ಹಾಸನ: ಹಾಸನ ವಿಡಿಯೋ ಪ್ರಕರಣದಲ್ಲಿ ಗುರುವಾರ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಿರುವ ವಕೀಲ ಹಾಗೂ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಹೇಳಿಕೆ ದಾಖಲಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
"ನನಗೆ ಪೆನ್‌ಡ್ರೈವ್ ಕೊಟ್ಟಿದ್ದೆ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್. ಹಾಗೂ ತನ್ನ ಬಳಿ ಪ್ರಜ್ವಲ್ ಅಶ್ಲೀಲ ವಿಡಿಯೋಗಳಿವೆ" ಎಂದು ದೇವರಾಜೇಗೌಡ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟೀಸ್ ನೀಡಿತ್ತು.
ನಿನ್ನೆ ಎಸ್‌ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡಿರುವ ಬಗ್ಗೆ ದೇವರಾಜೇಗೌಡ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. "ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಅಶ್ಲೀಲ ವಿಡಿಯೋ ಬಿಡುಗಡೆ ವಿಷಯ ಸಂಬಂಧಪಟ್ಟಂತೆ ಎಸ್‌ಐಟಿ ನೋಟೀಸ್ ಜಾರಿ ಮಾಡಿತ್ತು. ನಾನು ಎಸ್‌ಐಟಿ ತಂಡದ ಮುಂದೆ ಹಾಜರಾಗಿ ಈ ಪ್ರಕರಣಕ್ಕೆ ಪೂರಕವಾದ ಸಾಕ್ಷಿ, ಹೇಳಿಕೆಯನ್ನು ನೀಡಿದ್ದೇನೆ. ಈ ಪ್ರಕರಣದ ಪ್ರಮುಖ ಆರೋಪಿಗಳ ವಿರುದ್ಧ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ಪೆನ್‌ಡ್ರೈವ್‌ನಲ್ಲಿರುವ ಅಶ್ಲೀಲ ವಿಡಿಯೋಗಳನ್ನು ರಾಜ್ಯಾದ್ಯಂತ ಹಂಚಿರುವ ಕಡುನೀಚರ ಬಗ್ಗೆ ಹಲವು ಸುಳಿವುಗಳನ್ನು ನೀಡಿದ್ದೇನೆ. ಸದರಿ ಕಿರಾತಕರನ್ನು ಬಂಧಿಸಲು ಬೇಕಾದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹಾಗೂ ಈ ಪ್ರಕರಣದಲ್ಲಿ ರಾಜ್ಯದ ಹೆಣ್ಣುಮಕ್ಕಳ ಘನತೆ ಹಾಗೂ ಅವರ ಶೀಲದ ವಿಷಯದಲ್ಲಿ ಚೆಲ್ಲಾಟವಾಡಿರುವ ರಾಜಕಾರಣಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸಂವಿಧಾನ ನಾಶಪಡಿಸಲು ಬಿಜೆಪಿ ಯತ್ನ, ಪ್ರಜ್ವಲ್ ಪರ ಪ್ರಧಾನಿ ಮತಯಾಚನೆ ತಪ್ಪು: ರಾಹುಲ್ ಗಾಂಧಿ - Rahul Gandhi