಾಜ್ಯದ ಕಲಹ, ದೇವಸ್ಥಾನದಲ್ಲಿ ಮಲಗಿದ್ದ ವ್ಯಕ್ತಿಯ ಭೀಕರ ಕೊಲೆ - MURDER CASE