ಹಾವೇರಿ: ಎಸ್ಎಸ್ಎಲ್ಸಿ ಪರೀಕ್ಷೆಗೆ ಪ್ರವೇಶಪತ್ರ ಬಂದಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಯೊಬ್ಬ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಣಕು ಪರೀಕ್ಷೆ ಬರೆಯುವ ಮೂಲಕ ಪ್ರತಿಭಟನೆ ನಡೆಸಿದ ಘಟನೆ ಇಂದು ಹಾವೇರಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹರನಗಿರಿಯ ಅಭಿಷೇಕ ಪ್ರತಿಭಟಿಸಿದ ವಿದ್ಯಾರ್ಥಿ. ಈತ ಹರನಗಿರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಆದರೆ ಆರೋಗ್ಯ ಸಮಸ್ಯೆಯಿಂದ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಶಾಲೆಗೆ ಹೋಗಿರಲಿಲ್ಲ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಭಿಷೇಕ ತರಗತಿಗಳಿಗೆ ಹಾಜರಾಗಿರಲಿಲ್ಲ. ಈ ಕುರಿತಂತೆ ಶಾಲೆಯ ಶಿಕ್ಷಕರ ಜೊತೆ ಚರ್ಚಿಸಿದ್ದ ಅಭಿಷೇಕ್ ಹಾಗೂ ಅವರ ಪೋಷಕರು, ವೈದ್ಯರಿಂದ ಪ್ರಮಾಣಪತ್ರ ನೀಡುವುದಾಗಿ ತಿಳಿಸಿದ್ದರು.
ಅಲ್ಲದೇ ಈ ವೇಳೆ ನಮಗೆ ಶಾಲೆಯ ಮುಖ್ಯ ಶಿಕ್ಷಕರು ಪರೀಕ್ಷೆ ಅನುಮತಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಪರೀಕ್ಷೆ ಬೆರಳೆಣಿಕೆಯಷ್ಟು ದಿನಗಳಿರುವಾಗ ಮುಖ್ಯಶಿಕ್ಷಕ ಹಾಜರಾತಿ ಕೊರತೆ ಕಾರಣ ನೀಡಿ ಪ್ರವೇಶಪತ್ರ ನಿರಾಕರಿಸಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.
ಈ ಹಿನ್ನೆಲೆ ವಿದ್ಯಾರ್ಥಿ ಅಭಿಷೇಕ ಇಂದು ಹಾವೇರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಣಕು ಪರೀಕ್ಷೆ ಬರೆಯುವ ಮೂಲಕ ಪ್ರತಿಭಟಿಸಿದ್ದಾನೆ. ಎಸ್ಎಫ್ಐ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ಅಭಿಷೇಕ್ಗೆ ಹಾಗೂ ಅವರ ಪೋಷಕರಿಗೆ ಸಾಥ್ ನೀಡಿದರು.
ಡಿಡಿಪಿಐ, ಎಡಿಸಿ ಭೇಟಿ, ವಿದ್ಯಾರ್ಥಿಗೆ ಭರವಸೆ: ಈ ವೇಳೆ ಡಿಡಿಪಿಐ ಸುರೇಶ ಹುಗ್ಗಿ ಮತ್ತು ಎಡಿಸಿ ವೀರಮಲ್ಲಪ್ಪ ಪೂಜಾರ್ ಸ್ಥಳಕ್ಕೆ ಆಗಮಿಸಿ, ಈ ಕುರಿತು ಬಿಇಓ ಜೊತೆ ಮಾತನಾಡಿ ಶಾಲೆಗೆ ಭೇಟಿ ನೀಡುವಂತೆ ಸೂಚಿಸಿದ್ದೇವೆ. ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ವೇಳೆ, ಪ್ರವೇಶ ಪತ್ರ ನೀಡದ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದಾರೆ. ಜೊತೆಗೆ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಬರೆಯುವುದಕ್ಕಾದರೂ ಅವಕಾಶ ಕಲ್ಪಿಸುವಂತೆ ವಿದ್ಯಾರ್ಥಿ ಮತ್ತು ಪೋಷಕರು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಎಸ್ಎಫ್ಐ ವಿದ್ಯಾರ್ಥಿ ಮುಖಂಡ ಬಸವರಾಜ್ ಪಾಲ್ಗೊಂಡಿದ್ದರು.
ಇದನ್ನೂಓದಿ:8 ತಿಂಗಳು ಕೆಲಸಕ್ಕೆ ಗೈರು ಹಾಜರಿ: ಉದ್ಯೋಗಿ ವಜಾ ಎತ್ತಿ ಹಿಡಿದ ಹೈಕೋರ್ಟ್ - High Court News