ಹುಬ್ಬಳ್ಳಿ: ರಾಜ್ಯದಲ್ಲಿ ಗೃಹ ಬಳಕೆದಾರರಿಗೆ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಕಲ್ಪಿಸುವ ಗೃಹ ಜ್ಯೋತಿ ಯೋಜನೆ ಜಾರಿಯಾಗಿ ಒಂದು ವರ್ಷವಾದ ಬೆನ್ನಲ್ಲೇ ವಿದ್ಯುತ್ ಸರಬರಾಜು ಕಂಪನಿಗಳು ತಮ್ಮ ಗ್ರಾಹಕರಿಗೆ ಡಿ-ಲಿಂಕ್ ಸೌಲಭ್ಯ ಕಲ್ಪಿಸಿವೆ. ಮನೆ ಬದಲಾಯಿಸಿದ ನಂತರ ಯೋಜನೆಯ ಲಾಭ ಪಡೆಯಲು ಹೊಸ ಮನೆಯ ಆರ್.ಆರ್.ಸಂಖ್ಯೆಯನ್ನು ಲಿಂಕ್ ಮಾಡುವ ಸೌಲಭ್ಯ ಇದಾಗಿದೆ.
ಬಾಡಿಗೆ ಮನೆ ಅಥವಾ ಯಾವುದೇ ಕಾರಣಕ್ಕೆ ಮನೆ ಬದಲಿಸುವ ಸಂದರ್ಭದಲ್ಲಿ ಈಗಾಗಲೇ ನೋಂದಣಿಗೊಂಡಿರುವ ಸಂಖ್ಯೆಯನ್ನು (ಆರ್.ಆರ್.ನಂಬರ್‌ಗೆ ಆಧಾರ ಜೋಡಣೆ) ಡಿ-ಲಿಂಕ್ ಮಾಡಿ. ಮತ್ತೊಂದು ಮನೆಯ ಆರ್.ಆರ್.ಸಂಖ್ಯೆಯೊಂದಿಗೆ ನೋಂದಣಿ ಮಾಡಿಸಿಕೊಂಡು ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಬಹುದು.
ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ 2024ರ ಜುಲೈ ಅಂತ್ಯಕ್ಕೆ ಒಟ್ಟು 33.25 ಲಕ್ಷ ಜನರು ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಅವುಗಳ ಪೈಕಿ 32.67 ಲಕ್ಷ ಜನರು ಸದರಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ.
ಡಿ-ಲಿಂಕ್ ಮಾಡುವುದು ಹೇಗೆ?: ಗ್ರಾಹಕರು https://sevasindhu.karnataka.gov.in/GruhaJyothi_Delink/GetAadhaarData.aspx ಲಿಂಕ್ ಮೂಲಕ ನೋಂದಾಯಿಸಿ ಡಿ-ಲಿಂಕ್ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಗೃಹ ಜ್ಯೋತಿ ಪೋರ್ಟಲ್ ಓಪನ್ ಆಗದೇ ಇದ್ದಲ್ಲಿ, Cache Memory Clear ಮಾಡಿ. ನಂತರ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ ಸೇವೆ ಪಡೆಯುವಂತೆ ಸಲಹೆ ನೀಡಿದೆ.
ಮನೆ ಬದಲಾಯಿಸಿದಾಗ ಈ ಹಿಂದೆ ಆ ಮನೆಯಲ್ಲಿ ವಾಸವಿದ್ದವರ ಆಧಾರ್ ಸಂಖ್ಯೆ ಜೊತೆ ಆರ್.ಆರ್ ನಂಬರ್ ಲಿಂಕ್ ಆಗಿದೆಯೇ ಅಥವಾ ಅವರು ಡಿ-ಲಿಂಕ್ ಮಾಡಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ಆಗಿರದಿದ್ದರೆ ಡಿ-ಲಿಂಕ್ ಮಾಡಿ, ಹೊಸದಾಗಿ ಆರ್.ಆರ್. ನಂಬರ್‌ಗೆ ಆಧಾರ್ ಲಿಂಕ್ ಮಾಡಬೇಕು.
ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟನೆ: "ರಾಜ್ಯದ 1.56 ಕೋಟಿ ಜನರು ಗೃಹ ಜ್ಯೋತಿ ಯೋಜನೆಯ ಲಾಭ ಪಡೆದಿದ್ದಾರೆ. ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ಆದರೆ, ಮನೆ ಬದಲಿಸುವಾಗ ಈ ಸೌಲಭ್ಯ ಮುಂದುವರಿಸಲು ಡಿ-ಲಿಂಕ್ ಸೌಲಭ್ಯಬೇಕೆಂದು ಜನ ಕೋರಿದ್ದರು. ಈಗ ಈ ಸೌಲಭ್ಯವನ್ನು ಒದಗಿಸಲಾಗಿದ್ದು, ಸಾಫ್ಟ್‌ವೇರ್‌ನಲ್ಲಿ ಬದಲಾವಣೆ ಮಾಡಲಾಗಿದೆ. ನುಡಿದಂತೆ ನಡೆದಿದ್ದೇವೆ ಎಂಬ ಸಾರ್ಥಕ ಭಾವ ನಮಗಿದೆ" ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಹಕರು ಲಾಭ ಪಡೆದುಕೊಳ್ಳುವಂತೆ ಹೆಸ್ಕಾಂ ಎಂಡಿ ಕರೆ: "ಡಿ-ಲಿಂಕ್‌ಗೆ ಅವಕಾಶ ಕಲ್ಪಿಸಿಕೊಡುವಂತೆ ಗ್ರಾಹಕರಿಂದ ತುಂಬಾ ಬೇಡಿಕೆಯಿತ್ತು. ಈಗ ಸಾಫ್ಟ್‌ವೇರ್‌ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಗ್ರಾಹಕರು ಇದರ ಲಾಭ ಪಡೆಯಬಹುದು ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ
ವೈಶಾಲಿ ಎಂ.ಎಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.