ಗಂಗಾವತಿ(ಕೊಪ್ಪಳ): ಗಂಗಾವತಿ ಉಪವಿಭಾಗ ಸರ್ಕಾರಿ ಆಸ್ಪತ್ರೆಗೆ 2022-23ನೇ ಸಾಲಿನ ರಾಜ್ಯ ಸರ್ಕಾರದ 'ಕಾಯಕಲ್ಪ ಪ್ರಶಸ್ತಿ' ಲಭಿಸಿದೆ. ಈ ಮೂಲಕ ಸತತ ಮೂರು ವರ್ಷ ಈ ಪ್ರಶಸ್ತಿ ಪಡೆದ ರಾಜ್ಯದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸರ್ಕಾರಿ ಆಸ್ಪತ್ರೆಗಳಿಗೆ, ಬಡ ರೋಗಿಗಳಿಗೆ ನೀಡಲಾಗುವ ಗುಣಮಟ್ಟದ ಚಿಕಿತ್ಸೆ, ಜನಸ್ನೇಹಿ ವಾತಾವರಣ ಮತ್ತು ಸ್ವಚ್ಛತೆಯಂತಹ ಮಾನದಂಡಗಳ ಆಧಾರದಡಿ ಈ ಪ್ರಶಸ್ತಿ ನೀಡಲಾಗುತ್ತದೆ.
ಮಂಗಳವಾರ ಮೈಸೂರಿನ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಗಂಗಾವತಿ ಉಪವಿಭಾಗ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಈಶ್ವರ ಸವುಡಿ ಅವರಿಗೆ ಪ್ರಶಸ್ತಿ ನೀಡಿದರು. ಗಂಗಾವತಿಯ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವಂತಹ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ಚಿಕಿತ್ಸೆ ಪಡೆಯಲು ಬಳ್ಳಾರಿ, ರಾಯಚೂರು, ಗದಗ ಮತ್ತು ವಿಜಯನಗರ ಸೇರಿದಂತೆ ಹಲವು ಜಿಲ್ಲೆಗಳ ರೋಗಿಗಳು ಆಗಮಿಸುತ್ತಾರೆ.
ಈ ಕುರಿತು ಉಪವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಈಶ್ವರ ಸವುಡಿ ಪ್ರತಿಕ್ರಿಯಿಸಿ, "ಆಸ್ಪತ್ರೆಯಲ್ಲಿನ ವೈದ್ಯರು ಸೇರಿದಂತೆ ಪ್ರತಿಯೊಬ್ಬ ಸಿಬ್ಬಂದಿಯೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರಿಂದ ಕೇಂದ್ರ ಸರ್ಕಾರದ ಲಕ್ಷ್ಯ, ರಾಜ್ಯ ಸರ್ಕಾರದ ಕಾಯಕಲ್ಪದಂತಹ ಹಲವು ಪ್ರಶಸ್ತಿಗಳು ಸಿಕ್ಕಿವೆ. ಈ ಪ್ರಶಸ್ತಿಯಲ್ಲಿ ಸಿಬ್ಬಂದಿಗಳ ಪರಿಶ್ರಮವಿದೆ" ಎಂದರು.
ಇದನ್ನೂ ಓದಿ: ಕೋವಿಡ್ ಬಿಕ್ಕಟ್ಟಿನಿಂದಾದ ಆಹಾರ ಕೊರತೆಯಿಂದ ಶೇ 14ರಷ್ಟು ಮಕ್ಕಳಲ್ಲಿ ತೂಕ ಸಮಸ್ಯೆ; ಅಧ್ಯಯನ