ಹಾವೇರಿ : ಮಾಜಿ ಸಿಎಂ ಡಿ.ಎಸ್ ಸದಾನಂದಗೌಡ ಅವರು ಬಿಜೆಪಿಯಲ್ಲೇ ಮುಂದು ವರೆಯುತ್ತಾರೆ. ಅವರಿಗೆ ಪಕ್ಷದ ಮೇಲಿನ ಬದ್ಧತೆ, ಅಭಿಮಾನ ಕಡಿಮೆ ಆಗಲ್ಲ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಣೆಬೆನ್ನೂರು ತಾಲೂಕಿನ ಮಾಕನೂರು ಕ್ರಾಸ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ಬಿಜೆಪಿ ಶುದ್ಧೀಕರಣ ಮಾಡ್ತೀನಿ ಎಂಬ ಸದಾನಂದ ಗೌಡ ಹೇಳಿಕೆ ವಿಚಾರ ಕುರಿತಾಗಿ ಪ್ರತಿಕ್ರಿಯಿಸಿ, ಸದಾನಂದಗೌಡರು ಹಿರಿಯರಿದ್ದಾರೆ. ಅವರು ಅವರದೇ ಆದ ನಿಲುವು ತೆಗೆದುಕೊಂಡಿದ್ದಾರೆ. ಅವರಿಗೆ ಪಕ್ಷದ ಮೇಲಿನ ಬದ್ಧತೆ ಹಾಗೂ ಅಭಿಮಾನ ಎಂದೂ ಕಡಿಮೆ ಆಗಲ್ಲ ಎಂದರು.
ತಂದೆ ಮಕ್ಕಳಿಂದ ಬಿಜೆಪಿ ಉಳಿಸುತ್ತೇವೆ ಎಂಬ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ವಿಚಾರ ಕುರಿತಂತೆ ಮಾತನಾಡಿ, ಈಶ್ವರಪ್ಪನವರು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಕೆಲವೇ ಕೆಲವು ದಿನಗಳಲ್ಲಿ ನಮ್ಮ ವರಿಷ್ಟರು ಗಂಭೀರವಾಗಿ ಅವರೊಂದಿಗೆ ಮಾತನಾಡುತ್ತಾರೆ. ಎಲ್ಲ ಸರಿಯಾಗುತ್ತದೆ. ನಾಳೆ ಪಾರ್ಲಿಮೆಂಟರಿ ಬೋರ್ಡ್ ಮೀಟಿಂಗ್ ಇದೆ. ಹಾಗಾಗಿ ಎರಡನೇ ಪಟ್ಟಿ ಬಿಡುಗಡೆ ಆಗಬಹುದು ಎಂಬ ವಿಶ್ವಾಸವನ್ನು ಬೊಮ್ಮಾಯಿ ವ್ಯಕ್ತಪಡಿಸಿದರು.
ಬಿಜೆಪಿ ಅಂದರೆ ಭಾವನೆ, ಕಾಂಗ್ರೆಸ್ ಅಂದರೆ ಬದುಕು ಎಂಬ ಸಚಿವ ಹೆಚ್.ಕೆ ಪಾಟೀಲ್ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರ ಹೇಳಿದ್ದಕ್ಕೆಲ್ಲಾ ಉತ್ತರ ಕೊಡುವ ಅಗತ್ಯ ಇಲ್ಲ. ಯಾವುದು ಬದುಕು ಎಂದು ಜನರಿಗೆ ಗೊತ್ತಿದೆ. ಬಿಜೆಪಿ ಅಧಿಕಾರದಲ್ಲಿರುವಾಗ ಕರ್ನಾಟಕದಲ್ಲಿ ನೀರಾವರಿ ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಆಗಿದೆ. ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿಶೇಷ ಕಾರ್ಯಕ್ರಮ ಮಾಡಿದ್ದರು. ಸಾಮಾಜಿಕ ನ್ಯಾಯ, ಆರ್ಥಿಕ ಬೆಳವಣಿಗೆ ಇವೆರಡೂ ಬದುಕಿಗೆ ಸಂಬಂಧಪಟ್ಟಿವೆ. ಬಿಜೆಪಿ ಕಾಲದಲ್ಲೇ ಕರ್ನಾಟಕ ಆರ್ಥಿಕವಾಗಿ ಸದೃಢವಾಗಿದೆ ಎಂದು ಟಾಂಗ್ ಕೊಟ್ಟರು.
ಕಾಂಗ್ರೆಸ್ ಬಂದ ಮೇಲೆ ಕರ್ನಾಟಕದ ಆರ್ಥಿಕ ಸ್ಥಿತಿ ಅಯೋಮಯ ಆಗಿದೆ. ಖಜಾನೆಯೂ ಖಾಲಿಯಾಗಿದೆ. ಬರಗಾಲದಲ್ಲಿಯೂ ಸಹ ಇವರು ಹಣ ಬಿಡುಗಡೆ ಮಾಡೋ ಪರಿಸ್ಥಿತಿಯಲ್ಲಿ ಇಲ್ಲ. ಕುಡಿಯೋ ನೀರಿಗೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಕೇವಲ ಹೇಳಿಕೆಗಳು, ಮೀಟಿಂಗ್ಗಳ ಮೂಲಕ ಬರಗಾಲ ನೀಗಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಬಸವರಾಜ ಬೊಮ್ಮಾಯಿ ಏಕಾಂಗಿಯಾಗಿ ಚುನಾವಣೆ ಎದುರಿಸ್ತಿದ್ದಾರೆ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾವುದೇ ಎಲೆಕ್ಷನ್ ಬಂದರೂ ಏಕಾಂಗಿಯಾಗೇ ಇರ್ತೇನೆ. ನಾನೊಬ್ಬನೇ ಸಾಕು. ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಹಾಲ್ ಗಿಂತ ಸ್ಟೇಜ್ ಮೇಲೆನೇ ಜನ ಜಾಸ್ತಿ ಇದ್ದರು. ನಿನ್ನೆ ಕಾಂಗ್ರೆಸ್ ನಾಯಕರು ಸ್ಟೇಜ್ ಮೇಲೆ ಒಗ್ಗಟ್ಟು ಪ್ರದರ್ಶನ ಮಾಡೋ ಪರಿಸ್ಥಿತಿ ಬಂತು. ಆದರೆ ನಿಜವಾಗಿಯೂ ಅವರಲ್ಲಿ ಒಗ್ಗಟ್ಟಿಲ್ಲ ಎಂದು ಬೊಮ್ಮಾಯಿ ಟೀಕಿಸಿದರು.
ಇದನ್ನೂ ಓದಿ : ಕಾಂಗ್ರೆಸ್ ಸೇರುವುದಿಲ್ಲ, ಬಿಜೆಪಿ ಶುದ್ಧೀಕರಣದೆಡೆಗೆ ನನ್ನ ನಡಿಗೆ: ಸದಾನಂದ ಗೌಡ - D V Sadananda Gowda