ದಾವಣಗೆರೆ: ಈ ಕಾಲದಲ್ಲಿ ಮದುವೆ ಬಗ್ಗೆ ಕನಸು ಕಾಣುವ ಯುವತಿಯರ ಬದಲಿಗೆ, ಸ್ವಲ್ಪ ಡಿಫರೆಂಟ್ ಎಂಬಂತೆ ಇಲ್ಲಿ ಇಬ್ಬರು ಜೈನ್ ಸಮುದಾಯದ ಯುವತಿಯರು ಸನ್ಯಾಸತ್ವ ಪಡೆಯಲು ಮುಂದಾಗಿದ್ದಾರೆ.
ದಾವಣಗೆರೆಯ 26 ವರ್ಷದ ಮಾನಸಿ ಕುಮಾರಿ ಹಾಗೂ ಬೆಳಗಾವಿ ಜಿಲ್ಲೆಯ ಗೋಕಾಕ್ನ ಮುಮುಕ್ಷ ಭಕ್ತಿ ಕುಮಾರಿ ಕುಟುಂಬ, ಆಸ್ತಿ, ಸಂಪತ್ತು ತ್ಯಜಿಸಿ ಸನ್ಯಾಸತ್ವಕ್ಕೆ ಮುಂದಾಗಿದ್ದಾರೆ. ಇವರಿಗೆ ವಿಶೇಷವಾಗಿ ಮೆರವಣಿಗೆ ಮಾಡಿ ಸನ್ಯಾಸತ್ವದ ಕಾರ್ಯಕ್ರಮ ಕೂಡ ಮಾಡಲಾಯಿತು. ಸನ್ಯಾಸತ್ವ ಕಾರ್ಯಕ್ರಮದಲ್ಲಿ ರುಚಿ ರುಚಿಯಾದ ಊಟ ಕೂಡ ಹಾಕಿಸಲಾಯಿತು.
ಮಹಾವೀರರ ಸಂದೇಶಕ್ಕೆ ಮನಸೋತು ಸನ್ಯಾಸತ್ವ: ಹೌದು ಜೈನ ಧರ್ಮದ 24ನೇ ಅಂದರೇ ಕೊನೆಯ ತೀರ್ಥಂಕರರಾಗಿರುವ ಭಗವಾನ್ ಮಹಾವೀರ್ ಅವರು ಅಹಿಂಸ ಪರಮೋಧರ್ಮ ಸಂದೇಶ ಕೇಳಿ ಈ ಇಬ್ಬರು ಯುವತಿಯರು ಸನ್ಯಾಸತ್ವಕ್ಕೆ ಮುಂದಾಗಿದ್ದಾರೆ. ಅಹಿಂಸಾ ಜೀವನ ಪ್ರಯೋಗ ಮಾಡಲು ಹೋಗಿ ಮನಸೋತು ಈ ಸನ್ಯಾಸತ್ವ ದೀಕ್ಷೆಗೆ ಮುಂದಾಗಿದ್ದೇನೆ ಎಂದು ಮಾನಸಿ ಕುಮಾರಿ ಹೇಳಿಕೊಂಡಿದ್ದಾರೆ.
ಪದವೀಧರರಾಗಿರುವ ಯುವತಿಯರು: ಸನ್ಯಾಸತ್ವಕ್ಕೆ ಮುಂದಾಗಿರುವ ಯುವತಿಯರು ಜೈನ ಸಮುದಾಯದವರಾಗಿದ್ದು, ಉನ್ನತ ಪದವೀಧರರಾಗಿದ್ದಾರೆ. ಯುವತಿ ಮಾನಸಿ ಕುಮಾರಿ ಮಾಸ್ಟರ್ ಆಫ್ ಸೈಕಾಲಜಿ ಪದವೀಧರೆ. ಗೋಕಾಕ್ ಮೂಲದ ಮುಮುಕ್ಷ ಭಕ್ತಿ ಕುಮಾರಿ ಬಿಎ, ಎಲ್ಎಲ್ ಬಿ ಪದವೀಧರೆ. ಆದರೂ ತಮ್ಮ ಆಸ್ತಿ ಪಾಸ್ತಿ, ಸಂಪತ್ತು ಅಲ್ಲದೆ, ಇಡೀ ಕುಟುಂಬವನ್ನು ತ್ಯಜಿಸಿ ಈ ನಿರ್ಧಾರ ಮಾಡಿದ್ದಾರೆ. ಮುಂದಿನ ತಿಂಗಳು 17ರಂದು ಜಾರ್ಖಂಡ್ ರುಜುಬಾಲಿಕ ಎಂಬಲ್ಲಿ ಸನ್ಯಾಸತ್ವ ಸ್ವೀಕಾರಕ್ಕೆ ಸಿದ್ಧತೆ ನಡೆಸಲಾಗಿದೆ.
ಯುವತಿಯರಿಗೆ ದಾವಣಗೆರೆಯಲ್ಲಿ ಅದ್ಧೂರಿ ಮೆರವಣಿಗೆ: ಸನ್ಯಾಸತ್ವ ಸ್ವೀಕರಿಸಲು ಮುಂದಾಗಿರುವ ಯುವತಿಯರಿಗೆ ದಾವಣಗೆರೆಯಲ್ಲಿ ಅದ್ಧೂರಿ ಮೆರವಣಿಗೆ ಕೂಡ ಮಾಡಲಾಯಿತು. ಇಬ್ಬರು ಕುಟುಂಬಸ್ಥರು ಹಾಗೂ ಜೈನ ಸಮುದಾಯದಿಂದ ಔತಣ ಕೂಟ ಆಯೋಜಿಸಿ ಅದ್ದೂರಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ದಾವಣಗೆರೆಯ ಪ್ರಮುಖ ಬೀದಿಗಳಲ್ಲಿ ಯುವತಿಯರ ಮೆರವಣಿಗೆ ಮಾಡಲಾಗಿದ್ದು, ಯುವತಿಯರ ದೀಕ್ಷಾ ಮೆರವಣಿಗೆಯಲ್ಲಿ ಜೈನ ಸಮಾಜದ ಬಂಧುಗಳು ಕುಟುಂಬಸ್ಥರು ಭಾಗಿಯಾಗಿದ್ದರು.
ದಾವಣಗೆರೆಯಲ್ಲಿ ಒಟ್ಟು 64 ಜನ ಯುವತಿಯರು - ಯುವಕರು ಸನ್ಯಾಸ ಧೀಕ್ಷೆ: ದಾವಣಗೆರೆಯಲ್ಲಿ ಜೈನ ಸನ್ಯಾಸದತ್ತ ಯುವಕ, ಯುವತಿಯರು ಹೆಚ್ಚು ಆಸಕ್ತರಾಗಿದ್ದಾರೆ. ಇದುವರೆಗೆ ದಾವಣಗೆರೆಯಲ್ಲಿ ಒಟ್ಟು 64 ಜನ ಯುವತಿ, ಯುವಕರು ಸನ್ಯಾಸ ಧೀಕ್ಷೆ ಪಡೆದು ಸನ್ಯಾಸಿ ಜೀವನದಲ್ಲಿ ಮಗ್ನರಾಗಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಬಿಡಿಎ ಮಾದರಿಯಲ್ಲೇ ಅಪಾರ್ಟ್ಮೆಂಟ್ ನಿರ್ಮಿಸಲು ಮುಂದಾದ ದುಡಾ