ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತಮ್ಮ ಪುತ್ರನಿಗೆ ಅವಕಾಶ ಸಿಗದಿರುವುದಕ್ಕೆ ಅಸಮಾಧಾನಗೊಂಡು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ವಿರುದ್ಧ ಬಂಡಾಯ ಸಾರಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭೇಟಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರಾಕರಿಸಿದ್ದಾರೆ.
ಬಿಜೆಪಿ ಹೈಕಮಾಂಡ್ ಅವರಲ್ಲಿ ಒಬ್ಬರಾದ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ತಮ್ಮ ಅಸಮಾಧಾನ ವ್ಯಕ್ತಪಡಿಸುವ ಉದ್ದೇಶದಿಂದ ಈಶ್ವರಪ್ಪ ಬುಧವಾರ ದೆಹಲಿಗೆ ತೆರಳಿದ್ದರು. ಆದರೆ, ಬಿಜೆಪಿಯ ರೆಬೆಲ್ ನಾಯಕನಿಗೆ ಅಮಿತ್ ಶಾ ಭೇಟಿ ಮಾಡಲು ಸಾಧ್ಯವಾಗಲಿಲ್ಲ.
ಕೇಂದ್ರ ಸಚಿವರ ಜೊತೆ ಸಭೆ ಸಾಧ್ಯವಾಗದಿರುವುದಕ್ಕೆ ದೆಹಲಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಈಶ್ವರಪ್ಪನವರು, ಬುಧವಾರ ರಾತ್ರಿ 10 ಗಂಟೆಯ ನಂತರ ಅಮಿತ್ ಶಾ ಭೇಟಿಗೆ ಸಮಯ ನಿಗದಿಯಾಗಿತ್ತು. ಆದರೆ, ಅಮಿತ್ ಶಾ ಅವರು ಭೇಟಿಗೆ ಲಭ್ಯವಿರುವುದಿಲ್ಲ ಎನ್ನುವ ಮಾಹಿತಿ ಬಂದಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಲೋಕಸಭೆ ಚುನಾವಣೆಯಲ್ಲಿ ಸೋಲಲಿ ಎನ್ನುವ ಅಪೇಕ್ಷೆ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಇರಬಹುದು ಎಂದು ಆರೋಪಿಸಿದರು.
ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ತಾವು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರನ್ನು ಸೋಲಿಸಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಕೈ ಬಲಪಡಿಸಲಾಗುವುದು. ಬಿಜೆಪಿ ಹೈಕಮಾಂಡ್, ತಾವು ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯಲು ಮತ್ತೆ ಮಾತುಕತೆಗೆ ಕರೆದರೆ ಹೋಗುವುದಿಲ್ಲ ಎಂದು ಈಶ್ವರಪ್ಪ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಈಶ್ವರಪ್ಪ ಅಸಮಾಧಾನಕ್ಕೆ ಕಾರಣವೇನು: ಈಶ್ವರಪ್ಪ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ತಮ್ಮ ಪುತ್ರ ಕಾಂತೇಶ್ ಅವರಿಗೆ ಬಿಜೆಪಿ ಟಿಕೆಟ್ ಅಪೇಕ್ಷಿಸಿದ್ದರು. ಚುನಾವಣೆಗೆಗಾಗಿ ಅವರ ಪುತ್ರ ಕಾಂತೇಶ್ ಹಾವೇರಿ ಕ್ಷೇತ್ರದಲ್ಲಿ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಆದರೆ, ಅಂತಿಮವಾಗಿ ಟಿಕೆಟ್ ಕೈತಪ್ಪಿತ್ತು. ಬದಲಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ದೊರೆತಿದೆ. ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಈಶ್ವರಪ್ಪನವರು ಪುತ್ರನಿಗೆ ಟಿಕೆಟ್ ಕೈತಪ್ಪಲು ಮಾಜಿ ಸಿಎಂ ಯಡಿಯೂರಪ್ಪನವರೇ ಕಾರಣಕರ್ತರೆಂದು ನೇರವಾಗಿ ಆರೋಪಿಸಿದ್ದಾರೆ.
ಶಿವಮೊಗ್ಗ ಕ್ಷೇತ್ರದಲ್ಲಿ ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಸೋಲಿಸಲು ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿ, ಬಿಎಸ್ವೈ ಕುಟುಂಬದ ವಿರುದ್ಧ ರಾಜಕೀಯ ಸಮರ ಸಾರಿದ್ದಾರೆ. ಮಂಗಳವಾರ ಬೆಂಗಳೂರಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಅಮಿತ್ ಶಾ ಮೊಬೈಲ್ನಲ್ಲಿ ಮಾತನಾಡಿ, ಈಶ್ವರಪ್ಪ ಬಂಡಾಯ ಶಮನಗೊಳಿಸಲು ಪ್ರಯತ್ನ ನಡೆಸಿದ್ದರೆನ್ನಲಾಗಿದೆ. ಮಾತುಕತೆ ಸಂಬಂಧ ದೆಹಲಿಗೆ ಬರಲು ಅಮಿತ್ ಶಾ ಈಶ್ವರಪ್ಪನವರಿಗೆ ಬುಲಾವ್ ನೀಡಿದ್ದರೆನ್ನಲಾಗಿತ್ತು. ಆದರೆ, ಅಂತಿಮವಾಗಿ ದೆಹಲಿಯಲ್ಲಿ ಬುಧವಾರ ಇಬ್ಬರೂ ಮುಖಂಡರ ಭೇಟಿ ಸಾಧ್ಯವಾಗಿಲ್ಲ.
ಇದನ್ನೂ ಓದಿ: "ನಾನು ದೆಹಲಿಯಲ್ಲಿ ಅಮಿತ್ ಶಾ ಮನವೊಲಿಸಿ ಸ್ಪರ್ಧಿಸುತ್ತೇನೆ": ಕೆ.ಎಸ್. ಈಶ್ವರಪ್ಪ