ಬೆಂಗಳೂರು : ನನ್ನ ಮೇಲೆಯೂ ಕೂಡ ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ಒತ್ತಡ ಇದೆ, ನಾನು ಅಭ್ಯರ್ಥಿ ಆಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಮಾಜಿ ಸಂಸದ ಡಿ. ಕೆ ಸುರೇಶ್ ಪರೋಕ್ಷವಾಗಿ ಸ್ಪರ್ಧಿಸಲು ಒಲವು ವ್ಯಕ್ತಪಡಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ನಿನ್ನೆ ನಡೆದ ಚನ್ನಪಟ್ಟಣ ಕಾರ್ಯಕರ್ತರ ಸಭೆ ವಿಚಾರವಾಗಿ ಮಾತನಾಡಿದ ಅವರು, ಶನಿವಾರ ಚನ್ನಪಟ್ಟಣ ಕಾರ್ಯಕರ್ತರು ಹಾಗೂ ಮುಖಂಡರ ಸಭೆ ಆಗಿದೆ. ಸುದೀರ್ಘವಾಗಿ ಚರ್ಚೆ ಆಗಿದೆ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧ ಎಂದಿದ್ದಾರೆ. ನನ್ನ ಮೇಲೆಯೂ ಕೂಡ ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ಒತ್ತಡ ಇದೆ. ನಾನು ಅಭ್ಯರ್ಥಿ ಆಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಪಕ್ಷದ ಶಿಸ್ತಿನ ಸಿಪಾಯಿ ನಾನು. ನನ್ನ ಆಚಾರ ವಿಚಾರಗಳನ್ನು ಮುಖಂಡರ ಗಮನಕ್ಕೆ ತರುತ್ತೇನೆ. ಅಧಿಕಾರ, ಚುನಾವಣೆ ದೃಷ್ಟಿಯಿಂದ ನಾನಿಲ್ಲ. ಮುಖಂಡರು ನನ್ನ ಅರ್ಥ ಮಾಡಿಕೊಳ್ಳುತ್ತಾರೆ. ಪಕ್ಷಕ್ಕೆ ನಾನು ಅನಿವಾರ್ಯ ಅಲ್ಲ, ಪಕ್ಷ ನನಗೆ ಅನಿವಾರ್ಯ. ಕಾರ್ಯಕರ್ತರು ನನ್ನ ಮೇಲೆ ಇಟ್ಟಿರುವ ಗೌರವಕ್ಕೆ ನಾನು ಸದಾ ಋಣಿ ಎಂದರು.
ನಾನು ಕೂಡ ಕಾರ್ಯಕರ್ತರಿಗೆ ಭರವಸೆ ನೀಡಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದಿದ್ದೇನೆ. ಪಕ್ಷ ಒಂದು ವೇಳೆ ನನ್ನನ್ನು ಆಯ್ಕೆ ಮಾಡಿದ್ರೆ, ನನ್ನ ಅಭಿಪ್ರಾಯ ತಿಳಿಸುತ್ತೇನೆ. ನಮ್ಮ ಮುಖಂಡರು, ಕಾರ್ಯಕರ್ತರು ಚುನಾವಣೆಗೆ ಸಿದ್ಧವಾಗಿದ್ದಾರೆ. ಬಿಜೆಪಿ ಇಬ್ಬರು ಅಭ್ಯರ್ಥಿಗಳನ್ನು ಘೋಷಣೆ ಮಾಡಿ, ಒಂದು ಜೆಡಿಎಸ್ಗೆ ಬಿಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಮೂರನೇ ಅಭ್ಯರ್ಥಿ ಜೆಡಿಎಸ್ಗೆ ಕೊಟ್ಟಿದ್ದಾರೆ. ಯಾರು ತೀರ್ಮಾನ ಮಾಡುತ್ತಾರೆ, ಹೇಗೆ ಮಾಡುತ್ತಾರೆ ಅನ್ನೋದು ಅವರ ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದು. ಎರಡು ಸೀಟ್ ಬಿಜೆಪಿ ಅಭ್ಯರ್ಥಿಗಳಿದ್ದಾರೆ. ನಮ್ಮ ಪಕ್ಷ ಸದೃಢವಾಗಿದೆ, ಮುಕ್ತ ಮನಸ್ಸಿನಿಂದ ಪಕ್ಷ ಕೆಲಸ ಮಾಡುತ್ತಿದೆ. ಬಿಜೆಪಿ ಜೆಡಿಎಸ್ನಿಂದಲೂ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಮತ್ತಷ್ಟು ಮಂದಿ ಬರ್ತಾರೆ ಎಂದು ಡಿ ಕೆ ಸುರೇಶ್ ತಿಳಿಸಿದರು.
ಕುಮಾರಸ್ವಾಮಿನೂ ಮಂತ್ರಿಯಾಗಿ ಇರಲ್ಲ: ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರ್ಣ ಮಾಡಲ್ಲ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಂಸದರು, ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿನೂ ಮಂತ್ರಿಯಾಗಿ ಇರಲ್ಲ. ಅವನೂ ಮಂತ್ರಿಯಾಗಿ ಇರಲ್ಲಾರೀ. ಇನ್ನೊಂದು ಆರು ತಿಂಗಳೋ ವರ್ಷಕ್ಕೋ ಅವನೂ ಮನೆಗೆ ಹೋಗ್ತಾನೆ. ಏನು ಮಾಡೋದಕ್ಕಾಗುತ್ತದೆ. ಅವನು ಯಾವ ಕಾರಣದಲ್ಲಿ ಹೇಳ್ದ ನಮ್ಮ ಸರ್ಕಾರ ಇರಲ್ಲ ಅಂತ?. ಆ ಪಾರ್ಟಿ ಯಾವ ಕಾರಣ ಕೊಟ್ಟು ನಮ್ಮ ಸರ್ಕಾರ ಇರಲ್ಲ ಅಂತ ಹೇಳಿದ್ನೋ, ಅದೇ ಕಾರಣ ನಾನೂ ಹೇಳ್ತಿರೋದು ಎಂದರು.
ಅವರ ಸರ್ಕಾರನೂ ಇರೋದಿಲ್ಲ, ಅವನೂ ಇರೋದಿಲ್ಲ. ಏನು ಬೇಕಾದರೂ ಮಾತಾಡ್ತೀನಿ ಅಂದ್ರೆ ಅದಕ್ಕೊಂದು ಲೆಕ್ಕ ಇಲ್ವಾ. ಕೇಂದ್ರದ ಮಂತ್ರಿ ಆದವರು ಸ್ವಲ್ಪ ತೂಕ ಇಟ್ಟುಕೊಂಡು ಮಾತನಾಡಲಿ. ಎಲ್ಲ ಭಾಷೆನೂ ಬರುತ್ತೆ ನನಗೂ, ಈಗ ಟ್ರಯಲ್ ಕೊಟ್ಟಿದ್ದೇನೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಚನ್ನಪಟ್ಟಣ ಅಭ್ಯರ್ಥಿ ಕಗ್ಗಂಟು: ಇಂದು ಜೆಡಿಎಸ್-ಬಿಜೆಪಿ ಮತ್ತೊಂದು ಸುತ್ತಿನ ಸಭೆ, ಅಂತಿಮ ಘೋಷಣೆ