ಮಂಡ್ಯ: ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿವಾದ ತಾರಕಕ್ಕೇರಿದ್ದು, ಇಂದು ರಾಜ್ಯಾದ್ಯಂತ ಹೋರಾಟದ ರೂಪ ಪಡೆದಿದೆ. ಹನುಮ ಧ್ವಜ ತೆರವು ವಿರೋಧಿಸಿ ಬಿಜೆಪಿಯವರು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದಾರೆ. ಈ ಹಿನ್ನೆಲೆ ಇಂದು ಬೆಳಗ್ಗೆ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಿಂದ ಬಿಜೆಪಿ ಬೃಹತ್ ಪಾದಯಾತ್ರೆ ಆರಂಭಿಸಿದೆ. ಬೆಳಗ್ಗೆ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಹುಲಿವಾನ, ಸಾತನೂರು, ಚಿಕ್ಕಮಂಡ್ಯ ಮಾರ್ಗವಾಗಿ ಮಂಡ್ಯದ ಶ್ರೀ ಕಾಳಿಕಾಂಭ ದೇವಾಲಯಕ್ಕೆ ಈ ಪಾದಯಾತ್ರೆ ಸಾಗಲಿದೆ. ಬಳಿಕ ಕಾಳಿಕಾಂಭ ದೇವಾಲಯದಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ಮುಂದುವರೆಯಲಿದೆ. ಬಿಜೆಪಿ ಹೋರಾಟಕ್ಕೆ ಜೆಡಿಎಸ್ ನಾಯಕರು ಕೂಡ ಕೈಜೋಡಿಸಿದ್ದು, ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಮಧ್ಯೆ ಜೆಡಿಎಸ್ ಹಾಗೂ ಬಿಜೆಪಿ ರಾಜ್ಯ ನಾಯಕರು ಕೂಡ ಪಾದಯಾತ್ರೆಗೆ ಸೇರಿಕೊಳ್ಳಲಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಸಿ ಟಿ ರವಿ ಹಾಗೂ ಶಾಸಕ ಜನಾರ್ದನ ರೆಡ್ಡಿ ಭಾಗಿಯಾಗಲಿದ್ದಾರೆ.
ಸುಮಾರು 14 ಕಿ.ಮೀ ಹಿಂದೂ ಕಾರ್ಯಕರ್ತರ ಪಾದಯಾತ್ರೆ ಸಾಗಲಿದ್ದು, ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಹನುಮ ಧ್ವಜ ಪುನರ್ ಸ್ಥಾಪನೆಗೆ ಆಗ್ರಹಿಸಲಿದ್ದಾರೆ. ಪಾದಯಾತ್ರೆಯಲ್ಲಿ ಜೆಡಿಎಸ್-ಬಿಜೆಪಿಯ ಕಾರ್ಯಕರ್ತರು ಸೇರಿ ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದಾರೆ. ಮಾಜಿ ಸಚಿವ ಕೆ ಸಿ ನಾರಾಯಣಗೌಡ, ಸಿ ಎಸ್ ಪುಟ್ಟರಾಜು, ಮಾಜಿ ಶಾಸಕರಾದ ಪ್ರೀತಂ ಗೌಡ, ಸುರೇಶ್ ಗೌಡ, ಡಿ ಸಿ ತಮ್ಮಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಪಾದಯಾತ್ರೆ ವೇಳೆ ಅಹಿತಕರ ಘಟನೆ ನಡೆಯದಂತೆ ಖಾಕಿ ಕಟ್ಟೆಚ್ಚರ ವಹಿಸಿದ್ದು, ಡಿಸಿ ಕಚೇರಿ ಬಳಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಮಂಡ್ಯ ಎಸ್‌ಪಿ ಎನ್. ಯತೀಶ್ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಎಸ್‌ಪಿ, ಎಎಸ್‌ಪಿ, ಇನ್ಸ್ಪೆರ್ಗಳು ಸೇರಿ 400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಸರ್ಕಾರಿ ಜಾಗದಲ್ಲಿ ಬೇರೆ ಧ್ವಜ ಹಾರಿಸಲು ಅವಕಾಶವಿಲ್ಲ: ಸಚಿವ ಚಲುವರಾಯಸ್ವಾಮಿ