ಹಾವೇರಿ: ಈಶ್ವರಪ್ಪ ಅವರಿಗೆ ವರಿಷ್ಠರು ಸಂದೇಶ ಕಳುಹಿಸುತ್ತಾರೆ ಮತ್ತು ನಮ್ಮ ನಾಯಕರು ಅವರನ್ನು ಭೇಟಿಯಾಗುತ್ತಾರೆ. ನಿನ್ನೆ ಈಶ್ವರಪ್ಪ ಅವರ ಅಸಮಾಧಾನ ಸಂಬಂಧ ಯಡಿಯೂರಪ್ಪನವರ ಬಳಿ ಮಾತನಾಡಿದ್ದೇನೆ. ಇನ್ನೆರಡು ದಿನಗಳಲ್ಲಿ ಅಸಮಾಧಾನ ಬಗೆಹರಿಸುತ್ತೇನೆ ಎಂದು ಹೇಳಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಾನಗಲ್ನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಸ್ನೇಹ ಅಗಾಧವಾದದ್ದು. ಹಲವಾರು ಬಾರಿ ಅವರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ ಮತ್ತೆ ಒಂದಾಗಿದ್ದಾರೆ. ಅವರ ಗುಟ್ಟು ಇವರಿಗೆ ಗೊತ್ತು, ಇವರ ಗುಟ್ಟು ಅವರಿಗೆ ಗೊತ್ತು. ಹೀಗಾಗಿ ಸೌಹಾರ್ದಯುತವಾಗಿ ಎಲ್ಲವೂ ಬಗೆಹರಿಯುತ್ತದೆ ಎಂದರು.
ನಿರೀಕ್ಷೆ ಮೀರಿ ಜನರು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಬೆಂಬಲ ನೀಡದ ಜನರೂ ಈಗ ಬೆಂಬಲಿಸುತ್ತಿದ್ದಾರೆ. ಬಿಜೆಪಿ ಅಲೆ ಇಡೀ ಕರ್ನಾಟಕದಲ್ಲಿ ಇದೆ. ನಿನ್ನೆ ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಹೋದ ನಂತರ ರಾಜ್ಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಅವರು ನಾಳೆ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಇನ್ನೂ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ಮತ್ತು ನಂತರ ಪ್ರಧಾನಿ ಮೋದಿ ಬಂದು ಹೋಗುವುದರಿಂದ ಬಿಜೆಪಿ ಅಭ್ಯರ್ಥಿಗಳಿಗೆ ಮತದಾರರಿಂದ ದೊಡ್ಡ ಪ್ರಮಾಣದ ಬೆಂಬಲ ಮತದಾರರರಿಂದ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮಗೆ ಬೇಕಾದಂತೆ ಚುನಾವಣೆ ವೇಳಾಪಟ್ಟಿ ಮಾಡಿಕೊಂಡಿದ್ದಾರೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಕಾನೂನು ಸುವ್ಯವಸ್ಥೆ ಕಾಪಾಡುವ ಅವಶ್ಯಕತೆ ಇದೆ. ಭದ್ರತಾ ಪಡೆಗಳ ಮೂವ್ಮೆಂಟ್ಗೆ ಸಮಯ ಬೇಕಾಗುತ್ತದೆ. ಕಳೆದ ಎರಡು ಬಾರಿಯೂ 7 ಹಂತದಲ್ಲಿ ಚುನಾವಣೆ ನಡೆದಿದೆ. ಸುಮ್ಮನೆ ಅವರು ರಾಜಕೀಯ ವಿಶ್ಲೇಷಣೆ ಮಾಡುವ ರೀತಿ ಹೇಳುತ್ತಾರೆ, ಅದಕ್ಕೆ ಅರ್ಥ ಇಲ್ಲ ಎಂದು ಟಾಂಗ್ ಕೊಟ್ಟರು.
ಇಂದು ಹಾನಗಲ್, ಹಿರೇಕೆರೂರಿನ ಪಕ್ಷದ ಪ್ರಮುಖರನ್ನು ಭೇಟಿಯಾಗಿ ಸಭೆ ಮಾಡುತ್ತಿದ್ದೇವೆ. ಸಂಜೆ ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಿಗ್ಗಾವಿಯಲ್ಲಿ ಸಭೆ ಇದೆ. ನಾಳೆ ಗದಗ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಯಡಿಯೂರಪ್ಪ, ವಿಜಯೇಂದ್ರ ಕಪಿ ಮುಷ್ಟಿಯಲ್ಲಿ ರಾಜ್ಯ ಬಿಜೆಪಿ: ಕೆ.ಎಸ್.ಈಶ್ವರಪ್ಪ