ಬೆಂಗಳೂರು: ಐಹೊಳೆಯ ಪುರಾತನ ದೇವಾಲಯ ಹಾಗೂ ಸ್ಮಾರಕಗಳ ನವೀಕರಣ ಕಾರ್ಯಕ್ಕಾಗಿ ಧರ್ಮಸ್ಥಳ ಮಂಜುನಾಥೇಶ್ವರ ಟ್ರಸ್ಟ್ ಜೊತೆ ರಾಜ್ಯ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ. ವಿಧಾನಸೌಧದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ.ಪಾಟೀಲ್ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಐಹೊಳೆ ಒಪ್ಪಂದ ಆಗಿದೆ. ಮೂರು ದೇವಸ್ಥಾನಗಳ ಸಂಕೀರ್ಣ ಹಾಗೂ 5 ಸ್ಮಾರಕಗಳ ನವೀಕರಣ ಮಾಡಲು ಮಂಜುನಾಥೇಶ್ವರ ಟ್ರಸ್ಟ್, ಪುರಾತತ್ವ ಇಲಾಖೆ ಹಾಗೂ ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರಗಳ ನಡುವೆ ತ್ರಿಪಕ್ಷೀಯ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, ''ಸ್ಮಾರಕ ದತ್ತಿ ಕಾರ್ಯಕ್ರಮದ ಜೊತೆಗೆ ಸ್ಮಾರಕ ದರ್ಶನ ಕಾರ್ಯಕ್ರಮವನ್ನೂ ಪ್ರಾರಂಭಿಸಿದ್ದೇವೆ. 2ನೇ ಹಂತದ ಪ್ರವಾಸದ ವೇಳೆ ಐಹೊಳೆ ವೀಕ್ಷಿಸಲಾಗಿದೆ. ಬಸವಣ್ಣನವರ ಜನ್ಮಸ್ಥಳ, ಶಿರೋಳದ ದೊಡ್ಡ ದೇವಸ್ಥಾನಗಳ ಸಂಕೀರ್ಣಗಳನ್ನೂ ನೋಡಿದ್ದೇವೆ. ಬಾಗಲಕೋಟೆಯ ಐಹೊಳೆಯನ್ನು ವೀಕ್ಷಿಸಿದಾಗ ಯಾರಿಗೂ ಖುಷಿ ಇರಲಿಲ್ಲ. 120 ಸ್ಮಾರಕಗಳಿದ್ದು, 50 ಸ್ಮಾರಕಗಳನ್ನು ಕೇಂದ್ರ ಸರ್ಕಾರವು ಉತ್ತಮವಾಗಿ ನೋಡಿಕೊಳ್ಳುತ್ತಿದೆ. ಆದರೆ, ಸುಮಾರು 60-70 ಸ್ಮಾರಕಗಳು ಬೇಸರ ತರುವ ಸ್ಥಿತಿಯಲ್ಲಿವೆ. ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಅವುಗಳನ್ನು ಸಂರಕ್ಷಣೆ ಮಾಡಲಾಗಿಲ್ಲ'' ಎಂದು ವಿಷಾದ ವ್ಯಕ್ತಪಡಿಸಿದರು.
''ನಾವೆಲ್ಲರೂ ಇತಿಹಾಸ ಸಂರಕ್ಷಣೆ ಮಾಡಬೇಕು. ಆದರೆ, ಐಹೊಳೆಯಲ್ಲಿ ಅದು ಸಾಧ್ಯವಾಗಿಲ್ಲ. ಸ್ಮಾರಕಗಳು ಶಿಥಿಲಾವಸ್ಥೆ ತಲುಪಿವೆ. ಜನರು ತಿಪ್ಪೆ ಹಾಕುವುದು, ದನ-ಕರು ಕಟ್ಟುವುದು ಹಾಗೂ ಅನೇಕರು ಅಲ್ಲಿಯೇ ವಾಸವಾಗಿದ್ದಾರೆ. ಐಹೊಳೆ ತನ್ನ ಮೂಲ ಹಿರಿಮೆಯಂತಾಗಬೇಕೆಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪುನರ್ ಸ್ಥಾಪನೆ, ಸಂರಕ್ಷಣೆ ಮಾಡಲು ಸರ್ಕಾರ ಸಿದ್ಧವಾಗಿದೆ. ಪುನರ್ ಅಭಿವೃದ್ಧಿ ಮಾಡುವ ಸ್ಥೈರ್ಯ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಮಾತ್ರ ಇದೆ. ಹಾಗಾಗಿ, ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ಒಪ್ಪಿಕೊಂಡಿದ್ದಾರೆ'' ಎಂದು ಹೇಳಿದರು.
ಎರಡೂವರೆ ವರ್ಷದಲ್ಲಿ ಪುನರ್‌ನಿರ್ಮಾಣ ಕಾರ್ಯ- ಹೆಗ್ಗಡೆ: ಇದೇ ವೇಳೆ ಮಾತನಾಡಿದ ವೀರೇಂದ್ರ ಹೆಗ್ಗಡೆ, ''ನಮಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. 1999ರಲ್ಲಿ ಅನೇಕ ಕಡೆ ಹೋದಾಗ ಸುಂದರವಾಗಿದ್ದ ಕಲೆಗಳು ಈಗ ಶಿಥಿಲಾವಸ್ಥೆ ತಲುಪಿವೆ. ಹಾಳಾಗಿ ಹೋಗಲಿ ಅಂತ ಬಿಟ್ಟುಬಿಟ್ಟಿದ್ದಾರೆ. ಹಿಂದೆ ಯಾವ ರೀತಿ ಇತ್ತೋ, ಅದರಂತೆ ಮಾಡಲು ನಿರ್ಧಾರ ಮಾಡಿದ್ದೇವೆ. ಜೀರ್ಣೋದ್ಧಾರ ಆಗಿದೆ ಎಂದು ಗೊತ್ತಾಗಬಾರದು, ಹಾಗೆ ಮಾಡಿದ್ದೆವು. ಅಲ್ಲೇ ಬಿದ್ದಿದ್ದ ಎಲ್ಲಾ ಕಲ್ಲುಗಳನ್ನು ಎತ್ತಿ ನಿಲ್ಲಿಸಿದ್ದೆವು. 1999ರಿಂದ ಇಲ್ಲಿಯವರೆಗೂ 292 ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದ್ದೇವೆ. ಎರಡೂವರೆ ವರ್ಷಗಳಲ್ಲಿ ಈ ಪುನರ್ ನಿರ್ಮಾಣ ಕಾರ್ಯ ಮುಗಿಯಲಿದೆ'' ಎಂದರು.
''ಸರ್ಕಾರ ಅಲ್ಲಿ ವಾಸವಾಗಿರುವ ಜನರನ್ನು ಯೋಗ್ಯ ಸ್ಥಳಕ್ಕೆ ಸ್ಥಳಾಂತರ ಮಾಡಬೇಕಿದೆ. ವಿದೇಶಗಳಿಗೆ ಹೋದಾಗ ನಮ್ಮಲ್ಲಿ ಇದಕ್ಕಿಂತ ಉತ್ತಮ ಸ್ಮಾರಕ ಇದೆ ಅಂತ ನಮಗೆ ಅನ್ನಿಸುತ್ತದೆ. ಆದರೆ, ಅದನ್ನು ನಿರ್ವಹಣೆ ಮಾಡುತ್ತಿಲ್ಲ. ಹೋಟೆಲ್ ಎಲ್ಲವನ್ನೂ ಮಾಡಿದರೆ, ಟೂರಿಸಂ ಮತ್ತಷ್ಟು ಬೆಳೆಯುತ್ತದೆ. ಎಷ್ಟೇ ಕ್ಲಿಷ್ಟ ಪರಿಸ್ಥಿತಿ ಇದ್ದರೂ ಪುನರ್ ನಿರ್ಮಾಣ ಮಾಡುತ್ತೇವೆ. ಒತ್ತುವರಿ ತೆರವು ಮಾಡಿಕೊಟ್ಟರೆ ಶೀಘ್ರವೇ ಕಾರ್ಯಾರಂಭ ಆಗಲಿದೆ'' ಎಂದು ತಿಳಿಸಿದರು.
ಇದನ್ನೂ ಓದಿ: ಮಹಾಶಿವರಾತ್ರಿ ಪ್ರಯುಕ್ತ ಕೆಎಸ್ಆರ್ಟಿಸಿಯಿಂದ 1,500 ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ