ಬೆಂಗಳೂರು/ನವದೆಹಲಿ: ದೆಹಲಿಯ ಸಫ್ದರ್ಜಂಗ್ ರಸ್ತೆಯಲ್ಲಿರುವ ನಿವಾಸದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರನ್ನು ಮಾಜಿ ಸಚಿವ ವಿ ಸೋಮಣ್ಣ ಅವರು ಮಂಗಳವಾರ ಭೇಟಿ ಮಾಡಿದರು. ಭೇಟಿ ವೇಳೆ ರಾಜ್ಯ ರಾಜಕಾರಣ ಕುರಿತು ಕೆಲ ಹೊತ್ತು ಸಮಾಲೋಚನೆ ನಡೆಸಿದರು.
ಕರ್ನಾಟಕದಲ್ಲಿ ಜೆಡಿಎಸ್ ತನ್ನದೇ ಆದ ಪ್ರಾಬಲ್ಯ ಹೊಂದಿದೆ. ಬಿಜೆಪಿ-ಜೆಡಿಎಸ್ ಜಂಟಿಯಾಗಿ ಲೋಕಸಭಾ ಚುನಾವಣೆ ಎದುರಿಸುತ್ತಿರುವ ಹಿನ್ನೆಲೆ 28 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷ ಗೆಲುವು ಸಾಧಿಸಲಿದೆ ಎಂಬುದು ಉಭಯ ಪಕ್ಷಗಳ ನಾಯಕರ ವಿಶ್ವಾಸವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಚಿಂತನೆ ಮತ್ತು ಹೆಚ್ ಡಿ ದೇವೇಗೌಡ ಅವರ ರಾಜಕೀಯ ಹಿರಿತನ ರಾಜ್ಯದಲ್ಲಿ ಹೊಸಪರ್ವ ಆರಂಭದ ಶುಭ ಸೂಚನೆ ನೀಡಿದೆ. ತುಮಕೂರು ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ವಿ. ಸೋಮಣ್ಣ, ತಮಗೆ ಬೆಂಬಲಿಸುವಂತೆ ದೇವೇಗೌಡರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಲೋಕಸಭೆಗೆ ಟಿಕೆಟ್ ಸಿಗದಿದ್ದರೆ ರಾಜ್ಯಸಭೆಗೆ ಹೋಗಲು ಅವರು ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿ ಬಿಜೆಪಿ ಪ್ರಮುಖ ಮುಖಂಡರು ಮತ್ತು ಜೆಡಿಎಸ್ ಮುಖಂಡರುಗಳನ್ನ ಭೇಟಿಯಾಗಿದ್ದೇನೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ನನ್ನ 40ವರ್ಷಗಳ ರಾಜಕೀಯ ಸೇವೆಯನ್ನು ಪಕ್ಷದ ಗೆಲುವಿಗೆ ಮುಡಿಪಾಗಿಡುತ್ತೇನೆ ಎಂದು ವಿ ಸೋಮಣ್ಣ ಹೇಳಿದ್ದಾರೆ.
ಮಣ್ಣಿನ ಮಗ, ಮಾಜಿ ಪ್ರಧಾನಿಗಳು ಹಾಗೂ ಜನತಾದಳದ ವರಿಷ್ಠರಾದ ಶ್ರೀ ಹೆಚ್ ಡಿ ದೇವೇಗೌಡ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗಿ, ಕುಶಲೋಪರಿ ವಿಚಾರಿಸಿ, ಆಶೀರ್ವಾದ ಪಡೆದುಕೊಂಡ ಸಂದರ್ಭ ಇದು ಎಂದು ಸೋಮಣ್ಣ ಎಕ್ಸ್(ಟ್ವಿಟ್ಟರ್)ನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಪದ್ಮನಾಭನಗರದ ಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ಸೋಮಣ್ಣ, ದೇವೇಗೌಡರ ಜೊತೆ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದರು. ಇದರ ಜೊತೆಗೆ ಬಿಡದಿ ತೋಟದ ಮನೆಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರುನ್ನೂ ಸಹ ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು.
ಇದನ್ನೂ ಓದಿ: ವಿ.ಸೋಮಣ್ಣರಿಗೆ ರಾಜ್ಯಸಭಾ ಟಿಕೆಟ್ ನೀಡಿದರೆ ಸ್ವಾಗತ: ಆರ್.ಅಶೋಕ್