ಮಂಗಳೂರು (ದಕ್ಷಿಣ ಕನ್ನಡ): 'ಕಾಂತಾರ'ವೆಂಬ ಅದ್ಭುತ ಸಿನಿಮಾದ ಸಾರಥ್ಯ ವಹಿಸಿದ್ದ ರಿಷಬ್ ಶೆಟ್ಟಿ ಇತ್ತೀಚೆಗಷ್ಟೇ 'ಅತ್ಯುತ್ತಮ ನಟ' ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಮಂಗಳವಾರ ನವದೆಹಲಿಯಲ್ಲಿ ನಡೆದ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಭಾಗಿಯಾದ ರಿಷಬ್-ಪ್ರಗತಿ ದಂಪತಿ ಇಂದು ಕರುನಾಡಿಗೆ ವಾಪಸಾಗಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿ ಬುಧವಾರ ಮಂಗಳೂರಿಗೆ ಮೊದಲ ಬಾರಿಗೆ ಆಗಮಿಸಿದ ಕಾಂತಾರ ಸ್ಟಾರ್ಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು.
ಗ್ರ್ಯಾಂಡ್ ವೆಲ್ಕಂ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ರಿಷಬ್ ಶೆಟ್ಟಿ, ''ಕಾಂತಾರ ಮಂಗಳೂರಿನಲ್ಲಿ ಶುರುವಾದ ಸಿನಿಮಾ. ಪ್ರಶಸ್ತಿ ಪಡೆದು ನೇರವಾಗಿ ಇಲ್ಲಿಗೆ ಬರುವಂತಾಗಿದ್ದು ನನ್ನ ಪುಣ್ಯ. ಈ ಪ್ರಶಸ್ತಿಯನ್ನು ದೈವಕ್ಕೆ, ದೈವ ನರ್ತಕರಿಗೆ ಹಾಗೂ ಅಪ್ಪು ಸರ್ ಅವರಿಗೆ ಸಮರ್ಪಿಸುತ್ತೇನೆ. ಪ್ರಶಸ್ತಿಯನ್ನು ದೈವದ ಪಾದಕ್ಕೆ ಇಟ್ಟು ನನ್ನ ಕೆಲಸವನ್ನು ಮುಂದುವರೆಸುತ್ತೇನೆ'' ಎಂದು ತಿಳಿಸಿದರು.
''ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನಮ್ಮ ಇಡೀ ತಂಡಕ್ಕೆ ಸಲ್ಲಬೇಕು. ದೈವದ ಆಶೀರ್ವಾದವಿಲ್ಲವಾಗಿದ್ದರೆ ಸಿನಿಮಾ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಸಿನಿಮಾ ಮಾಡುವಾಗ ಪ್ರಶಸ್ತಿ ಬರುತ್ತದೆ ಎಂದುಕೊಂಡಿರಲಿಲ್ಲ. ಎಲ್ಲರ ಪ್ರೀತಿಯಿಂದ ಇದು ಸಾಧ್ಯವಾಗಿದೆ. ಇನ್ನು, ಕಾಂತಾರ ಪ್ರೀಕ್ವೆಲ್ ಶೂಟಿಂಗ್ ನಡೆಯುತ್ತಿದೆ. ಶೀಘ್ರದಲ್ಲೇ ನಿರ್ಮಾಪಕರು ರಿಲೀಸ್ ಡೇಟ್ ಅನೌನ್ಸ್ ಮಾಡಲಿದ್ದಾರೆ. ಕಾಂತಾರ ಚಾಪ್ಟರ್ ಒನ್ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಈ ಹಿಂದೆ ಕಾಂತಾರಕ್ಕೆ ಎಷ್ಟು ಹೆಮ್ಮೆ ಪಟ್ಟಿದ್ದೀರೋ ಅದಕ್ಕಿಂತ ಹೆಚ್ಚು ಹೆಮ್ಮೆ ಪಡುತ್ತೀರ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಿಗ್ ಬಾಸ್ ಬಿಟ್ಟು ಹೋಗಲ್ಲವೆಂದ ಜಗದೀಶ್: ನಾಮಿನೇಷನ್‍ನಿಂದ ಸೇಫ್ ಆಗೋರು ಯಾರು?
ಇನ್ನು ಕಾಂತಾರ ಸಿನಿಮಾ ಬಳಿಕ ದೈವಾರಾಧನೆಗೆ ಅಪಹಾಸ್ಯ ಮಾಡಲಾಗುತ್ತಿದೆ ಎಂಬ ಮಾತು ಕೇಳಿಬಂದಿದೆ ಎಂಬ ಈ ಮಾತಿಗೆ ಪ್ರತಿಕ್ರಿಯಿಸಿದ ನಟ, ''ಕಾಂತಾರ ಬರುವ ಮೊದಲೇ ಸುಮಾರು ಸಿನಿಮಾಗಳಲ್ಲಿ ದೈವರಾಧನೆಯು ಬಂದಿದೆ. ಚೋಮನ ದುಡಿಯಿಂದ ಹಿಡಿದು ಅನೇಕ ಪುಸ್ತಕಗಳಲ್ಲೂ ದೈವಾರಾಧನೆ ವಿಷಯ ಬಂದಿದೆ. ನಾವು ಮೊದಲ ಬಾರಿಗೆ ಮಾಡಲಿಲ್ಲ. ಸಿನಿಮಾ ಬಂದು ತುಂಬಾ ಪಾಪ್ಯುಲರ್ ಆದಾಗ ಮೂಲ ಸಂಸ್ಕೃತಿ ಬಗ್ಗೆ ಗೊತ್ತಿಲ್ಲದವರು ಈ ರೀತಿ ಮಾಡುತ್ತಾರೆ. ಬೇರೆ ಬೇರೆ ಸ್ಟೇಜ್ಗಳಲ್ಲಿ, ಕಾರ್ಯಕ್ರಮಗಳಲ್ಲಿ ಹಾಕುವಾಗ ನಮಗೆ ನೋವಾಗುತ್ತದೆ ಎಂದರು.
ಇದನ್ನೂ ಓದಿ: ರತನ್ ಟಾಟಾ ನಿಧನ: ಶಿವಣ್ಣ, ರಿಷಬ್ ಶೆಟ್ಟಿ, ಉಪ್ಪಿ ಸೇರಿದಂತೆ ಸಿನಿಗಣ್ಯರಿಂದ ಸಂತಾಪ
ನಾನು ಗುತ್ತಿನ ಮನೆಯವನಾಗಿ, ದೈವದ ಮೇಲೆ ನಂಬಿಕೆ ಇಟ್ಟು, ಪೂಜೆ ಮಾಡಿಕೊಂಡು ಬಂದವನು. ನಾವು ಸಿನಿಮಾ ಮಾಡಬೇಕಾದರೆ ದೈವ ಕಟ್ಟುವ ಸಮುದಾಯದವರ ಸಹಾಯ ಪಡೆದಿದ್ದೇವೆ. ಅಷ್ಟು ಶ್ರದ್ಧೆಯಿಂದ ಅದನ್ನು ಮಾಡಿಕೊಂಡು ಬಂದಿದ್ದೇವೆ. ನಮಗೆ ಕೇವಲ ಅದೊಂದು ಸಿನಿಮಾ ಅಲ್ಲ. ದೈವದ ಸೇವೆ ಅನ್ನೋ ರೀತಿ ಮಾಡಿಕೊಂಡು ಬಂದಿದ್ದೇವೆ. ಹೊರಗಿನವರು ಇದನ್ನು ಅಪಹಾಸ್ಯ ಮಾಡಿದಾಗ ನಂಬಿದವರಿಗೆ ಬೇಸರವಾಗುವುದು ಸಹಜ. ಯಾರೂ ದೈವವನ್ನು ಸ್ಟೇಜ್ ಮೇಲೆ ಅನುಕರಣೆ ಮಾಡಬೇಡಿ ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.