ನವದೆಹಲಿ: ಪ್ರಸಿದ್ಧ ಬೇಲೂರು-ಹಳೇಬೀಡು-ಶ್ರವಣಬೆಳಗೋಳ ತಾಣಗಳ ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮನವಿ ಮಾಡಿದರು.
ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡು ಇಂದು (ಗುರುವಾರ) ರಾಜ್ಯಸಭೆಯಲ್ಲಿ ಅವರು ಮಾತನಾಡಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯಾಗಿರುವ ಹಾಸನ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ಕೊಡಲು ದೇಶ, ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ವಿಮಾನ ನಿಲ್ದಾಣ ಕಾರ್ಯಾರಂಭಿಸಿದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆರ್ಥಿಕ ಹಾಗೂ ವ್ಯೂಹಾತ್ಮಕ ಉದ್ದೇಶದಿಂದ ಹಾಸನ ವಿಮಾನ ನಿಲ್ದಾಣ ಬಹಳ ಮಹತ್ವದ್ದು ಎಂದರು.
ಹಾಸನದಲ್ಲಿ ಮೂಲಭೂತ ಸೌಕರ್ಯಗಳಿಗೆ ಕೊರತೆ ಇಲ್ಲ. ಅತ್ಯುತ್ತಮ ಶಿಕ್ಷಕ ಸಂಸ್ಥೆಗಳು ಮತ್ತು ವೈದ್ಯಕೀಯ, ಎಂಜಿನಿಯರಿಂಗ್, ಕಾನೂನು ಕಾಲೇಜುಗಳಿವೆ. ಅಲ್ಲದೆ, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಉಪಗ್ರಹ ನಿಯಂತ್ರಣ ಕೇಂದ್ರವೂ ಇದೆ. ಕಾಫಿ, ಚಹಾ ರಫ್ತಿನಲ್ಲಿ ಮುಂಚೂಣಿಯಲ್ಲಿದೆ. ಇದು ವಿದೇಶಿ ವಿನಿಮಯ ಗಳಿಕೆಗೆ ಹೆಚ್ಚು ಪೂರಕವಾಗಿದೆ. ಪ್ರತೀ ತಿಂಗಳು ಹಾಸನ ಜಿಲ್ಲೆಯ ರೈತರು ಹಾಲು ಉತ್ಪಾದನೆಯ ಮೂಲಕ ₹900 ಕೋಟಿ ದುಡಿಮೆ ಮಾಡುತ್ತಿದ್ದಾರೆ. ವಿಮಾನ ನಿಲ್ದಾಣ ನಿರ್ಮಾಣವಾದರೆ ಹಾಲು, ಹಾಲಿನ ಉತ್ಪನ್ನಗಳು ಜೊತೆಗೆ ಕಾಫಿ, ಚಹಾ ಇನ್ನಿತರೆ ಕೃಷಿ ಉತ್ಪನ್ನಗಳ ರಫ್ತಿಗೆ ಅನುಕೂಲವಾಗಿ ವಿಜ್ಞಾನ, ತಂತ್ರಜ್ಞಾನ, ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂದು ಗೌಡರು ಪ್ರತಿಪಾದಿಸಿದರು.
ಹಾಸನವು ಮಂಗಳೂರು ಮತ್ತು ಚೆನ್ನೈ ಬಂದರುಗಳ ನಡುವೆ ಆಯಕಟ್ಟಿನ ಸ್ಥಳವಾಗಿದೆ. ಉತ್ತಮ ಸಂಪರ್ಕದಿಂದ ಹಾಸನ ಅತೀದೊಡ್ಡ ವಾಣಿಜ್ಯ ಕೇಂದ್ರವಾಗಿದೆ. ಬೆಂಗಳೂರು-ಹಾಸನ ಹೆದ್ದಾರಿಯ ಭಾಗಗಳನ್ನು ಈಗಾಗಲೇ ಕೈಗಾರಿಕಾ ಕಾರಿಡಾರ್ ಎಂದು ಘೋಷಿಸಲಾಗಿದ್ದು, ಹೈದರಾಬಾದ್-ಬೆಂಗಳೂರು ಕಾರಿಡಾರ್ ಇದಕ್ಕೆ ಪೂರಕವಾಗಿದೆ. ಹಾಸನದಲ್ಲಿ ವಿಮಾನ ನಿಲ್ದಾಣ ಬೆಂಗಳೂರು, ಮಂಗಳೂರು ಮತ್ತು ಚೆನ್ನೈಯನ್ನು ಉತ್ತಮವಾಗಿ ಸಂಪರ್ಕಿಸುತ್ತದೆ. ಇದು ಆರ್ಥಿಕವಾಗಿ ಲಾಭದಾಯಕ ಮತ್ತು ಕಾರ್ಯತಂತ್ರದ ಭಾಗವಾಗಿರುತ್ತದೆ ಎಂದು ಅವರು ತಿಳಿಸಿದರು.
ರಾಜಕೀಯ ಅಡೆತಡೆಗಳು ಹಾಗೂ ಬದ್ಧತೆ: ಈವರೆಗೆ ಹಲವು ಸರ್ಕಾರಗಳು ಬಂದು ಹೋಗಿವೆ. ದುರದೃಷ್ಟವಶಾತ್ ಹಾಸನ ವಿಮಾನ ನಿಲ್ದಾಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಇದರಲ್ಲಿ ಕರ್ನಾಟಕದ ಐವರು ಮುಖ್ಯಮಂತ್ರಿಗಳು ರಾಜಕೀಯ ಮಾಡಿದ್ದಾರೆ. ನನ್ನ ಜೀವನದ ಕೊನೆಯ ಹಂತದಲ್ಲಿ ನಾನು ಈ ಸದನದಲ್ಲಿ ಕುಳಿತು ಈ ಯೋಜನೆಯು ಅಂತಿಮವಾಗಿ ಪೂರ್ಣಗೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ರೈತರಿಗಾಗಿ, ಹಾಸನ ಜಿಲ್ಲೆಯ ಅಭಿವೃದ್ಧಿಗಾಗಿ, ಕರ್ನಾಟಕಕ್ಕಾಗಿ, ಭಾರತದ ಪ್ರಗತಿಗಾಗಿ ಈ ವಿಮಾನ ನಿಲ್ದಾಣ ಆದಷ್ಟು ಬೇಗ ನಿರ್ಮಾಣ ಆಗಬೇಕಿದೆ ಎಂದು ಒತ್ತಿ ಹೇಳಿದರು.
ಲೋಕಸಭೆ ಮತ್ತು ವಿಧಾನಸಭೆ ಎರಡಕ್ಕೂ ಏಳು ಬಾರಿ ಆಯ್ಕೆಯಾಗಿರುವ ರೈತ ನಾನು. ನನ್ನ ಜೀವನದ 66 ವರ್ಷಗಳನ್ನು ಸಾರ್ವಜನಿಕ ಸೇವೆಗೆ ಮೀಸಲಿಟ್ಟಿದ್ದೇನೆ. ಹಾಸನ ವಿಮಾನ ನಿಲ್ದಾಣ ಪೂರ್ಣಗೊಳಿಸಬೇಕು. ಇದು ರೈತರನ್ನು ಉನ್ನತಿಗೆ ತರುತ್ತದೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಇದು ಕೇವಲ ಬೇಡಿಕೆಯಲ್ಲ. ಇದು ಈ ಸಂದರ್ಭದ ತುರ್ತು ಅಗತ್ಯವಾಗಿದೆ ಎಂದು ಸಭಾಪತಿಗಳಿಗೆ ದೇವೇಗೌಡರು ಮನವಿ ಮಾಡಿದರು.
ಮಾಜಿ ಪ್ರಧಾನಿಗಳ ಮಾತು ಆಲಿಸಿದ ನಂತರ ಸದನ ಉದ್ದೇಶಿಸಿ ಮಾತನಾಡಿದ ಸಭಾಪತಿ ಜಗದೀಪ್ ಧನಕರ್, ರೈತರು ಮತ್ತು ಅವರ ಸಮಸ್ಯೆಗಳ ಬಗ್ಗೆ ದೇವೇಗೌಡರು ಮಂಡಿಸಿದ ಎಲ್ಲಾ ವಿಚಾರಗಳು ನಮ್ಮೆಲ್ಲರ ಮುಂದಿವೆ. ಅವರ ಉಪಸ್ಥಿತಿಯನ್ನು ನಾವು ಆಶೀರ್ವಾದವೆಂದು ಪರಿಗಣಿಸುತ್ತೇವೆ. ಅವರ ಭಾವನೆಗಳು ನಮ್ಮ ಪಾಲಿಗೆ ಹೆಚ್ಚಿನ ಮೌಲ್ಯಯುತವಾಗಿವೆ ಎಂದರು.
ಇದನ್ನೂ ಓದಿ: ಸೋತಿದ್ದೇನೆ ಅಷ್ಟೇ, ಸತ್ತಿಲ್ಲ! ಮೂಲೇಲಿ ಕೂರುವ ಜಾಯಮಾನ ನನ್ನದಲ್ಲ; ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ