ಬೆಂಗಳೂರು: 12ನೇ ಅಖಿಲ ಭಾರತ ಪೊಲೀಸ್ ಅರ್ಚರಿ ಚಾಂಪಿಯನ್ಶಿಪ್ ಟೂರ್ನಿಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಕೋರಮಂಗಲದ ಕೆಎಸ್ಆರ್ಪಿ ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜಿಸಲಾಗಿದ್ದು, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಉದ್ಘಾಟನೆ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಜಿ. ಪರಮೇಶ್ವರ್, "ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ನ್ಯಾಷನಲ್ ಪೊಲೀಸ್ ಆರ್ಚರಿ ಚಾಂಪಿಯನ್ಶಿಪ್ ಆಯೋಜನೆ ಮಾಡಲಾಗಿದೆ. ಕರ್ನಾಟಕದಲ್ಲಿ ಪೊಲೀಸ್ ಆರ್ಚರಿ ತಂಡವೇ ಇರಲಿಲ್ಲ. ಆದರೂ ಸಹ ಡಿಜಿ & ಐಜಿಪಿಯವರು ಸ್ವತಃ ಆಸಕ್ತಿ ವಹಿಸಿ ಟೂರ್ನಿಯನ್ನು ಆಯೋಜಿಸಲು ಕಾರಣರಾಗಿದ್ದಾರೆ. ಜೊತೆಗೆ 12 ಜನ ರಾಜ್ಯದ ಪೊಲೀಸರ ತಂಡ ರಚಿಸಿ ಅವರಿಗೆ ಅಗತ್ಯ ಸಾಮಗ್ರಿಗಳನ್ನು ಕೊಡಿಸಿ, ತರಬೇತಿ ಕೊಡಿಸಿ, ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ. ಆದ್ದರಿಂದ ಅವರನ್ನು ನಾನು ಅಭಿನಂದಿಸುತ್ತೇನೆ" ಎಂದರು.
ಅಂಬೇಡ್ಕರ್ ಫ್ಲೆಕ್ಸ್ ಕಟ್ಟುವ ವಿಚಾರವಾಗಿ ಮೈಸೂರಿನಲ್ಲಿ ನಡೆದ ಗಲಾಟೆಯ ಕುರಿತು ಮಾತನಾಡಿದ ಅವರು, "ಈಗಾಗಲೇ ಆ ವಿಚಾರವಾಗಿ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಮಾಡಬೇಕು, ಫ್ಲೆಕ್ಸ್ ಹಾಕಬೇಕು ಎಂಬ ವಿಚಾರ ಪಂಚಾಯತಿಯಲ್ಲಿ ಚರ್ಚೆಯಾದಾಗ ಭಿನ್ನ ಅಭಿಪ್ರಾಯಗಳು ಬಂದಿವೆ. ಅದಾದ ಮೇಲೆ ಫ್ಲೆಕ್ಸ್ ಹಾಕಲು ಹೋಗಿ, ಕಿತ್ತುಹಾಕಿದ ಘಟನೆ ನಡೆದಿದೆ. ಆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ" ಎಂದರು.
ಮಂಡ್ಯ ಜಿಲ್ಲೆಯಲ್ಲಿ ಹನುಮ ಧ್ವಜ ತೆರವು ಕುರಿತು ಜಿಲ್ಲಾಡಳಿತದ ವಿರುದ್ಧ ಸಂಸದೆ ಸುಮಲತಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, "ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳಾಗಲಿ, ಶಾಸಕರಾಗಲಿ, ವರಿಷ್ಠಾಧಿಕಾರಿಗಳಾಗಲಿ ಮೊದಲು ಮಧ್ಯೆ ಪ್ರವೇಶಿಸಿರಲಿಲ್ಲ. ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜ ಹಾರಿಸುವುದಾಗಿ ಮೊದಲು ಆ ಊರಿನವರು ಗ್ರಾಮ ಪಂಚಾಯಿತಿಯ ಅನುಮತಿ ಕೇಳಿದ್ದರು. ಪಂಚಾಯಿತಿಯವರೂ ಸಹ ಏಕಾಏಕಿ ಅನುಮತಿ ಕೊಟ್ಟಿಲ್ಲ, ಷರತ್ತುಗಳನ್ನು ಹಾಕಿ ಅನುಮತಿ ಕೊಟ್ಟಿದ್ದರು. ಜೊತೆಗೆ ಅನುಮತಿ ಪಡೆದವರು ಸಹ ನಾವು ಯಾವುದೇ ರಾಜಕೀಯ ಹಾಗೂ ಧಾರ್ಮಿಕ ಧ್ವಜ ಹಾರಿಸುವುದಿಲ್ಲ, ನಾವು ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜ ಹಾರಿಸುತ್ತೇವೆ ಎಂದು ಮುಚ್ಚಳಿಕೆಯನ್ನೂ ಬರೆದು ಕೊಟ್ಟಿದ್ದರು. ಅಲ್ಲಿಯವರೆಗೂ ಯಾವ ಶಾಸಕರಾಗಲಿ, ಜಿಲ್ಲಾಧಿಕಾರಿಗಳಾಗಲಿ, ಪೊಲೀಸರಾಗಲಿ ಮಧ್ಯಪ್ರವೇಶಿಸಿರಲಿಲ್ಲ. ಆದರೆ ಯಾವಾಗ ಇದಕ್ಕೆ ವಿರುದ್ಧವಾಗಿ ರಾತ್ರೋರಾತ್ರಿ ಹನುಮಧ್ವಜ ಹಾರಿಸಿದರೋ, ಆಗ ಸಾರ್ವಜನಿಕ ಸ್ಥಳದಲ್ಲಿ ಅದರಲ್ಲಿಯೂ ವಿಶೇಷವಾಗಿ ಸರ್ಕಾರಿ ಜಾಗದಲ್ಲಿ ಈ ರೀತಿ ಆಗಬಾರದು ಎಂದು ಧ್ವಜವನ್ನು ತೆಗೆಸಿದ್ದಾರೆ. ಇದರಲ್ಲಿ ಯಾರ ತಪ್ಪಿದೆ? ಎಲ್ಲವನ್ನೂ ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದರ ಹಿಂದೆ ರಾಜಕೀಯ ಪ್ರಚೋದನೆಯಲ್ಲದೇ ಬೇರೇನೂ ಕಾಣಿಸುತ್ತಿಲ್ಲ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಇದೆಲ್ಲವನ್ನು ಮಾಡಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಸಮರ್ಥವಾಗಿದೆ. ಇದೆಲ್ಲವನ್ನು ನಾವು ಸಹಿಸುವುದಿಲ್ಲ, ಕಾನೂನಾತ್ಮಕವಾಗಿ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ನಾವು ತೆಗೆದುಕೊಳ್ಳುತ್ತೇವೆ" ಎಂದು ತಿಳಿಸಿದರು.
ಟೂರ್ನಿಯಲ್ಲಿ ಕರ್ನಾಟಕ, ಅಸ್ಸೋಂ, ಬಿಹಾರ, ಗುಜರಾತ್, ತಮಿಳುನಾಡು, ತೆಲಂಗಾಣ ಸೇರಿದಂತೆ ಒಟ್ಟು 24 ರಾಜ್ಯಗಳ ಪೊಲೀಸ್ ತಂಡಗಳು ಭಾಗವಹಿಸುತ್ತಿದ್ದು, ಫೆಬ್ರವರಿ 4ರಂದು ಟೂರ್ನಿಗೆ ತೆರೆ ಬೀಳಲಿದೆ. ಕಾರ್ಯಕ್ರಮದಲ್ಲಿ ಡಿಜಿ & ಐಜಿಪಿ ಡಾ. ಅಲೋಕ್ ಮೋಹನ್, ಹಿರಿಯ ಐಪಿಎಸ್ ಅಧಿಕಾರಿಗಳಾದ ಸೀಮಂತ್ ಕುಮಾರ್ ಸಿಂಗ್, ಸಂದೀಪ್ ಪಾಟೀಲ್ ಭಾಗಿಯಾಗಿದ್ದರು.
ಇದನ್ನೂ ಓದಿ: ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ