ಬೆಂಗಳೂರು : ಸ್ತ್ರೀರೋಗ ಸಮಸ್ಯೆಗಳಿಂದ ಬಳಲುತ್ತಿರುವ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದ ಮಹಿಳೆಯರಿಗೆ ಉಚಿತವಾಗಿ ಸ್ತ್ರೀರೋಗ ಮತ್ತು ಇತರ ಸಾಮಾನ್ಯ ಶಸ್ತ್ರಚಿಕಿತ್ಸೆ ನೀಡಲು ನಗರದ ವೈಟ್‌ಫೀಲ್ಡ್‌ನಲ್ಲಿರುವ ಕಿಂಡರ್ ಆಸ್ಪತ್ರೆ ಮುಂದಾಗಿದೆ.
ಈ ಕುರಿತು ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಂಡೋರಮಾ ಹೆಲ್ತ್ ಕೇರ್ ಲಿಮಿಟೆಡ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಡಾ. ವಿ. ಕೆ ಪ್ರದೀಪ್ ಕುಮಾರ್ ಮಾತನಾಡಿ, ಕಿಂಡರ್ ಆಸ್ಪತ್ರೆ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಲು ಮುಂದಾಗಿದೆ. ಉಚಿತ ಸ್ತ್ರೀರೋಗ ಶಸ್ತ್ರಚಿಕಿತ್ಸಾ ಸೇವೆಯನ್ನು ನೀಡುವ ಮೂಲಕ ಸಶಕ್ತ ಮಹಿಳಾ ಸಮಾಜ ನಿರ್ಮಿಸುವ ಆಶಯ ಹೊಂದಿದ್ದೇವೆ. ಆರ್ಥಿಕವಾಗಿ ಹಿಂದುಳಿದ ವರ್ಗದ ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮದ ದೃಷ್ಟಿಯಿಂದ ಈ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.
ಕಿಂಡೋರಮಾ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ ಗ್ರೂಪ್ ಸಿಇಒ ರಂಜಿತ್ ಕೃಷ್ಣನ್ ಮಾತನಾಡಿ, ಕಿಂಡರ್ ಆಸ್ಪತ್ರೆ ನಾವು ಸಮುದಾಯಕ್ಕೆ ಸೇವೆ ಸಲ್ಲಿಸುವ ನಮ್ಮ ಅಚಲ ಬದ್ಧತೆಯ ಪ್ರತಿಬಿಂಬವಾಗಿದೆ. ಈ ಯೋಜನೆಯಿಂದ ಮಹಿಳೆಯರ ಜೀವನದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.
ಕಿಂಡರ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಅಪರ್ಣಾ ಪಾಟೀಲ್ ಮಾತನಾಡಿ, ಯೋಜನೆಯು ಮಹಿಳೆಯರ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸುವುದು ಮಾತ್ರವಲ್ಲದೆ, ಉಚಿತ ಶಸ್ತ್ರಚಿಕಿತ್ಸೆ ಮತ್ತು ಇತರ ಸಾಮಾನ್ಯ ಶಸ್ತ್ರಚಿಕಿತ್ಸೆಗಳನ್ನು ಒದಗಿಸುವ ಮೂಲಕ ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಈ ಮೂಲಕ ನಾವು ಆರೋಗ್ಯಕರ ಮತ್ತು ಸಂತೋಷದಾಯಕ ಸಮಾಜಕ್ಕೆ ಅಡಿಪಾಯವನ್ನು ಹಾಕುತ್ತಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಿಂಡರ್ ಆಸ್ಪತ್ರೆಯ ಮುಖ್ಯ ಆಡಳಿತ ಅಧಿಕಾರಿ ಸುದೀಂದ್ರ ಜಿ. ಭಟ್ ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಬಾರಿಗೆ ಇಂಡಿಯಾನಾ ಆಸ್ಪತ್ರೆಯಿಂದ ಯಶಸ್ವಿ ಮಹಾಪಧಮನಿಯ ಹೈಬ್ರಿಡ್ ಶಸ್ತ್ರಚಿಕಿತ್ಸೆ