ಬೆಂಗಳೂರು : ಇಂದು ವಿಧಾನಸೌಧದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಮುಖ್ಯಮಂತ್ರಿ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಇದರ ಪ್ರಯುಕ್ತ ಕೆಂಪೇಗೌಡ ಬಸ್ ನಿಲ್ದಾಣ/ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ವಿಧಾನಸೌಧಕ್ಕೆ ಬಿಎಂಟಿಸಿ ಬಸ್ಗಳ ಉಚಿತ ಸೇವೆಯನ್ನು ಒದಗಿಸಲಾಗಿದೆ.
ಬಸ್ ಅಥವಾ ರೈಲ್ವೆ ನಿಲ್ದಾಣದಿಂದ ಬರುವ/ಹೋಗುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಂಸ್ಥೆಯ ವತಿಯಿಂದ ಎರಡು ಬಸ್ಗಳ ವ್ಯವಸ್ಥೆಯನ್ನು ಮಾಡುವಂತೆ ಸರ್ಕಾರದಿಂದ ಕೋರಿಕೆ ಬಂದಿತ್ತು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಅಧಿಕಾರಿಗಳು ತಿಳಿಸಿದ್ದಾರೆ. ಕೋರಿಕೆಗೆ ಅನುಗುಣವಾಗಿ ಘಟಕ-2 ರಿಂದ ಎರಡು ಬಸ್ಗಳನ್ನು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ಸೇವೆಯು ಉಚಿತವಾಗಿದ್ದು, ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಭಾರಿ ಪ್ರಮಾಣದಲ್ಲಿ ಹರಿದು ಬರುತ್ತಿರುವ ಜನಸಾಗರ : ರಾಜ್ಯದ ವಿವಿಧೆಡೆಯಿಂದ ಜನರು ತಮ್ಮ ಅಹವಾಲನ್ನು ಹಿಡಿದುಕೊಂಡು ವಿಧಾನಸೌಧದತ್ತ ಆಗಮಿಸುತ್ತಿದ್ದಾರೆ. ಇತ್ತ ಭದ್ರತಾ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಸಚಿವಾಲಯದ ಎಲ್ಲಾ ಇಲಾಖೆಗಳ ಸ್ಟಾಲ್ಗಳನ್ನು ಅಳವಡಿಸಲಾಗಿದ್ದು, ಪ್ರತಿ ಸ್ಟಾಲ್ಗಳಿಗೆ ಸಂಖ್ಯೆಯನ್ನು ನೀಡಲಾಗಿದೆ. ಜನತಾ ದರ್ಶನಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ನಾಗರಿಕರನ್ನು ಪ್ರಥಮ ಹಂತದಲ್ಲಿ ವಿಚಾರಿಸಿ, ಯಾವ ಇಲಾಖೆಯ ಸ್ಟಾಲ್ಗೆ ನಿರ್ದೇಶಿಸಿ ಕಳಿಸಬೇಕು ಎಂದು ವಿಂಗಡಿಸಲು ಅನುಭವಿ ಅಧಿಕಾರಿ - ಸಿಬ್ಬಂದಿಗಳ ವಿಚಾರಣಾ ಕೌಂಟರ್ (enquiry counter) ತೆರೆಯಲಾಗಿದೆ.
ಕೌಂಟರ್ಗಳಲ್ಲಿ ನಾಗರಿಕರ ಮೊಬೈಲ್ ನಂಬರ್ ಮತ್ತು ಪ್ರಾಥಮಿಕ ವಿವರಗಳನ್ನು ದಾಖಲಿಸಲು ರಿಜಿಸ್ಟರ್ ಹಾಗೂ ಅವರನ್ನು ಯಾವ ಇಲಾಖೆಗೆ ಕಳಿಸಲಾಗಿದೆ ಎಂದು ಸ್ಟಾಲ್ ನಂಬರ್ ನಮೂದಿಸಲಾಗುವುದು. ಸ್ಟಾಲ್ಗಳಲ್ಲಿ ನಾಗರಿಕರಿಗೆ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಆದರೆ ಕೌಂಟರ್ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನಸಂದಣಿ ಉಂಟಾಗಿರುವ ಕಾರಣ ಸಿಬ್ಬಂದಿಗಳು ಜನರನ್ನು ನಿಭಾಯಿಸಲು ಕಸರತ್ತು ನಡೆಸುತ್ತಿದ್ದಾರೆ.
ಕಂದಾಯ ಇಲಾಖೆ ಕೌಂಟರ್ನಲ್ಲಿ ಜನಸಂದಣಿ : ಕಂದಾಯ ಇಲಾಖೆ ಕೌಂಟರ್ನಲ್ಲಿ ಅಹವಾಲು ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆ ತಕ್ಷಣ ತೀರ್ಮಾನ ತೆಗೆದುಕೊಂಡು ಮತ್ತೊಂದು ಕೌಂಟರ್ ತೆರೆಯಲಾಗಿದೆ. ಕಂದಾಯ ಇಲಾಖೆ ಅರ್ಜಿದಾರರು ಕೌಂಟರ್ 1 ರಲ್ಲಿ ಅರ್ಜಿ ಸಲ್ಲಿಸಿ ಕೌಂಟರ್ ನಂಬರ್ 29 ರಲ್ಲಿ ಕೂರಲು ವ್ಯವಸ್ಥೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಖುದ್ದು ಕಂದಾಯ ಇಲಾಖೆ ಕೌಂಟರ್ಗೆ ಆಗಮಿಸಿ ಅಹವಾಲು ಸ್ವೀಕಾರ ಮಾಡಿದರು.
ಉಳಿದಂತೆ ಗ್ರಾಮೀಣಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗೃಹ ಇಲಾಖೆ ಕೌಂಟರ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನಸಂದಣಿ ಕಂಡುಬರುತ್ತಿದೆ.
ಇದನ್ನೂ ಓದಿ : ವಿಧಾನಸೌಧದಲ್ಲಿ ಇಂದು ರಾಜ್ಯ ಮಟ್ಟದ ಜನತಾ ದರ್ಶನ; ಹರಿದು ಬಂದ ಜನ ಸಾಗರ