ಚಿಕ್ಕಮಗಳೂರು: ರಾಜಧಾನಿ ಬೆಂಗಳೂರಿನಿಂದ ಸರ್ಕಾರಕ್ಕೆ ಬಹುಪಾಲು ಆದಾಯ ಕ್ರೋಢೀಕರಣ ಆಗುತ್ತದೆ. ನಾಳೆ ಬೆಂಗಳೂರಿನ ಶಾಸಕರು, ಮೇಯರ್, ಸಂಸದರು ಒಟ್ಟಿಗೆ ಸೇರಿ ನನ್ನ ತೆರಿಗೆ ನನ್ನ ಹಕ್ಕು ಅದನ್ನು ವರುಣಗೆ, ಕಲಬುರಗಿ ಚಿಕ್ಕಮಗಳೂರಿಗೆ ತೆಗೆದುಕೊಂಡು ಹೋಗಂಗಿಲ್ಲ ಅಂದ್ರೆ ಏನು ಮಣ್ಣು ತಿಂತೀರಾ ಎಂದು ಮಾಜಿ ಸಚಿವ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ದೇಶದಲ್ಲಿ ಶೇ 9 ಜನರು ತೆರಿಗೆ ಡಿಕ್ಲೇರ್ ಮಾಡಿಕೊಳ್ತಾರೆ. ಅದ್ರಲ್ಲಿ 10 ಸಾವಿರಕ್ಕಿಂತ ಹೆಚ್ಚು ಕಟ್ಟುವವರು ಕೇವಲ ಶೇ 2.5 ರಷ್ಟು ಜನ ಮಾತ್ರ. ಅದರಲ್ಲಿ ಶೇ 2.5 ತೆರಿಗೆ ಕೊಡುವ ಜನ ಆ ತೆರಿಗೆ ನನ್ನ ಹಕ್ಕು ಅಂದ್ರೆ, ನೀವೇನು ಮಾಡ್ತೀರಿ?. ಏನು ಮಾಡೋಕೆ ಆಗುತ್ತೆ ಎಂದು ಹೇಳಿದರು.
ತಮ್ಮ ವೈಫಲ್ಯ ಮುಚ್ಚಿ ಹಾಕಿಕೊಳ್ಳಲು ಬೇಕಾಬಿಟ್ಟಿ ಗ್ಯಾರಂಟಿ ಘೋಷಣೆ ಮಾಡಿದರು. ಅದನ್ನು ಈಡೇರಿಸಲು ಆಗದಿದ್ದಕ್ಕೆ ಎಸ್ಸಿ-ಎಸ್ಪಿ ಅನುದಾನ ಕಡಿತ ಮಾಡಿದ್ದಾರೆ. ಈಗ ಅದು ಸಾಕಾಗುತ್ತಿಲ್ಲ. ಕೇಂದ್ರದ ಮೇಲೆ ಗೂಬೆ ಕೂರಿಸ್ತಿದ್ದಾರೆ ಎಂದು ಆರೋಪಿಸಿದರು.
ಉತ್ತರ ಪ್ರದೇಶದ ಜನಸಂಖ್ಯೆ ಎಷ್ಟು? ಉತ್ತರ ಪ್ರದೇಶ, ಕರ್ನಾಟಕದ ಜನಸಂಖ್ಯೆ ಸಮ ಇದೆಯೇ?. ಮಾನದಂಡವನ್ನು ಕರ್ನಾಟಕಕ್ಕೆ ಒಂದು ಗುಜರಾತಿಗೊಂದು ಅನುಸರಿಸಲಾಗುತ್ತಿದಾ? ಅತಿ ಹೆಚ್ಚು ತೆರಿಗೆ ನೀಡ್ತಿರೋದು ಮಹಾರಾಷ್ಟ್ರಕ್ಕೂ ಒಂದೇ ಮಾನದಂಡ, ಕರ್ನಾಟಕಕ್ಕೂ ಒಂದೇ, ಒಂದೇ ಒಂದು ಬಿಜೆಪಿ ಸೀಟ್ ಇಲ್ಲದಂತಹ ಕೇರಳ ತಮಿಳುನಾಡಿಗೂ ಅದೇ ಮಾನದಂಡ. ಆದ್ರೂ ನೀವು ದುರುದ್ದೇಶದಿಂದ ಆರೋಪ ಮಾಡ್ತಿದ್ದೀರಿ ಎಂದರು.
ಇದನ್ನೂಓದಿ: ಡಿ.ಕೆ.ಸುರೇಶ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಚಿಂತನೆ: ಸಂಸದ ಬಿ.ವೈ.ರಾಘವೇಂದ್ರ