ಮೈಸೂರು: ಕಾಂಗ್ರೆಸ್ ಕಾರ್ಪೊರೇಟರ್ ಕುಟುಂಬಕ್ಕೆ ರಕ್ಷಣೆ ಕೊಡಲು ಈ ಸರ್ಕಾರಕ್ಕೆ ಆಗಲಿಲ್ಲ, ಇನ್ನು ರಾಜ್ಯಕ್ಕೆ ಯಾವ ರಕ್ಷಣೆ ಕೊಡುತ್ತಾರೆ. ಈ ಕೊಲೆ ಬಗ್ಗೆ ಸರಿಯಾದ ಮಾಹಿತಿ ತಿಳಿಯದೇ ಕುಟುಂಬಕ್ಕೆ ನೋವು ಆಗುವ ರೀತಿ ಹೇಳಿಕೆ ನೀಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಕ್ಷೇಪಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಕೊಲೆ ಪ್ರಕರಣದಲ್ಲಿ ಸರಿಯಾದ ಮಾಹಿತಿ ಪಡೆಯದ ಸಿಎಂ, ಗೃಹ ಸಚಿವರು ಹಾಗೂ ಉಪಮುಖ್ಯಮಂತ್ರಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಈ ಪ್ರಕರಣದ ಸೂಕ್ಷ್ಮತೆ ಅರಿತು ಮಾತನಾಡಬೇಕು. ಇಂಥ ಹೇಳಿಕೆ ನೀಡಿ ಆ ಕುಟುಂಬದ ವರ್ಚಸ್ಸು ಎಲ್ಲಿಗೆ ತೆಗೆದುಕೊಂಡು ಹೋಗಿದ್ದಾರೆ ಇವರು ಎಂದು ಪ್ರಶ್ನಿಸಿದರು. ಯುವತಿ ತಂದೆ ಕಣ್ಣೀರಿಟ್ಟು ಮನವಿ ಮಾಡಿದರೂ ಅವರ ರಕ್ಷಣೆಗೆ ಈ ಸರ್ಕಾರ ನಿಲ್ಲುತ್ತಿಲ್ಲ ಎಂದು ಆರೋಪಿಸಿದರು.
ಒಂದು ಸಮುದಾಯದ ಓಲೈಕೆ: ''ರಾಜ್ಯ ಸರ್ಕಾರ ಒಂದು ಸಮುದಾಯದ ಓಲೈಕೆಗಾಗಿ ಇದೆ. ಆದ್ದರಿಂದ ಇಂತಹ ಘಟನೆಗಳು ನಡೀತಾ ಇವೆ. ಗದಗನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಆಗಿದ್ದು, ಮೈಸೂರಿನಲ್ಲಿ ಮೋದಿ ಆಲ್ಬಂ ಸಾಂಗ್ ಮಾಡಿದ್ದ ಹುಡುಗನಿಗೆ ಬಿಯರ್ ಬಾಟಲ್ನಿಂದ ಹೊಡೆದಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಯುವಕರ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲಾಗಿದೆ. ಇದೆಲ್ಲ ವಿಧಾನ ಸೌಧದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗಿದವರ ರಕ್ಷಣೆ ಫಲ ಇದು'' ಎಂದು ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು.
ಚೊಂಬು ಹಿಡಿದು ಭಿಕ್ಷೆ ಕೇಳ್ತಾ ಇದ್ದಾರೆ: ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಚೊಂಬು ಜಾಹೀರಾತಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ''11 ತಿಂಗಳಿಂದ ರಾಜ್ಯವನ್ನು ಲೂಟಿ ಮಾಡಿ, ರಾಜ್ಯದ ಬೊಕ್ಕಸ ಖಾಲಿಯಾಗಿದೆ. ನಾವು ಭಿಕ್ಷುಕರಾಗಿದ್ದೇವೆ. ನೀವು ಏನಾದರೂ ಭಿಕ್ಷೆ ಕೊಡಿ ಎಂದು ಮೋದಿ ಅವರನ್ನು ಕೇಳಲು ಜಾಹೀರಾತು ಕೊಟ್ಟಿದ್ದಾರೆ. ಈ ನಡವಳಿಕೆ ಸರ್ಕಾರದ ಸಣ್ಣತನ ತೋರಿಸುತ್ತದೆ. ದೇಶದಲ್ಲಿ ಬೆಲೆ ಏರಿಕೆಯಾದಾಗ ಅದನ್ನ ನಿಯಂತ್ರಿಸಲು ಆರ್ಬಿಐ ಹಾಗೂ ಕೇಂದ್ರ ಸರ್ಕಾರ ಇದೆ. ಅದರ ಕೆಲಸ ಅದು ಮಾಡುತ್ತದೆ. ಅದನ್ನ ಬಿಟ್ಟು ಈ ರೀತಿ ಜಾಹೀರಾತು ನೀಡಿ ಸಣ್ಣತನ ಪ್ರದರ್ಶನ ಮಾಡಬಾರದು'' ಎಂದರು.
ಸಿದ್ದರಾಮಯ್ಯರಿಂದ ಕಾಂಗ್ರೆಸ್ ಸರ್ವನಾಶ: ''ಮಂಡ್ಯದಲ್ಲಿ ಏನಾದರೂ ಮಾಡಿ ಕುಮಾರಸ್ವಾಮಿ ಅವರನ್ನು ಸೋಲಿಸಲೇಬೇಕು ಎಂದು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ತಂತ್ರ- ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಆದರೆ ಮಂಡ್ಯದ ನನ್ನ ಜನ ಅದಕ್ಕೆಲ್ಲ ಅವಕಾಶ ಕೊಡುವುದಿಲ್ಲ. ಜೆಡಿಎಸ್ ಮುಗಿಸುವುದು ಇವರ ಅಜೆಂಡಾ ಆಗಿದೆ. ಆದರೆ ಜೆಡಿಎಸ್ ಮುಗಿಸಲು ಆಗುವುದಿಲ್ಲ. ಬದಲಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ಅನ್ನು ಸಿದ್ದರಾಮಯ್ಯನವರು ಸರ್ವನಾಶ ಮಾಡುತ್ತಾರೆ'' ಎಂದು ಹೆಚ್ಡಿಕೆ ಟೀಕಿಸಿದರು.
ಸಂಸದೆ ಸುಮಲತಾ ಬೇರೆ ಕಡೆ ಪ್ರಚಾರ ಮಾಡ್ತಾ ಇದ್ದಾರೆ, ಮಂಡ್ಯಕ್ಕೆ ಏಕೆ ಬಂದಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೆಚ್ ಡಿ ಕುಮಾರಸ್ವಾಮಿ, ಸಂಸದೆ ಸುಮಲತಾ ಈಗ ಬಿಜೆಪಿ ಸೇರಿಕೊಂಡಿದ್ದಾರೆ. ಆ ಪಕ್ಷ ಎಲ್ಲೆಲ್ಲಿ ಪ್ರಚಾರ ಮಾಡಿ ಎಂದು ಹೇಳುತ್ತದೆಯೋ, ಅಲ್ಲಲ್ಲಿ ಪ್ರಚಾರ ಮಾಡುತ್ತಾರೆ. ಇನ್ನೂ 3 ದಿನ ಕಾಲಾವಕಾಶ ಇದೆ, ನೋಡೋಣ ಎಂದು ಕುಮಾರಸ್ವಾಮಿ ಹೇಳಿದರು.