ಹಾವೇರಿ: ಸಿಎಂ ಸಿದ್ದರಾಮಯ್ಯ ಅವರು ಪದೇ ಪದೆ ಒಂದು ಮಾತು ಹೇಳುತ್ತಾರೆ. ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ ಅಂತಿರ್ತಾರೆ. ಆದರೆ ಶಾಂತಿಯ ತೋಟ ಕೆಲವೇ ಕೆಲವು ಜನರಿಗೆ ಮಾತ್ರ ಆಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಮಂಡ್ಯದಲ್ಲಿ ನಡೆದ ಹನುಮ ಧ್ವಜ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಭಾನುವಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಸಹ ರಾಜ್ಯದ ಹಲವು ಕಡೆ ಅಡೆತಡೆ ಆಗಿವೆ. ಕಾನೂನು ಬಾಹಿರ ಚಟುವಟಿಕೆ ಮಾಡೋರಿಗೆ ಸರ್ಕಾರ ರಕ್ಷಣೆ ಕೊಡ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ಪ್ರಮುಖ ಉದ್ದೇಶ ಓಲೈಕೆ ರಾಜಕಾರಣ. ರಾಜ್ಯದಲ್ಲಿ ದಲಿತ ಮಹಿಳೆ ಮೇಲೆ, ಅಲ್ಪಸಂಖ್ಯಾತ ಮಹಿಳೆ ಮೇಲೆ ದೌರ್ಜನ್ಯ ಆದರೂ ಕ್ರಮ ಆಗಿಲ್ಲ. ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಪ್ರತಿಶತ 30% ರಷ್ಟು ಹೆಚ್ಚಳ ಆಗಿವೆ ಎಂದು ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದರು.
ಕಾನೂನು ಕೈಗೆತ್ತಿಕೊಂಡವರು ನಿರ್ಭಿಡೆಯಿಂದ ವ್ಯವಹಾರ ಮಾಡ್ತಿದ್ದಾರೆ. ಬಿಹಾರ ತರ ಜಂಗಲ್ ರಾಜ್ ನಮ್ಮ ರಾಜ್ಯದಲ್ಲಿಯೂ ಉಂಟಾಗಿದೆ. ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ಇವರು ಎಸ್ ಐ ಟಿ ಗೆ ಕೊಟ್ಟಿಲ್ಲ. ಸರ್ಕಾರದ ವಿರುದ್ಧ ನಾವು ಹೈಕೋರ್ಟ್ ಗೆ ಹೋಗ್ತೀನಿ ಎಂದು ತಿಳಿಸಿದರು.
ಸಿದ್ದರಾಮಯ್ಯ ಅಹಿಂದ ವರ್ಗಕ್ಕೆ ಏನ್ ಮಾಡಿದ್ರು- ಬೊಮ್ಮಾಯಿ ಪ್ರಶ್ನೆ: ಚಿತ್ರದುರ್ಗದಲ್ಲಿ ನಡೆದ ಸಮಾವೇಶ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಅಹಿಂದ ವರ್ಗಗಳನ್ನೇ ಮೆಟ್ಟಿಲು ಮಾಡಿಕೊಂಡು ಎರಡು ಸಲ ಸಿಎಂ ಆದರು. ಅಹಿಂದ ಸಮುದಾಯಗಳಿಗೆ ಏನ್ ಮಾಡಿದ್ದಾರೆ. ಹಿಂದುಳಿದ ವರ್ಗ, ಎಸ್ಸಿ, ಎಸ್ಟಿ ಜನಾಂಗಕ್ಕೆ ಏನು ನ್ಯಾಯ ನೀಡಿದಿರಿ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ದಲಿತರ 11300 ಕೋಟಿ ಹಣ ಡೈವರ್ಟ್ : ದಲಿತರಿಗೆ ಮೀಸಲಿಟ್ಟ 11300 ಕೋಟಿ ರೂಪಾಯಿ ಹಣವನ್ನು ಗ್ಯಾರಂಟಿಗೆ ಡೈವರ್ಟ್ ಮಾಡಿದಿರಿ. ದಲಿತರ ಹಣ ಡೈವರ್ಟ್ ಯಾಕೆ ಮಾಡಿದ್ರಿ? ಇದರಿಂದ ದಲಿತರು ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ದಲಿತರಿಗೆ ನ್ಯಾಯ ಒದಗಿಸಿದ್ದೇ ನಾವು, ಆಡಳಿತ ನಡೆಸುತ್ತಿದ್ದಾಗ ದಲಿತರಿಗೆ ಯೋಜನೆ ಜಾರಿಗೆ ತಂದರೆ ಚುನಾವಣೆ ಸ್ಟಂಟ್ ಅಂದರು. ನಾವು ಎಸ್ಸಿ/ಎಸ್ಟಿ ಸಮುದಾಯಕ್ಕೆ ನ್ಯಾಯ ನೀಡಿದ್ದೇವೆ. ಶಿಕ್ಷಣ, ಉದ್ಯೋಗಕ್ಕಾಗಿ ನಮ್ಮ ಸರ್ಕಾರ ಕೆಲಸ ಮಾಡಿದೆ. ಆದರೆ ಕಾಂಗ್ರೆಸ್ ಸರ್ಕಾರ ದಲಿತರನ್ನು ಮೆಚ್ಚಿಸಲು ಬರೀ ಸಮಾವೇಶ ಮಾಡುತ್ತಿದೆ ಎಂದು ಬೊಮ್ಮಾಯಿ ಹರಿಹಾಯ್ದರು.
ಹಾವೇರಿ ಲೋಕಸಭೆಗೆ ನಾನೂ ಟಿಕೆಟ್ ಆಕಾಂಕ್ಷಿ ಅಲ್ಲ: ಜನಾರ್ದನ ರೆಡ್ಡಿ ಬಿಜೆಪಿಗೆ ಬರಲು ಬೆಂಬಲ ವ್ಯಕ್ತಪಡಿಸಿರುವ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ಜನಾರ್ದನರೆಡ್ಡಿ ಮೊದಲು ನಮ್ಮ ಬಿಜೆಪಿಯಲ್ಲಿ ಇದ್ದವರು, ಸಹಜವಾಗಿಯೇ ಆ ಮಾತು ಹೇಳಿರ್ತಾರೆ ಎಂದರು. ಇನ್ನು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ನಾನು ಟಿಕೆಟ್ ಆಕಾಂಕ್ಷಿ ಅಲ್ಲ. ನಾನು ಬಹಳ ಸ್ಪಷ್ಟವಾಗಿ ಹೇಳಿದ್ದೀನಿ. ನಾನು ಅಪೇಕ್ಷಿತ ಅಲ್ಲ, ಅದೂ ಎಲ್ಲ ಮಾಧ್ಯಮಗಳ ಸೃಷ್ಟಿ. ಯಾರಿಗೇ ಟಿಕೆಟ್ ನೀಡಿದರೂ ಎಲ್ಲರೂ ಸೇರಿಕೊಂಡು ಅವರನ್ನು ಗೆಲ್ಲಿಸುತ್ತೇವೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಎಸ್ಟಿ ಸೋಮಶೇಖರ ಮತ್ತು ಶಿವರಾಂ ಹೆಬ್ಬಾರ್ ಗೈರು ಬಗ್ಗೆ ಮಾತನಾಡಿದ ಬೊಮ್ಮಾಯಿ, ಈ ಮುಖಂಡರು ಕಾರ್ಯಕಾರಿಣಿಗೆ ಗೈರಾಗಿದ್ದರೂ ಸಹ, ಅವರೆಲ್ಲ ಪ್ರಧಾನಿ ನರೇಂದ್ರಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಬಯಸಿದ್ದಾರೆ ಎಂದರು.
ವಿಶೇಷಚೇತನ ವಿದ್ಯಾರ್ಥಿಗಳೊಂದಿಗೆ ಜನ್ಮದಿನ ಆಚರಿಸಿಕೊಂಡ ಬೊಮ್ಮಾಯಿ: ಮಾಧ್ಯಮಗೋಷ್ಟಿಗೂ ಮುನ್ನ ಮೊದಲು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾವೇರಿ ನಗರಸಭೆ 64 ಪೌರ ಕಾರ್ಮಿಕರನ್ನು ಸನ್ಮಾನಿಸಿದರು. ನಂತರ ಪೌರ ಕಾರ್ಮಿಕರಿಂದ ಸನ್ಮಾನ ಸ್ವೀಕರಿಸಿದ ಅವರು, ಪೌರ ಕಾರ್ಮಿಕರ ಕಾರ್ಯಗಳಿಗೆ ಶ್ಲಾಘನೆ ವ್ಯಕ್ತಪಡಿಸಿದರು. ನಂತರ ಹಾವೇರಿ ನಗರದ ಜ್ಯೋತಿ ವಿಶೇಷಚೇತನ ವಿದ್ಯಾರ್ಥಿಗಳ ಶಾಲೆಗೆ ಭೇಟಿ ನೀಡಿದ ಬೊಮ್ಮಾಯಿ ಅವರು, ವಿದ್ಯಾರ್ಥಿಗಳ ಜೊತೆಗೆ ಕೇಕ್ ಕತ್ತರಿಸಿ ತಮ್ಮ ಜನ್ಮದಿನ ಆಚರಿಸಿಕೊಂಡರು.
ಇದನ್ನೂಓದಿ : ಜಗದೀಶ್ ಶೆಟ್ಟರ್ ಹುಬ್ಬಳ್ಳಿಯ ನಿತೀಶ್ ಕುಮಾರ್: ಮೋಹನ್ ಲಿಂಬಿಕಾಯಿ ಟೀಕೆ