ಬೆಂಗಳೂರು: ಮಲಹೊರುವ ಜಾಡಮಾಲಿಗಳ ನಿಷೇಧ ಮತ್ತು ಪುನರ್ವಸತಿ ಕಾಯಿದೆ 2013ರ ಅಡಿಯಲ್ಲಿ ಇರುವ ನಿಯಮದ ಅನುಸಾರ ಕೈಗೊಂಡಿರುವ ಕ್ರಮಗಳ ಕುರಿತಂತೆ ಜುಲೈ 9ರಂದು ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ನಿಷೇಧದ ನಡುವೆಯೂ ಮಲ ಹೊರುವ ಪದ್ಧತಿ ಜಾರಿಯಲ್ಲಿರುವ ಕುರಿತು ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಅರ್ಜಿ ಮತ್ತು ಆಲ್ ಇಂಡಿಯನ್ ಸೆಂಟ್ರಲ್ ಕೌನ್ಸಿಲ್ ಟ್ರೇಡ್ ಯೂನಿಯನ್ ಮತ್ತು ಹೈಕೋರ್ಟ್ ಕಾನೂನು ಸೇವೆಗಳ ಪಾಧಿಕಾರ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರೊಬ್ಬರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ಜೈನಾ ಕೊಥಾರಿ, ಕಾಯಿದೆಯಡಿಯಲ್ಲಿ ರೂಪಿಸಿರವ ನಿಯಮಗಳನ್ನು ರಾಜ್ಯ ಸರ್ಕಾರ ಅನುಷ್ಟಾನ ಮಾಡುವಲ್ಲಿ ವಿಫಲವಾಗಿದೆ. ಕಾಯ್ದೆಯ ಸೆಕ್ಷನ್ 26ರ ಪ್ರಕಾರ ವರ್ಷಕ್ಕೆ ಎರಡು ರಾಜ್ಯ ಮಟ್ಟದ ಸಭೆಗಳನ್ನು ಆಯೋಜನೆ ಮಾಡಿ, ಕಾಯ್ದೆಯಲ್ಲಿನ ನಿಯಮಗಳನ್ನು ಜಾರಿ ಮಾಡುವ ಕುರಿತಂತೆ ಪರಿಶೀಲನೆ ನಡೆಸಬೇಕು ಎಂಬುದಾಗಿ ತಿಳಿಸಲಾಗಿದೆ. ಆದರೆ, ಕಳೆದ ವರ್ಷದಿಂದ ಕೇವಲ ಒಂದು ಸಭೆಯನ್ನು ಮಾತ್ರ ಮಾಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಆರು ತಿಂಗಳು ಕಳೆದರೂ ಒಂದು ಸಭೆಯನ್ನೂ ನಡೆಸಿಲ್ಲ ಎಂದು ವಿವರಿಸಿದರು.
ಅಲ್ಲದೆ, ರಾಜ್ಯ ಮಟ್ಟದ ಸಭೆಗಳನ್ನು ಜನವರಿ ಮತ್ತು ಜುಲೈ ತಿಂಗಳಲ್ಲಿ ನಡೆಸುವುದು ಸಾಮಾನ್ಯವಾಗಿದೆ. ಈ ಸಭೆಗಳು ಶಾಸನ ಬದ್ಧವಾಗಿದ್ದು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಬೇಕಾಗಿದೆ. ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿವಿಧ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ವರದಿಯನ್ನು ಮಾಡಬೇಕಾಗಿದೆ ಎಂದು ಅವರು ಪೀಠಕ್ಕೆ ತಿಳಿಸಿದರು.
ಈ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಲೋಕಸಭೆ ಚುನಾವಣೆಯ ಕಾರಣದಿಂದ ಸಭೆ ನಡೆಸಲು ಸಾಧ್ಯವಾಗಲಿಲ್ಲ. ಆದರೆ, ಶೀಘ್ರದಲ್ಲಿ ಸಭೆ ನಡೆಸಲು ಕಾಲಾವಕಾಶ ಕೋರಿದರು. ಇದಕ್ಕೆ ಪೀಠ ಮಾಹಿತಿ ಪಡೆದು ತಿಳಿಸುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಕಾನೂನಿನಲ್ಲಿ ನಿಷೇಧವಿದ್ದರೂ, ರಾಜ್ಯದಲ್ಲಿ ಮಲಹೊರುವ ಪದ್ಧತಿ ಜಾರಿಯಲ್ಲಿರುವ ಕ್ರಮಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು. ಅರ್ಜಿಯಲ್ಲಿ ರಾಜ್ಯದಲ್ಲಿ ನಿಷೇಧದ ನಡುವೆ ಎಷ್ಟು ಮಲಹೊರುವ ಪದ್ಧತಿಯ ಪ್ರಕರಣಗಳು ದಾಖಲಾಗಿದೆ. ಅಂತಹ ಘಟನೆ ತಡೆಯಲು ಸ್ಥಳೀಯ ಸಂಸ್ಥೆಗಳು ಸೂಚನೆ ನೀಡುವುದು ಮತ್ತು ಬಹಿರಂಗವಾಗಿ ಮಲ ಹೊರುವ ಪದ್ಧತಿ ನಿಷೇಧಿಸಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸೂಚನೆ ನೀಡಲು ಅರ್ಜಿಯಲ್ಲಿ ಕೋರಲಾಗಿತ್ತು.
ಇದನ್ನೂ ಓದಿ: ನಟ ದರ್ಶನ್ಗೆ ಜೈಲಿನಲ್ಲಿ ಯಾವುದೇ ವಿಶೇಷ ಸತ್ಕಾರ ಕೊಡುತ್ತಿಲ್ಲ : ಸಚಿವ ಜಿ. ಪರಮೇಶ್ವರ್ - Minister G Parameshwar