ರಾಮನಗರ: ಚನ್ನಪಟ್ಟಣಕ್ಕೆ ಅಚ್ಚರಿ ಅಭ್ಯರ್ಥಿ ಯಾರೆಂದು ನನಗೆ ಗೊತ್ತಿದೆ. ಈಗಾಗಲೇ ಅಚ್ಚರಿ ಅಭ್ಯರ್ಥಿ ಕೊಲೆ ಕೇಸಿನಲ್ಲಿ ಜೈಲು ಸೇರಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಟೀಕಿಸಿದರು.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿಂದು ಮಾತನಾಡಿದ ಅವರು, ''ಮಾಜಿ ಸಂಸದರು ಅಚ್ಚರಿಯ ಅಭ್ಯರ್ಥಿ ಎಂದು ಹೇಳುತ್ತಿದ್ದರಲ್ಲಾ, ಆ ಅಭ್ಯರ್ಥಿ ಈಗ ಮರ್ಡರ್ ಕೇಸ್‌ನಲ್ಲಿ ಸಿಲುಕಿಕೊಂಡು ಜೈಲಿನಲ್ಲಿದ್ದಾರೆ. ಅವರನ್ನೇ ಅಚ್ಚರಿ ಅಭ್ಯರ್ಥಿ ಮಾಡಬೇಕೆಂದಿದ್ದರು. ಅದು ಈಗ ಆಗಲ್ಲ, ಬಹುಶಃ ಇನ್ನೊಬ್ಬ ಅಚ್ಚರಿ ಅಭ್ಯರ್ಥಿಯನ್ನು ಹುಡುಕಬಹುದು ನೋಡೋಣ'' ಎಂದರು.
ಯಾರು ಸರ್ ಆ ನಟ ಎಂಬ ಮಾಧ್ಯಮದವರ ಪ್ರಶ್ನೆಗೆ, ''ಚಿತ್ರನಟರು, ಕಾಂಗ್ರೆಸ್ ಪರ ಹೆಚ್ಚಿಗೆ ಪ್ರಚಾರವನ್ನು ಮಾಡಿದವರು. ಮುಂದಿನ ದಿನಗಳಲ್ಲಿ ಅವರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡು ಆ ಮೂಲಕ ಚುನಾವಣೆಯನ್ನು ಎದುರಿಸಬೇಕು ಎಂದು ನಮ್ಮ ಡಿ.ಕೆ.ಬ್ರದರ್ಸ್ ಪ್ಲಾನ್ ಮಾಡಿದ್ರು. ಅವರು ಯಾರು ಅಂತ ನೀವೇ ಊಹೆ ಮಾಡಿಕೊಳ್ಳಿ'' ಎಂದು ತಿಳಿಸಿದರು.
''ಇದು ಹೊಸದು, ನಾನು ಮಾಧ್ಯಮಗಳ ಮೂಲಕ ನೋಡಿ ತಿಳಿದುಕೊಂಡಿದ್ದೇನೆ. ಆ ನಟನಿಗೂ ರಾಜಕೀಯಕ್ಕೆ ಬರಬೇಕೆಂಬ ಆಸೆ ಇತ್ತು. ಸಾರ್ವಜನಿಕ ಬದುಕಿಗೆ ಬರಬೇಕು ಅಂತ ಇತ್ತೇನೋ. ಪಾಪ ಅನಾಹುತ ಆಗೋಗಿದೆ'' ಎಂದರು.
ಮಂಡ್ಯ ಜಿಲ್ಲೆಯಿಂದ ಈಗಾಗಲೇ ಸಂಸದರಾಗಿ ಹೆಚ್.ಡಿ.ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಅಚ್ಚರಿ ಅಭ್ಯರ್ಥಿ ನಿಲ್ಲಿಸುವುದಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ಕೂಡ ಘೋಷಣೆ ಮಾಡಿದ್ದರು. ಇದಲ್ಲದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಬೇಕಾದರೆ ಬಲಿಷ್ಠ ಅಭ್ಯರ್ಥಿ ನಿಲ್ಲಿಸಬೇಕೆಂದು ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿತ್ತು.
ಚನ್ನಪಟ್ಟಣ ಬೈ ಎಲೆಕ್ಷನ್ ವಿಚಾರವಾಗಿ ಮಾತನಾಡಿದ ಸಿ.ಪಿ.ಯೋಗೇಶ್ವರ್, ನಾಲ್ಕು ಕ್ಷೇತ್ರಗಳ ಪೈಕಿ ಚನ್ನಪಟ್ಟಣದಲ್ಲಿ ಬಿಜೆಪಿಗೆ ಅಸ್ತಿತ್ವ ಇದೆ. ಇಲ್ಲಿ ಬಿಜೆಪಿಗೆ ಹೆಚ್ಚು ಬಲ ಇದೆ. ಕನಕಪುರ, ರಾಮನಗರ, ಮಾಗಡಿಯಲ್ಲಿ ಜೆಡಿಎಸ್ಗೆ ಶಕ್ತಿ ಇದೆ. ಆದರೆ, ಪಕ್ಷದ ವರಿಷ್ಠರು ಏನು ತೀರ್ಮಾನ ಮಾಡ್ತಾರೆ ನೋಡೊಣ ಎಂದು ಹೇಳಿದರು.
ವಸ್ತುಸ್ಥಿತಿ ಏನಿದೆ ಅನ್ನೋದನ್ನು ನಾನು ಹೇಳಿದ್ದೇನೆ. ಎರಡೂ ಪಕ್ಷಗಳು ಸೇರಿ ಚುನಾವಣೆ ಎದುರಿಸುತ್ತೇವೆ. ಎನ್ಡಿಎ ಅಭ್ಯರ್ಥಿ ಯಾರೇ ಆದ್ರೂ ನಾವು ಕೆಲಸ ಮಾಡ್ತೇವೆ. ಲೋಕಸಭಾ ಚುನಾವಣೆಯಲ್ಲಿ ಜೊತೆಯಾಗಿ ಕೆಲಸ ಮಾಡಿ ಸಕ್ಸಸ್ ಸಿಕ್ಕಿದೆ. ಹಾಗಾಗಿ ಯಾವುದೇ ಗೊಂದಲ ಇಲ್ಲದೇ ಈ ಚುನಾವಣೆಯಲ್ಲೂ ಒಟ್ಟಾಗಿ ಕೆಲಸ ಮಾಡ್ತೇವೆ ಎಂದು ತಿಳಿಸಿದರು.
ದರ್ಶನ್ ಪ್ರಕರಣ: ಈ ಬಗ್ಗೆ ಕಾಂಗ್ರೆಸ್ ಮುಖಂಡ ಎಂ.ಸಿ.ಅಶ್ವಥ್ ಮಾತನಾಡಿ, ಮೊದಲಿನಿಂದಲೂ ಸಿ.ಪಿ.ಯೋಗೇಶ್ವರ್ ಅವರು ಇಂತಹ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರು. ಯಾವುದೇ ಕಾರಣಕ್ಕೂ ನಟ ದರ್ಶನ್ ಅವರನ್ನು ಚನ್ನಪಟ್ಟಣ ಬೈ ಎಲೆಕ್ಷನ್ನಲ್ಲಿ ಕರೆತರುವ ಬಗ್ಗೆ ಚರ್ಚೆಯೇ ಆಗಿಲ್ಲ. ಆದರೆ ಡಿ.ಕೆ.ಬ್ರದರ್ಸ್‌ಗೆ ಕೆಟ್ಟ ಹೆಸರು ತರಲು ಈ ಹೇಳಿಕೆ ನೀಡಿದ್ದಾರೆ ಎಂದರು.
ಮೊದಲಿನಿಂದಲೂ ಅವರ ಮೇಲೆ ಇವರಿಗೆ ರಾಜಕೀಯ ದ್ವೇಷ ಇದೆ. ಏನಾದರೂ ದಾಖಲೆ ಇದ್ದರೆ ಅವರು ಬಿಡುಗಡೆ ಮಾಡಲಿ. ಡಿ.ಕೆ.ಬ್ರದರ್ಸ್ ಬಗ್ಗೆ ಮಾತನಾಡುವ ನೈತಿಕತೆ ಇವರಿಗೆ ಇಲ್ಲ. ಮುಂದೆ ಸಿಎಂ ಆಗ್ತಾರೆಂಬ ಭಯಕ್ಕೆ ಈ ರೀತಿಯ ಹೇಳಿಕೆ ಕೊಡುತ್ತಾರೆ. ಉಪ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರನ್ನೇ ನಿಲ್ಲಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಕೇಂದ್ರ ಸಚಿವರಾಗಿ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿಗೆ ಅದ್ಧೂರಿ ಸ್ವಾಗತ - H D Kumaraswamy