ಮಂಗಳೂರು: ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿ ಒಂದು ದೇಶ, ಒಂದು ಚುನಾವಣೆ ಮಾಡಲು ಹೊರಟಿದೆ. ಅದರಂತೆ "ಈ ಚುನಾವಣೆ ನೋ ಚುನಾವಣೆ''ಯೂ ಆಗುವ ಸಾಧ್ಯತೆಯಿದೆ. ಸಂವಿಧಾನದ ಮೂಲ ಆಶಯವನ್ನೇ ಸದೆಬಡಿಯುವ ಸನ್ನಾಹ ಇದರ ಹಿಂದೆ ಅಡಗಿದೆ. ಪ್ರಜ್ಞಾವಂತ ಮತದಾರರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮನವಿ ಮಾಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಒಂದು ದೇಶ, ಒಂದು ಚುನಾವಣೆಯ ಮೂಲಕ ಕೇಂದ್ರ ಸರ್ಕಾರ ಲೋಕಸಭೆಯೂ ಸೇರಿದಂತೆ ಸ್ಥಳೀಯಾಡಳಿತ, ಪಂಚಾಯತ್, ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ಮಾಡಲಿದೆ. ಆದರೆ ಸದ್ಯ ನಡೆಯುತ್ತಿರುವ ಇಡೀ ದೇಶದ ಲೋಕಸಭೆ ಚುನಾವಣೆ ಮುಗಿಸಲು 60 ದಿನಗಳನ್ನು ತೆಗೆದುಕೊಳ್ಳಲಾಗುತ್ತದೆ. ಒಂದು ದೇಶ, ಒಂದು ಚುನಾವಣೆಯಂತೆ ಇಡೀ ದೇಶದ ಚುನಾವಣೆ ಮುಗಿಸಲು ವರ್ಷಗಳೇ ಬೇಕಾದೀತು. ಈ ಯೋಜನೆಯಂತೆ ತಮ್ಮ ಪಕ್ಷಕ್ಕೇ ಎಲ್ಲಾ ಮತ ಸಿಗಬಹುದು ಎಂದು ಮೋದಿಯವರು ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಏಕಚಕ್ರಾಧಿಪತ್ಯ ಸ್ಥಾಪಿಸುವ ಹುನ್ನಾರ ಇದರ ಹಿಂದೆ ಅಡಗಿದೆ ಎಂದು ಆರೋಪಿಸಿದರು.
ಈ ಬಾರಿ ಬಿಜೆಪಿಯವರು 400 ಪ್ಲಸ್ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅವರು 150-200 ಸ್ಥಾನವನ್ನಷ್ಟೇ ಗಳಿಸಲು ಶಕ್ತರಾಗುತ್ತಾರೆ. ಈ ಮೂಲಕ ಮೋದಿಯವರ 10 ವರ್ಷದ ಆಡಳಿತವು ಅಂತ್ಯಗೊಳ್ಳಲಿದೆ ಎಂದ ಅವರು, ಚೊಂಬು ಜಾಹೀರಾತು ಕುರಿತು ಮಾತನಾಡಿ, ಕೆಪಿಸಿಸಿಯಿಂದ ಇಷ್ಟೊಂದು ಅದ್ಭುತ, ಅಭೂತಪೂರ್ವ ಜಾಹೀರಾತು ಇಲ್ಲಿವರೆಗೆ ಬಂದಿಲ್ಲ. 15ನೇ ಹಣಕಾಸು ಯೋಜನೆಯಲ್ಲಿ ರಾಜ್ಯಕ್ಕೆ 15 ಸಾವಿರ ಕೋಟಿ ರೂ. ಬರಬೇಕಿತ್ತು, ಅಷ್ಟು ಬಂದಿಲ್ಲ. ಇದನ್ನು ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಅವರೇ ಒಪ್ಪಿಕೊಂಡಿದ್ದಾರೆ ಎಂದರು.
ದೇಶದಲ್ಲಿ ಬೆಲೆ ಏರಿಕೆ, ಆರ್ಥಿಕ ಅಸಮಾನತೆ, ನಿರುದ್ಯೋಗ ಸಮಸ್ಯೆ ಕಾರಣ ಕೇಂದ್ರ ಸರ್ಕಾರದ ವಿರುದ್ಧ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನಾಕ್ರೋಶ ಸ್ಫೋಟಗೊಳ್ಳಲಿದೆ. ಎನ್ಡಿಎ ಮತ್ತೆ ಬಹುಮತ ಗಳಿಸುವುದಿಲ್ಲ. ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಿದೆ. ಮೋದಿಯವರ ಆಡಳಿತಾವಧಿಯಲ್ಲಿ ಶೇ.1ರಷ್ಟು ಜನರಲ್ಲಿ ದೇಶದ ಸಂಪತ್ತು ಶೇಖರಣೆಯಾಗಿದೆ. ನಿರುದ್ಯೋಗದ ಪ್ರಮಾಣ ಏರಿಕೆಯಾಗಿದೆ. ಜಗತ್ತಿನ ಹಲವು ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಬಡತನ ಪ್ರಮಾಣ ಕಳೆದ ಹತ್ತು ವರ್ಷಗಳಲ್ಲಿ ಗರಿಷ್ಠ ಪ್ರಮಾಣಕ್ಕೆ ಏರಿಕೆಯಾಗಿದೆ. ಪೆಟ್ರೋಲ್ ಸೇರಿದಂತೆ ಇಂಧನ ಬೆಲೆ ಏರಿಕೆಯಿಂದಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನಸಾಮಾನ್ಯರು ಸಮಸ್ಯೆ ಅನುಭವಿಸುವಂತಾಗಿದೆ ಎಂದರು.
ಈ ವೇಳೆ ಮಾಜಿ ಶಾಸಕರಾದ ಜೆ.ಆರ್. ಲೋಬೊ, ಐವನ್ ಡಿಸೋಜ, ಕಾಂಗ್ರೆಸ್ ಪದಾಧಿಕಾರಿಗಳಾದ ಶಶಿಧರ ಹೆಗ್ಡೆ, ಭಾಸ್ಕರ ಕೆ., ಜಾನ್ ಕೆನಾನ್ ಮತ್ತಿತರರು ಇದ್ದರು.
ಇದನ್ನೂ ಓದಿ: 10 ವರ್ಷಗಳಲ್ಲಿ ದೇಶದ ಮೇಲೆ ಮೋದಿ 124 ಲಕ್ಷ ಕೋಟಿ ಸಾಲದ ಹೊರೆ ಹೊರಿಸಿದ್ದಾರೆ: ಸಿದ್ದರಾಮಯ್ಯ - CM Siddaramaiah