ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಗೆಲ್ಲುವ ನಾಲ್ಕು ಕ್ಷೇತ್ರಗಳ ಹೆಸರನ್ನು ಮತ್ತು ಕಾಂಗ್ರೆಸ್ ಪಕ್ಷದ ಮುಂದಿನ ಪ್ರಧಾನಿ ಯಾರೆಂದು ಹೇಳಲಿ. ಈ ಕುರಿತು ಅವರಲ್ಲಿ ಸ್ಪಷ್ಟತೆ ಇಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜ್ಯದಲ್ಲಿ 20 ಕ್ಷೇತ್ರಗಳನ್ನು ಗೆಲ್ಲುವ ಹೇಳಿಕೆ ವಿಚಾರವಾಗಿ ಈ ರೀತಿ ಪ್ರತಿಕ್ರಿಯಿಸಿದರು.
ನಾವು ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಶಿವಮೊಗ್ಗದಲ್ಲಿ ರಾಘವೇಂದ್ರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತಾರೆ. ರಾಜ್ಯಾದ್ಯಂತ ಮೋದಿ ಪರವಾದ ಅಲೆ ಇದೆ. ಅಮಿತ್ ಶಾ ನಾಳೆ ಬೆಂಗಳೂರಿಗೆ ಬರುತ್ತಿದ್ದಾರೆ. ಅವರ ಸಮಾವೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಜನ ಸೇರುತ್ತಾರೆ. ಶಾ ಅವರನ್ನು ಶಿವಮೊಗ್ಗಕ್ಕೆ ಕರೆಸುವ ಬಗ್ಗೆ ಚರ್ಚೆಯಾಗಿಲ್ಲ ಎಂದು ಹೇಳಿದ ಅವರು, ಈಶ್ವರಪ್ಪ ನಾಮಪತ್ರ ಹಿಂಪಡೆಯದ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಯತೀಂದ್ರ ಸಿದ್ದರಾಮಯ್ಯ ಅವರು ಮೋದಿ ವಿರುದ್ಧ ಟೀಕೆ ಮಾಡಿದ ವಿಚಾರವಾಗಿ ಮಾತನಾಡಿ, ಹಗುರವಾಗಿ ಮಾತನಾಡುವವರಿಗೆ ನಾನೇನೂ ಮಾತನಾಡಲು ಆಗುತ್ತದೆ. ರಸ್ತೆಯಲ್ಲಿ ಹೋಗುವರೆಲ್ಲ ಮಾತನಾಡಿದರೆ ಮೋದಿ ಗೌರವ ಕಡಿಮೆಯಾಗುವುದಿಲ್ಲ ಎಂದು ಹೇಳಿದರು.
ನೇಹಾ ಹೀರೆಮಠ್ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಹುಬ್ಬಳ್ಳಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ನೇಹಾ ಹೀರೆಮಠ್ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿರುವುದನ್ನು ಸ್ವಾಗತಿಸುತ್ತೇನೆ. ಸಿಐಡಿ ತನಿಖೆಯಿಂದ ಹೆಚ್ಚು ವಾಸ್ತವದ ಸತ್ಯ ಹೊರಬೀಳಲಿದೆ ಎಂದು ತಿಳಿಸಿದರು.
ಮತ್ತೊಂದೆಡೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದ್ದ ಇಂದು, ಪಕ್ಷೇತರ ಅಭ್ಯರ್ಥಿಗಳಾದ ಶಶಿಕುಮಾರ್, ಬಾಲಕೃಷ್ಣ ಭಟ್, ಶೇಖರಪ್ಪ ಎಂಬವರು ನಾಮಪತ್ರ ಹಿಂಪಡೆದಿದ್ದಾರೆ.
ಶಿವಮೊಗ್ಗ ಕ್ಷೇತ್ರದ ಚುನಾವಣಾ ಕಣದಲ್ಲಿ 23 ಅಭ್ಯರ್ಥಿಗಳು: ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‍ಕುಮಾರ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಎಸ್.ಕೆ.ಪ್ರಭು, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಅರುಣ ಕೆ.ಎ, ಬಹುಜನ ಸಮಾಜ ಪಾರ್ಟಿಯಿಂದ ಎ.ಡಿ.ಶಿವಪ್ಪ, ಯಂಗ್‍ಸ್ಟರ್ ಎಂಪರ್‍ಮೆಂಟ್ ಪಾರ್ಟಿಯಿಂದ ಯೂಸುಫ್ ಖಾನ್ ಕಣದಲ್ಲಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ಎಸ್.ಈಶ್ವರಪ್ಪ, ರವಿಕುಮಾರ್ ಎಸ್, ಶಿವರುದ್ರಯ್ಯ ಸ್ವಾಮಿ, ಹೆಚ್ ಸುರೇಶ್ ಪೂಜಾರಿ, ಚಂದ್ರಶೇಖರ್ ಹೆಚ್.ಸಿ, ಜಾನ್ ಬೆನ್ನಿ, ಪಿ.ಶ್ರೀಪತಿ, ರವಿಕುಮಾರ್ ಎನ್, ಪೂಜಾ ಅಣ್ಣಯ್ಯ, ಇಂತಿಯಾಜ್ ಎ.ಅತ್ತಾರ್, ಸಂದೇಶ್ ಶೆಟ್ಟಿ ಎ, ಬಂಡಿ ರಂಗನಾಥ ವೈ.ಆರ್, ಹನುಮಂತಪ್ಪ, ಜಿ.ಜಯದೇವ, ಎನ್.ವಿ.ನವೀನ್ ಕುಮಾರ್, ಗಣೇಶ್.ಬಿ, ಕುಣಜೆ ಮಂಜುನಾಥ ಗೌಡ ಇವರುಗಳು ಅಂತಿಮವಾಗಿ ಕಣದಲ್ಲಿದ್ದಾರೆ. ಅಂತಿಮವಾಗಿ 23 ಅಭ್ಯರ್ಥಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಈಶ್ವರಪ್ಪನವರ ಚುನಾವಣಾ ಚಿಹ್ನೆ ಏನು?: ಈಶ್ವರಪ್ಪ ಅವರಿಗೆ ಚುನಾವಣಾ ಆಯೋಗ ಇಂದು ಕಬ್ಬಿನ ಜೊತೆ ಕೈ ಕಟ್ಟಿಕೊಂಡ ನಿಂತ ರೈತನ ಚಿಹ್ನೆಯನ್ನು ನೀಡಿದೆ.
ಇದನ್ನೂ ಓದಿ: ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪ 6 ವರ್ಷ ಉಚ್ಚಾಟನೆ - KS Eshwarappa Expelled