ಹಾವೇರಿ: ಬೋರ್ವೆಲ್ಗೆ ವಿದ್ಯುತ್ ಅಳವಡಿಸಲು ಕಂಬದಿಂದ ಲೈನ್ ಎಳೆಯುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿದ ಪರಿಣಾಮ ಗುತ್ತಿಗೆ ಕಾರ್ಮಿಕ ಸಾವಿಗೀಡಾಗಿರುವ ಘಟನೆ ಹಾವೇರಿ ನಗರದ ಮಣಿಗಾರ ಓಣಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಓರ್ವ ಕಾರ್ಮಿಕ ಸಾವಿಗೀಡಾಗಿದ್ದು, ಮತ್ತೊಬ್ಬ ಕಾರ್ಮಿಕ ತೀವ್ರ ಗಾಯಗೊಂಡಿದ್ದಾನೆ.
ಗುತ್ತಿಗೆ ಕಾರ್ಮಿಕ ನೌಕರ ಸುರೇಶ್ ಸಾವಿಗೀಡಾದ ದುರ್ದೈವಿ. ಮತ್ತೊರ್ವ ಕಾರ್ಮಿಕ ನಿಂಗಪ್ಪ ಎಂಬಾತ ಗಾಯಗೊಂಡಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಸುರೇಶ ಮತ್ತು ಗಾಯಗೊಂಡ ನಿಂಗಪ್ಪ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹೂವಿನ ಶಿಗ್ಲಿಯ ಗ್ರಾಮದವರು ಎಂದು ತಿಳಿದುಬಂದಿದೆ.
ವಿದ್ಯುತ್ ಆಫ್ ಮಾಡಿ ಈ ಇಬ್ಬರು ಕಾರ್ಮಿಕರು ಹೊಸ ಲೈನ್ ಎಳೆಯುವ ಕೆಲಸ ಮಾಡುತ್ತಿದ್ದರು. ದಿಢೀರ್ ವಿದ್ಯುತ್ ಪ್ರವಹಿಸಿದ ಪರಿಣಾಮ ಲೈನ್ ಎಳೆಯುವ ಗುತ್ತಿಗೆ ಕಾರ್ಮಿಕ ಕಂಬದಲ್ಲೇ ಸಾವಿಗೀಡಾಗಿದ್ದಾನೆ. ಈ ವೇಳೆ ಸ್ಥಳೀಯರಿಗೂ ಏನೂ ತೋಚದೆ ಅಸಹಾಯಕರನ್ನಾಗಿ ಮಾಡಿತು ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ. ಈ ಘಟನೆ ಕುರಿತಂತೆ ಹಾವೇರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಾಯಗೊಂಡವನ ಆರೋಗ್ಯ ವಿಚಾರಿಸಿದ ಸಚಿವರು: ವಿದ್ಯುತ್ ಅವಘಡದ ಮಾಹಿತಿ ತಿಳಿದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ನಿಂಗಪ್ಪನ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು.
ಈ ವೇಳೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ''ಎಕ್ಸಿಕ್ಯೂಟಿವ್ ಇಂಜಿನಿಯರ್, ಎಇಇ ಈಗ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ. ಹೆಸ್ಕಾಂ ಎಂಡಿಗೆ ಕರೆಯಿಸಿ, ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು'' ಎಂದು ತಿಳಿಸಿದರು.
''ಗಾಯಾಳುವಿನ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುವುದು. ಮೃತನ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಕೊಡಿಸುತ್ತೇನೆ. ಗಾಯಾಳುವಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು'' ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.
ಇದನ್ನೂಓದಿ:ರಾಯಚೂರು: ಲಾರಿಯಲ್ಲಿ ಸಾಗಿಸುತ್ತಿದ್ದ ಹಿಟಾಚಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಚಾಲಕ ಸಾವು