ಬೆಂಗಳೂರು: ಜಾತಿ ನಿಂದನೆ ಆರೋಪದಡಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ನಿರ್ದೇಶಕರು ಸೇರಿದಂತೆ 18 ಮಂದಿಯ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ಎಫ್‌ಐಆರ್ ದಾಖಲಾಗಿದೆ.
ಪ್ರೊಫೆಸರ್ ಡಿ.ಸಣ್ಣ ದುರ್ಗಪ್ಪ ಎಂಬವರು ದೂರು ನೀಡಿದ್ದಾರೆ. ಈ ದೂರಿನನ್ವಯ ಐಐಎಸ್‌ಸಿ ನಿರ್ದೇಶಕ ಪ್ರೊ.ಗೋವಿಂದ ರಂಗರಾಜನ್, ಶ್ರೀಧರ್ ವಾರಿಯರ್, ಕ್ರಿಸ್ ಗೋಪಾಲಕೃಷ್ಣನ್, ಅನಿಲ್ ಕುಮಾರ್, ದೀಪ್ಶಿಕಾ ಚಕ್ರವರ್ತಿ, ನಮೃತಾ, ಡಾ.ನಿರ್ಮಲಾ, ಸಂಧ್ಯಾ, ಕೆ.ವಿ.ಎಸ್.ಹರಿ, ದಾಸಪ್ಪ, ಬಿ.ಪಿ.ಬಾಲಚಂದ್ರ, ಬಲರಾಮ್ ಪಿ., ಅಂಜಲಿ ಎ. ಕರಂಡೆ, ಹೇಮಲತಾ, ಚಟೋಪಾಧ್ಯಾಯ ಕೆ., ಪ್ರದೀಪ್, ಅಭಿಲಾಷ್ ರಾಜು, ಸುಂದರಸ್ವಾಮಿ ಹಾಗೂ ರಾಮಸ್ವಾಮಿ, ವಿಕ್ಟರ್ ಮನೋಹರ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ನಕಲಿ ಹನಿಟ್ರ್ಯಾಪ್ ಮಾಡಿಸಿ ಕೆಲಸದಿಂದ ವಜಾ ಮಾಡಿದರು": "2008ರಿಂದ 2025ರವರೆಗೆ ತಾವು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಜಾತಿ ನಿಂದನೆ ಮಾಡಿದ್ದಾರೆ. ನಕಲಿ ಹನಿಟ್ರ್ಯಾಪ್ ಮಾಡಿಸಿ ಕೆಲಸದಿಂದ ವಜಾ ಮಾಡಿದ್ದಾರೆ. ಅಲ್ಲದೆ ದೇಶದಲ್ಲಿ ಬೇರೆಲ್ಲೂ ಕೆಲಸ ಸಿಗದಂತೆ ಮಾಡಿದ್ದಾರೆ. ಈವರೆಗೂ ಸಂಸ್ಥೆಯಲ್ಲಿ ದಾಖಲಾದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಯಾರ ವಿರುದ್ಧವೂ ಕೈಗೊಳ್ಳದ ಕ್ರಮವನ್ನು ನನ್ನ ವಿರುದ್ಧ ಕೈಗೊಳ್ಳಲಾಗಿದೆ. ಸಂಸ್ಥೆಯ ಅನುದಾನದಲ್ಲಿ 2,500 ಕೋಟಿ ರೂ ಲೂಟಿ ಮಾಡಲಾಗಿದೆ" ಎಂಬುದಾಗಿ ಡಿ.ಸಣ್ಣ ದುರ್ಗಪ್ಪ ದೂರಿನಲ್ಲಿ ಆರೋಪಿಸಿದ್ದಾರೆ.
ಸಣ್ಣ ದುರ್ಗಪ್ಪ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಜಕಾರಣಿಗಳ ಹೆಸರು ಬಳಸಿ ಕೋಟ್ಯಂತರ ರೂಪಾಯಿ ವಂಚನೆ: ಮಹಿಳೆ ಸೇರಿ ಮೂವರು ಸೆರೆ