ಯಾದಗಿರಿ: ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ ಮಾಜಿ ಶಾಸಕ ನಾಗನಗೌಡ ಕಂದಕೂರು (79) ಹೃದಯಾಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಅವರ ಅಂತ್ಯಕ್ರಿಯೆ ಸ್ವಗ್ರಾಮ ಕಂದಕೂರಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶಾಸಕ ಶರಣಗೌಡ ಕಂದಕೂರು ಅವರ ತಂದೆಯಾಗಿರುವ ನಾಗನಗೌಡ ಕಂದಕೂರು 2018ರಲ್ಲಿ ಗುರುಮಠಕಲ್ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದರು. ಭಾನುವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆ.11 ಗಂಟೆಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿದೆ.
ನಾಗನಗೌಡ ಕಂದಕೂರು ರಾಜಕೀಯ ಜೀವನ: ನಾಗನಗೌಡ ಕಂದಕೂರು ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಕಂದಕೂರು ಕ್ಷೇತ್ರದಿಂದ 1986ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿ, ಜಿಲ್ಲಾ ಪಂಚಾಯ್ತಿಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದು, ಅವರ ಮೊದಲ ರಾಜಕೀಯ ಮೆಟ್ಟಿಲು.
1998ರಲ್ಲಿ ಎಪಿಎಂಸಿ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು 2003ರಲ್ಲಿ ಯಾದಗಿರಿ ಎಪಿಎಂಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿದ್ದರು. 2007ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್.ಕೆ.ಡಿ.ಬಿ (ಕೆ.ಕೆ.ಆರ್.ಡಿ.ಬಿ) ಅಧ್ಯಕ್ಷರಾಗಿ ನೇಮಕವಾದರು. ನಂತರ 2008 ರಿಂದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು. ಅಲ್ಲದೇ ಇದೇ ವರ್ಷದಲ್ಲಿ ಗುರುಮಠಕಲ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೂ ಸ್ಪರ್ಧೆ ಮಾಡಿ 9208 ಮತಗಳ ಅಂತರದಿಂದ ಸೋಲನ್ನು ಕಂಡಿದ್ದರು.
ಬಳಿಕ 2013ರಲ್ಲಿ ಗುರುಮಠಕಲ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಮರು ಸ್ಪರ್ಧೆ ಮಾಡಿ 1650 ಮತಗಳಿಂದ ಸೋಲನುಭವಿಸಿದರು. 2018ರಲ್ಲಿ ಮತ್ತೆ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ ಅವರು 24480 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ ಚಿಂಚನಸೂರ ವಿರುದ್ಧ (ಶೇ.52.40 ಮತಗಳೊಂದಿಗೆ) ಗೆಲುವು ದಾಖಲಿಸಿ ಮೊದಲಬಾರಿ ಶಾಸಕರಾಗಿ ಆಯ್ಕೆಯಾದರು. 2019ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಕರ್ನಾಟಕ ರಾಜ್ಯ ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಆದರೇ 2023ರಲ್ಲಿ ವಯಸ್ಸಿನ ಕಾರಣದಿಂದ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
ಈ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಆದ ಶರಣಬಸಪ್ಪಗೌಡ ದರ್ಶನಾಪೂರ ಪ್ರತಿಕ್ರಿಯಿಸಿ, ಗುರುಮಠಕಲ್ ಮತಕ್ಷೇತ್ರದ ಮಾಜಿ ಶಾಸಕರು ಹಾಗೂ ಹಿರಿಯ ರಾಜಕೀಯ ಮುತ್ಸದ್ಧಿ ನಾಗನಗೌಡ ಕಂದಕೂರು ಅವರು ಭಾನುವಾರ ಬೆಳಗ್ಗೆ ಹಠಾತ್ ನಿಧನ ಹೊಂದಿದ ಸುದ್ದಿ ಕೇಳಿ ಬಹಳ ದುಃಖವಾಯಿತು. ನಮ್ಮ ಕುಟುಂಬಕ್ಕೆ ಬಹಳ ಆಪ್ತರಾಗಿದ್ದರು. ದೇವರು ಅವರ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.
ಇದನ್ನೂ ಓದಿ: ಜೆಡಿಎಸ್ ನಾಯಕ ನಾಗನಗೌಡ ಕಂದಕೂರು ನಿಧನಕ್ಕೆ ಹೆಚ್ಡಿಡಿ, ಹೆಚ್ಡಿಕೆ ಸಂತಾಪ