ಬೆಳಗಾವಿ : ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾಗಿ ಇರೋವರೆಗೂ ಯಾವುದೇ ಪ್ರಚಾರಕ್ಕೆ ಹೋಗದಿರಲು ನಿರ್ಣಯ ತೆಗೆದುಕೊಂಡಿದ್ದೇನೆ. ಇನ್ನು ನನ್ನ ಪ್ರಚಾರಕ್ಕೆ ಕರೆಯಲು ವಿಜಯೇಂದ್ರ ಯಾರು? ಅವನು ಕರೆದರೂ ಹೋಗಲ್ಲ. ಅವನ ಮುಖವನ್ನೂ ನೋಡೋದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಒಳ್ಳೆಯದು ಆಗಲಿ ಎಂದು ಹಾರೈಸುತ್ತೇನೆ. ಆದರೆ, ವಿಜಯೇಂದ್ರನನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕೋವರೆಗೂ ಯಾವುದೇ ಪ್ರಚಾರಕ್ಕೆ ಹೋಗುವುದಿಲ್ಲ. ಆದರೆ, ಫೋನ್ ಮೂಲಕ ಪಕ್ಷದ ಪರ ಕೆಲಸ ಮಾಡುತ್ತೇನೆ. ಹೈಕಮಾಂಡ್ ಹೋಗು ಎಂದರೆ ಹೋಗುತ್ತೇನೆ. ಆದರೆ, ಈವರೆಗೂ ಯಾರೂ ನನ್ನ ಕರೆದಿಲ್ಲ. ಹೋಗಲೇಬೇಕು ಎಂದು ಸೂಚಿಸಿದರೆ ಹೋಗುವೆ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಸಿಎಂ ಆಗಲು ಯೋಗೇಶ್ವರ್ ಕಾರಣ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ನೂರಕ್ಕೆ ನೂರು ಸತ್ಯ. ಯೋಗೇಶ್ವರ್, ನಾನು ಮತ್ತು ಎನ್. ಆರ್ ಸಂತೋಷ್ ಮುಂಚೂಣಿಯಲ್ಲಿ ಇದ್ದೆವು. ಸಮ್ಮಿಶ್ರ ಸರ್ಕಾರದಲ್ಲಿ ನಾನು ಮತ್ತು ಆರ್. ಶಂಕರ್ ಮಂತ್ರಿ ಆಗಿದ್ದೆವು. ಆದರೆ, ನಮಗೆ ಪ್ರಮಾಣವಚನ ನೀಡಿರಲಿಲ್ಲ. ಹಾಗಾಗಿ, ಅವತ್ತೇ ಸಾಯಂಕಾಲ ಸರ್ಕಾರ ತೆಗೆಯಲು ನಿರ್ಣಯ ಕೈಗೊಂಡಿದ್ದೆವು. ನಮ್ಮ ಪಕ್ಷಕ್ಕೆ ಮುಜುಗರ ಆಗುವ ಕಾರಣಕ್ಕಾಗಿ ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದರು.
ಬಿಜೆಪಿ ಬಹುಮತ ಪಡೆಯಲಿದೆ : ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಗ್ಗೆ ಮಾತನಾಡಿ, ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಅವರ ತ್ಯಾಗದಿಂದ ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡಿದ ಪರಿಣಾಮ ಬಿಜೆಪಿ ಮತ್ತಷ್ಟು ಬಲಿಷ್ಠವಾಗಿದೆ. ಹಾಗಾಗಿ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 160-170 ಸೀಟ್ ಗೆದ್ದು, ಬಿಜೆಪಿ ಬಹುಮತ ಪಡೆಯಲಿದೆ ಎಂದು ರಮೇಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಮಹಾರಾಷ್ಟ್ರಕ್ಕೆ ಚುನಾವಣಾ ಪ್ರಚಾರಕ್ಕೆ ಹೋಗುವ ವಿಚಾರಕ್ಕೆ ಜತ್ತ, ಅಕ್ಕಲಕೋಟ, ಸೊಲ್ಲಾಪುರ ಸೇರಿ ಕನ್ನಡ ಪ್ರದೇಶಗಳಲ್ಲಿ ಜವಾಬ್ದಾರಿ ಕೊಟ್ಟಿದ್ದರು. ಆದರೆ, ನನ್ನ ಹೆಸರು ನೇರವಾಗಿ ಹಾಕಬೇಡಿ ಅಂತಾ ಹೇಳಿದ್ದೇನೆ. ಅಣ್ಣಾಸಾಹೇಬ ಜೊಲ್ಲೆ ಮತ್ತೆ ನಾವು ಕೆಲಸ ಮಾಡುತ್ತೇವೆ ಎಂದಿದ್ದೇನೆ. ನಾನು ನೀರಾವರಿ ಮಂತ್ರಿ ಆಗಿದ್ದಾಗ ಈ ಭಾಗಕ್ಕೆ ನೀರು ಹರಿಸಲು ಪ್ರಯತ್ನಿಸಿದ್ದೆ. ಜಯಂತರಾವ್ ಪಾಟೀಲ ಮತ್ತು ನಾನು ಸೇರಿಕೊಂಡು ಮಹತ್ವದ ಸಭೆ ಮಾಡಿದ್ದೆವು. ಆದರೆ, ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅದು ನೆನೆಗುದಿಗೆ ಬಿದ್ದಿದೆ ಎಂದರು.
ನೀರಾವರಿ ಮಂತ್ರಿಯಾಗಿ ಸಾಕಾರಗೊಳಿಸುತ್ತೇನೆ: ಅಕ್ಕಲಕೋಟ, ಸೊಲ್ಲಾಪುರ ಜತ್ತ ಭಾಗಕ್ಕೆ ನಾವು ನೀರು ಕೊಡುವುದು. ಅವರು ನಮ್ಮ ಅಥಣಿಗೆ ಬೇಸಿಗೆ ಸಮಯದಲ್ಲಿ 4 ಟಿಎಂಸಿ ನೀರು ಕೊಡುವ ಬಗ್ಗೆ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲು ನಿರ್ಧರಿಸಿದ್ದೆವು. ಆದರೆ, ದುರಾದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಮುಂದೆ ಮತ್ತೆ ನಾನೇ ನೀರಾವರಿ ಮಂತ್ರಿಯಾಗಿ ಇದನ್ನು ಸಾಕಾರಗೊಳಿಸುತ್ತೇನೆ ಎಂದು ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿ ಬೇರೆ ಖಾತೆ ತೆಗೆದುಕೊಳ್ಳುವುದು ಸೂಕ್ತ: ಡಿ. ಕೆ ಶಿವಕುಮಾರ್ ಪಾರ್ಟ್ ಟೈಮ್ ನೀರಾವರಿ ಮಂತ್ರಿ. ಫುಲ್ ಟೈಮ್ ಬಿಬಿಎಂಪಿ ಮಂತ್ರಿಯಾಗಿದ್ದಾರೆ. ನಿಜವಾಗಲೂ ರಾಜ್ಯಕ್ಕೆ ಒಳ್ಳೆಯದು ಆಗಬೇಕು ಎಂದರೆ ನೀರಾವರಿ ಖಾತೆಗೆ ರಾಜೀನಾಮೆ ನೀಡಬೇಕು. ಏಕೆಂದರೆ ಬೆಂಗಳೂರಿಗೆ ಅವರು ಸೀಮಿತವಾಗಿದ್ದಾರೆ. ಹಾಗಾಗಿ, ವೈಯಕ್ತಿಕ ದ್ವೇಷ ಎಷ್ಟೇ ಇದ್ದರೂ ಕೂಡ ನಾನು ಅವರಿಗೆ ಮನವಿ ಮಾಡಿಕೊಳ್ಳುತ್ತೇನೆ. ಡಿಕೆಶಿ ಬೇರೆ ಖಾತೆ ತೆಗೆದುಕೊಳ್ಳುವುದು ಸೂಕ್ತ ಎಂದು ರಮೇಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಯಡಿಯೂರಪ್ಪ ಮತ್ತು ನಿಮ್ಮ ಸಂಬಂಧ ಚೆನ್ನಾಗಿತ್ತು. ಈಗ ಏಕೆ ವೈಮನಸ್ಸು ಮೂಡಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ, 13 ನೇ ತಾರೀಖು ಮತದಾನ ಮುಗಿದ ಬಳಿಕ 14 ರಂದು ಈ ಬಗ್ಗೆ ಮಾತಾಡೋಣ ಎಂದಷ್ಟೇ ಹೇಳಿದರು.
ಇದನ್ನೂ ಓದಿ : ಕಾಂಗ್ರೆಸ್ ಪಕ್ಷದವರೇ ಸಿದ್ದರಾಮಯ್ಯ ಮುಗಿಸಲು ಹೊರಟಿದ್ದಾರೆ : ಮಾಜಿ ಸಚಿವ ರಮೇಶ್ ಜಾರಕಿಹೊಳಿ - Former Minister Ramesh Jarkiholi