ಬೆಂಗಳೂರು: ಕೆಲ ರಾಜಕೀಯ ಮುಖಂಡರೊಂದಿಗೆ ಸೇರಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ನ್ಯಾಯಾಲಯ ಬಿಟ್ಟು ಹೋಗುವುದಿಲ್ಲ. ನ್ಯಾಯಾಲಯ ಬಿಟ್ಟು ಹೋದರೆ ನನ್ನ ಮೇಲೆ ರೌಡಿಶೀಟ್ ತೆರೆಯುತ್ತಾರೆ. ರಿವಾಲ್ವರ್ ತೋರಿಸಿ ಎನ್‌ಕೌಂಟರ್ ಮಾಡುವುದಾಗಿ ಬೆದರಿಸುತ್ತಾರೆ. ದಯವಿಟ್ಟು ನನ್ನನ್ನು ಕಾಪಾಡಿ ಎಂಬುದಾಗಿ ನ್ಯಾಯಾಲಯದಲ್ಲಿ ಬೇಡಿಕೊಂಡಿದ್ದ ಕೆಪಿಸಿಟಿಎಲ್‌ನ ಸೊರಬ ಕಾರ್ಯಕಾರಿ ಸಹಾಯಕ ಎಂಜಿನಿಯರ್ ಎಂ. ಜಿ. ಶಾಂತಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಮಹಿಳೆಗೆ ಘನತೆಗೆ ಧಕ್ಕೆ ತಂದ ಆರೋಪ, ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳಡಿ ತಮ್ಮ ವಿರುದ್ಧ ದಾಖಲಾಗಿರುವ ಮೂರು ಎಫ್‌ಆಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಶಾಂತಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಈ ವೇಳೆ ಹಾಜರಿದ್ದ ರಾಜ್ಯ ಹೆಚ್ಚವರಿ ಅಭಿಯೋಜಕ ಬಿ.ಎನ್. ಜಗದೀಶ್, ಅರ್ಜಿದಾರರ ವಿರುದ್ಧ ಯುವತಿಯೊಬ್ಬರು ದೂರು ದಾಖಲಿಸಿದ್ದಾರೆ. ವಾಸ್ತವವಾಗಿ ಅರ್ಜಿದಾರ ಮೊದಲಿಗೆ ಬೇರೊಂದು ಮಹಿಳೆಯನ್ನು ಮದುವೆಯಾಗಿದ್ದರು. ದೂರುದಾರೆ ಜೊತೆಗೆ ಎರಡನೇ ಮದುವೆಯಾಗಲು ಅರ್ಜಿದಾರ ಮುಂದಾಗಿದ್ದರು. ಮೊದಲ ಮದುವೆಯ ವಿಷಯತಿಳಿದು ದೂರುದಾರೆ ಮದುವೆ ಪ್ರಸ್ತಾಪ ಕಡಿದುಕೊಂಡರು. ಇದೇ ಕೋಪಕ್ಕೆ ಅರ್ಜಿದಾರ ದೂರುದಾರೆಯ ಗ್ರಾಮದಲ್ಲಿ ಆಕೆಯ ಪ್ರೀತಿ ಸಂಬಂಧ ಬಗ್ಗೆ ದೊಡ್ಡ ಬ್ಯಾನರ್ ಹಾಕಿಸಿದ್ದಾರೆ. ಇಂತಹ ಕೃತ್ಯಗಳನ್ನು ನಡೆಸದಂತೆ ಅರ್ಜಿದಾರರಿಗೆ ಸೂಚಿಸಬೇಕೆಂದು ಎಂದು ನ್ಯಾಯಪೀಠವನ್ನು ಕೋರಿದರು.
ಇದರಿಂದ ಅಚ್ಚರಿಗೊಂಡ ನ್ಯಾಯಮೂರ್ತಿಗಳು, ಏನ್ರಿ ಇದೆಲ್ಲಾ? ಹೀಗೆಲ್ಲಾ ಏಕೆ? ಎಂದು ಅರ್ಜಿದಾರ ಪರ ವಕೀಲರನ್ನು ಪ್ರಶ್ನಿಸಿದರು. ಅರ್ಜಿದಾರ ಪರ ವಕೀಲರು ಉತ್ತರಿಸಿ, ಶಾಂತಕುಮಾರಸ್ವಾಮಿ ಬ್ಯಾನರ್ ಹಾಕಿಲ್ಲ. ಆತ ದಾಖಲಿಸಿದ ದೂರು ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ ಎಂದು ಆಕ್ಷೇಪಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸುವಂತೆ ಅರ್ಜಿದಾರ ಹಾಗೂ ಸರ್ಕಾರಿ ವಕೀಲರಿಗೆ ಸೂಚಿಸಿದರು. ಜೊತೆಗೆ, ಅರ್ಜಿದಾರರ ವಿರುದ್ಧದ ಯಾವುದೇ ಪ್ರಕರಣ ಸಂಬಂಧ ಸಹ ಪೊಲೀಸರು ಬಲವಂತದ ಕ್ರಮ ಜರುಗಿಸಬಾರದು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.
ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಶಾಂತಕುಮಾರಸ್ವಾಮಿ ವಿರುದ್ಧ ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ. ಒಂದಕ್ಕೊಂದು ಸಂಬಂಧಿಸಿವೆ. ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ಮ್ಯಾಜಿಸ್ಟ್ರೇಟ್ ಕೋರ್ಟ್ ಅರ್ಜಿದಾರರ ಹೊಸದಾಗಿ ಎಫ್‌ಐಆರ್ ದಾಖಲಿಸಲು ಅನುಮತಿದೆ. ದೂರುದಾರೆ ಮತ್ತು ಅರ್ಜಿದಾರರ ನಡುವೆ ಮದುವೆ ಸಂಬಂಧ ಮುರಿದು ಬಿದ್ದಿತ್ತು. ಆಕೆಯ ಕುಟುಂಬದವರು ಅರ್ಜಿದಾರನ ಮೇಲೆ ಹಲ್ಲೆ ನಡೆಸಿದ್ದಾರೆ. ಆತ ದೂರು ದಾಖಲಿಸಿದ್ದಕ್ಕೆ ಯುವತಿ ಕುಟುಂಬದವರು ಪ್ರತಿ ದೂರು ದಾಖಲಿಸಿದ್ದಾರೆ.
ತನಿಖಾಧಿಕಾರಿಯು ತನ್ನ ಕಸ್ಟಡಿಯಿಂದ ಬಿಡುಗಡೆ ಮಾಡಲು ಅರ್ಜಿದಾರನ ಬಳಿ ಹಣ ಕೇಳಿದ್ದರು. ಆ ಕುರಿತು ಎಂಜಿನಿಯರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಒಂದಾದ ಮೇಲೆ ಒಂದು ಪ್ರಕರಣ ಅರ್ಜಿದಾರನ ಮೇಲೆ ದಾಖಲಾಗಿವೆ ಎಂದರು.
ಇದನ್ನೂ ಓದಿ: ವೃತ್ತಿಪರ ಕೋರ್ಸ್ಗಳಿಗೆ ಕ್ರೀಡಾ ಕೋಟಾದಲ್ಲಿ ಅರ್ಹತೆ ಮರು ಪರಿಶೀಲಿಸಲು ಕೆಇಎಗೆ ಹೈಕೋರ್ಟ್ ನಿರ್ದೇಶನ - High Court