ಹುಬ್ಬಳ್ಳಿ: ನಗರದಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬಹುತೇಕ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಆದರೆ, ಗುಣಮಟ್ಟದ ಬಗ್ಗೆ ಆಕ್ಷೇಪಣೆಗಳು ಎದ್ದಿವೆ.
ಒಟ್ಟು 63 ಪೈಕಿ 9 ಕಾಮಗಾರಿಗಳನ್ನು ಹೊರತುಪಡಿಸಿ ಉಳಿದ ಕಾಮಗಾರಿಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಕೆಲ ಯೋಜನೆಗಳು ಉದ್ಘಾಟನೆಯಾಗಿದ್ದರೂ ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲ. ಇನ್ನೂ ಕೆಲವು ಯೋಜನೆಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿದರೂ ನಿರುಪಯುಕ್ತ ಎಂಬ ಆರೋಪ ಕೇಳಿ ಬರುತ್ತಿವೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಪ್ರತಿಕ್ರಿಯಿಸಿ, "ಸ್ಮಾರ್ಟ್ ಸಿಟಿ ಯೋಜನೆಯಡಿ ಒಟ್ಟು 63 ಕಾಮಗಾರಿಗಳು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ. ಆ ಪೈಕಿ 9 ಕಾಮಗಾರಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಾಮಗಾರಿಗಳು ಹಸ್ತಾಂತವಾಗಿವೆ. ರಸ್ತೆಗಳು, ಸ್ಟೇಡಿಯಂ, ಚಿಟಗುಪ್ಪಿ ಆಸ್ಪತ್ರೆ, ಮೀನು ಮಾರುಕಟ್ಟೆ, ಜನತಾ ಬಜಾರ್ ಸೇರಿದಂತೆ ಹಲವು ಯೋಜನೆಗಳು ಹಸ್ತಾಂತರವಾಗಿವೆ".
"ಅವುಗಳ ಪೈಕಿ 9 ಯೋಜನೆಗಳು ಹಸ್ತಾಂತರ ಪ್ರಕ್ರಿಯೆಯಲ್ಲಿವೆ. ಅದರಲ್ಲಿ ತೋಳನಕೆರೆ ಗಾರ್ಡನ್ನಲ್ಲಿನ ಆಟಿಕೆ ಸಾಮಾನುಗಳಲ್ಲಿ ನ್ಯೂನ್ಯತೆ ಸರಿಪಡಿಸಿಕೊಡುವಂತೆ ಸ್ಮಾರ್ಟ್ ಸಿಟಿ ಯೋಜನೆಯವರಿಗೆ ಪತ್ರ ಬರೆದಿದ್ದೇವೆ. ಅಲ್ಲಿಂದ ಉತ್ತರ ಬಂದ ತಕ್ಷಣ ಹಸ್ತಾಂತರ ಪ್ರಕ್ರಿಯೆ ಪ್ರಾರಂಭಿಸುತ್ತೇವೆ" ಎಂದು ಹೇಳಿದರು.
"ಗಾಜಿನ ಮನೆ ಉದ್ಯಾನದಲ್ಲಿನ ಮಕ್ಕಳ ಪುಟಾಣಿ ರೈಲು ಇನ್ನೂ ರಿಪೇರಿಯಲ್ಲಿದ್ದು, ಅದನ್ನು ಸರಿಪಡಿಸಲು ಸ್ಮಾರ್ಟ್ ಸಿಟಿ ಯೋಜನೆಯವರಿಗೆ ಪತ್ರ ಬರೆಯಲಾಗಿದೆ. ಈಗಾಗಲೇ ಚಿಟಗುಪ್ಪಿ ಆಸ್ಪತ್ರೆ ಸಾರ್ವಜನಿಕರಿಗೆ ಮುಕ್ತವಾಗಿದೆ. ಜನತಾ ಬಜಾರ್ ಕಟ್ಟಡದ ಮಳಿಗೆಗಳನ್ನು ಬೀದಿಬದಿ ವ್ಯಪಾರಿಗಳಿಗೆ ಕೂಡುವ ಪ್ರಕ್ರಿಯೆಯನ್ನು ಶೀಘ್ರವೇ ಪ್ರಾರಂಭಿಸುತ್ತೇವೆ" ಎಂದರು.
"ಗಣೇಶಪೇಟೆಯ ಮೀನು ಮಾರುಕಟ್ಟೆಯ ಮಳಿಗೆ ಹಂಚಿಕೆ ಬಗ್ಗೆ ಕೆಲ ಗೊಂದಲ ಇದ್ದು, ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇದಲ್ಲದೆ ಮಹಾನಗರ ಪಾಲಿಕೆಯ ಸುಪರ್ದಿಗೆ ಬಂದಿರುವ ಎಲ್ಲಾ ಯೋಜನೆಗಳು ಕೊನೆ ಹಂತದಲ್ಲಿ ಇವೆ. ಇನ್ನೂ 10 ರಿಂದ 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು" ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ದೆಹಲಿ ಸ್ಪೋರ್ಟ್ಸ್ ಯೂನಿವರ್ಸಿಟಿ ಕುಸ್ತಿ ವಿಭಾಗಕ್ಕೆ ಧಾರವಾಡದ ಮೂವರು ವಿದ್ಯಾರ್ಥಿಗಳು ಆಯ್ಕೆ - Delhi Sports University