ಬೆಂಗಳೂರು: ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಶಿರಹಟ್ಟಿ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಮುನಿಸು ಕೈಬಿಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ದಿಂಗಾಲೇಶ್ವರ ಶ್ರೀಗಳು ಸಮ್ಮತಿಸಿದ್ದಾರೆ ಎನ್ನಲಾಗಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಗುಡುಗಿದ್ದ ದಿಂಗಾಲೇಶ್ಚರ ಸ್ವಾಮೀಜಿ, ಚುನಾವಣೆ ವೇಳೆ ಬಿಜೆಪಿಗೆ ಶಾಕ್ ನೀಡಿದ್ದರು. ಅಸಮಾಧಾನಿತರ ಮನವೊಲಿಕೆಯಲ್ಲಿ ತೊಡಗಿದ್ದ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ಇದೀಗ ಶ್ರೀಗಳ ಜೊತೆ ಮಾತುಕತೆ ನಡೆಸಿದ್ದಾರೆ. ರಾಜ್ಯದೆಲ್ಲೆಡೆ ಚುನಾವಣೆ ಮೇಲೆ ಪರಿಣಾಮ ಬೀರಬಹುದಾದ ಆತಂಕ ಹಿನ್ನೆಲೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿಗೆ ಯಡಿಯೂರಪ್ಪ ಕರೆ ಮಾಡಿದ್ದಾರೆ.
ನಿಮ್ಮ ಸಹಕಾರ ನಮಗೆ ಅತ್ಯಗತ್ಯವಿದೆ. ಪ್ರಹ್ಲಾದ್ ಜೋಶಿ ಅವರಾಗಲಿ, ಬೆಂಬಲಿಗರಾಗಲಿ ನಿಮ್ಮ ಮನಸ್ಸು ನೋಯಿಸುವ ಕೆಲಸ ಮಾಡಿಲ್ಲ. ಆ ರೀತಿ ಭಾವಿಸುವುದು ಬೇಡ, ನಿಮ್ಮ ಜೊತೆಗೆ ನಾವಿದ್ದೇವೆ. ಲಿಂಗಾಯತ ಸಮುದಾಯದ ಪರ ನಾವೆಲ್ಲರೂ ಇದ್ದೇವೆ. ನಿಮ್ಮ ಸಹಕಾರ ನಮಗೆ ಮತ್ತು ಪಕ್ಷಕ್ಕೆ ಅತ್ಯಗತ್ಯ. ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದ್ದಾರೆ. ಬಿಎಸ್‌ವೈ ಮನವಿಗೆ ದಿಂಗಾಲೇಶ್ವರ ಶ್ರೀಗಳು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಪ್ರಹ್ಲಾದ್ ಜೋಶಿಯವರನ್ನು ಎದುರಿಸಲು ನಾನೊಬ್ಬನೇ ಸಾಕು: ಫಕೀರ ದಿಂಗಾಲೇಶ್ವರ ಸ್ವಾಮೀಜಿ
ಜೋಶಿ ಸೋಲಿಸುವುದೇ ನಮ್ಮ ಗುರಿ ಎಂದಿದ್ದ ದಿಂಗಾಲೇಶ್ವರ ಶ್ರೀಗಳು: ಇದೇ ವಿಚಾರ ಸಂಬಂಧ ಭಾನುವಾರ ಹುಬ್ಬಳ್ಳಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ್ದ ದಿಂಗಾಲೇಶ್ವರ ಸ್ವಾಮೀಜಿಯವರು, ''ಧಾರವಾಡ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದಮನಕಾರಿ ಆಡಳಿತ ನಡೆಸುತ್ತಿದ್ದಾರೆ. ಅವರ ಬದಲಾವಣೆಗೆ ಕೊಟ್ಟ ಸಮಯ ಮುಗಿದಿದೆ. ತಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಜೋಶಿ ಅವರನ್ನು ಸೋಲಿಸುವುದೇ ನಮ್ಮ ಗುರಿ'' ಎಂದು ಹೇಳಿದ್ದರು.
''ಜೋಶಿ ಅವರು ಲಿಂಗಾಯತರು ಸೇರಿದಂತೆ ಇತರ ಸಮುದಾಯಕ್ಕೂ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಅವರನ್ನು ಮಾರ್ಚ್ 31ರೊಳಗೆ ಬದಲಾವಣೆ ಮಾಡಬೇಕು ಎಂದು ಗಡುವು ನೀಡಿದ್ದೇವೆ. ಕ್ಷೇತ್ರಕ್ಕೆ ಬಿಜೆಪಿ ಹೈಕಮಾಂಡ್ ಲಿಂಗಾಯತ ಸಮುದಾಯದ ನಾಯಕನನ್ನು ಕಣಕ್ಕಿಳಿಸಿ ಗೆಲ್ಲಿಸಬೇಕು'' ಎಂದು ಆಗ್ರಹಿಸಿದ್ದರು. ಇದೇ ವೇಳೆ, ''ಮುಂದಿನ ನಿರ್ಧಾರವನ್ನು ಚರ್ಚಿಸಲು ಏಪ್ರಿಲ್ 2 ರಂದು ಧಾರವಾಡದಲ್ಲಿ ಭಕ್ತರ ಸಭೆ ಕರೆಯಲಾಗಿದ್ದು, ಅಂದು ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಮ್ಮ ನಡೆ ಇರಲಿದೆ'' ಎಂದಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಕೋಟ್ಯಂತರ ಹಣ ಲೂಟಿ ಮಾಡಿದೆ, ಹೀಗಾಗಿ ಐಟಿ ನೋಟಿಸ್ ಕೊಟ್ಟಿದೆ: ಪ್ರಹ್ಲಾದ್ ಜೋಶಿ