ಗಂಗಾವತಿ: ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆಯಾದ ಬೆನ್ನಲ್ಲೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಜಿ. ಜನಾರ್ದನ ರೆಡ್ಡಿ, ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ದೆಹಲಿಗೆ ತೆರಳಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.
ಕೊಪ್ಪಳ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬಿಜೆಪಿಯ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ಕೈತಪ್ಪಿದ್ದರ ಹಿನ್ನೆಲೆ ಬಿಜೆಪಿಯ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಶಾಸಕ ರೆಡ್ಡಿ, ಅಮಿತ್ ಶಾ ಅವರನ್ನು ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ, "ಕೇಂದ್ರ ಸರ್ಕಾರದ ಗೃಹಮಂತ್ರಿ ಅಮಿತ್ ಶಾ ಅವರ ಆಹ್ವಾನದ ಮೇರೆಗೆ ದೆಹಲಿಯಲ್ಲಿ ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷನಾಗಿ ಭೇಟಿ ಮಾಡಿ, ಕರ್ನಾಟಕ ರಾಜ್ಯದ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾಗಿ" ಬರೆದುಕೊಂಡಿದ್ದಾರೆ.
ಎರಡು ಮೂರು ತಿಂಗಳ ಹಿಂದೆ ಬಿಜೆಪಿ ಪರ ಸ್ಟ್ಯಾಂಡ್ ಇರುವ ಬಗ್ಗೆ ಒಲವು ವ್ಯಕ್ತಪಡಿಸಿದ್ದ ಶಾಸಕ ರೆಡ್ಡಿ, ಬಿಜೆಪಿಗರು ಮುಂದೆ ಬಂದಲ್ಲಿ ಮೈತ್ರಿ ಮಾಡಿಕೊಂಡು ಬೆಂಬಲಿಸುವುದಾಗಿ ಹೇಳಿದ್ದರು. ಆದರೆ, ಇದಕ್ಕೆ ಬಿಜೆಪಿಗರಿಂದ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ಮೊನ್ನೆ ನಡೆದ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದ ರೆಡ್ಡಿ, ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಿದ್ದಾಗಿ ಹೇಳಿದ್ದರು. ಮತ್ತೀಗ ಶಾ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕೊಪ್ಪಳ ಸೇರಿದಂತೆ ರಾಜ್ಯದ ಎಂಟರಿಂದ ಹತ್ತು ಲೋಕಸಭಾ ಕ್ಷೇತ್ರಗಳಲ್ಲಿ ಕೆಆರ್ಪಿಯಿಂದ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಆರಂಭದಿಂದಲೂ ಹೇಳಿಕೊಂಡು ಬಂದಿದ್ದ ರೆಡ್ಡಿ, ಇದುವರೆಗೂ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ. ಈ ಮಧ್ಯೆ ಶಾ ಅವರನ್ನು ಭೇಟಿ ಮಾಡಿರುವುದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.
ಇದನ್ನೂ ಓದಿ: ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಿದ್ದೇನೆ-ಜನಾರ್ದನ ರೆಡ್ಡಿ; ಒಂದು ಅಡ್ಡ ಮತದಾನ ಆಗಿರಬಹುದೆಂದ ಯತ್ನಾಳ್