ಬೆಂಗಳೂರು: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಕಾವೇರಿ ಎಂಪೋರಿಯಂನ ಮೇಲೆ ಮಂಗಳವಾರ ದಾಳಿ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಅಕ್ರಮ ದಾಸ್ತಾನು ಪತ್ತೆ ಹಚ್ಚಿದ್ದಾರೆ.
ರಾಜಸ್ಥಾನದಿಂದ ಖಾಸಗಿ ವ್ಯಕ್ತಿಗಳಿಂದ ಅಕ್ರಮ ಗಂಧದ ತುಂಡಗಳು ದಾಸ್ತಾನು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೆ.ಆರ್.ಪುರಂ ವಲಯ ಅರಣ್ಯಾಧಿಕಾರಿ ರಘು ವಿ. ನೇತೃತ್ವದ ತಂಡವು ಎಂ.ಜಿ.ರಸ್ತೆಯ ಕಾವೇರಿ ಎಂಪೋರಿಯಂ ಮೇಲೆ ಸೋಮವಾರ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು.
ಗಂಧದ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು ಎಂದು ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ರವೀಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ. ಅಕ್ರಮದ ಸಂಬಂಧ ಎಂಪೋರಿಯಂನ ವ್ಯವಸ್ಥಾಪಕ ನಾರಾಯಣ ಮೂರ್ತಿ ಹಾಗೂ ರಾಜಸ್ಥಾನ ಮೂಲದ ಗೌರವ್ ಸರಗೋಯಿ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
4 ಕೆ.ಜಿ.ಗಿಂತ ಕಡಿಮೆ ತೂಕದ ಗಂಧದ ಮರ ಅಥವಾ ಗಂಧದ ಕಲಾಕೃತಿ/ಉತ್ಪನ್ನಗಳನ್ನು ಖರೀದಿಸಿದ ವ್ಯಕ್ತಿಯು, ಅವುಗಳ ಸಾಗಾಣಿಕೆಗೆ ಅನುಮತಿ ಪಡೆಯಬೇಕಿಲ್ಲ ಎಂದು ಅರಣ್ಯ ಇಲಾಖೆಯ ನಿಯಮಗಳು ಹೇಳುತ್ತವೆ. ಇದೇ ವಿನಾಯಿತಿಯನ್ನು ದುರುಪಯೋಗ ಪಡಿಸಿಕೊಂಡಿರುವ ಗೌರವ್ ಸರಗೋಯಿ, 6 ತಿಂಗಳ ಅವಧಿಯಲ್ಲಿ ಒಟ್ಟು 435 ಕೆ.ಜಿ.ಯಷ್ಟು ಗಂಧದ ಮರವನ್ನು ಪೂರೈಕೆ ಮಾಡಿದ್ದಾರೆ. ಪ್ರತಿ ಬಾರಿ ಸುಮಾರು 3.5 ಕೆ.ಜಿ.ಯಷ್ಟು ತೂಕದ ಗಂಧದ ಮರದ ತುಂಡನ್ನು ರಾಜಸ್ಥಾನದಿಂದ ಬೆಂಗಳೂರಿಗೆ ಸಾಗಾಟ ಮಾಡಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಅನುಮತಿ ಪಡೆಯದೇ, ಗಂಧದ ಮರದ ತುಂಡುಗಳನ್ನು ಸಾಗಿಸಿದ್ದಾರೆ. ಜೊತೆಗೆ, 105 ಕೆ.ಜಿ.ಯಷ್ಟು ಗಂಧದ ಪುಡಿ ಮತ್ತು 10 ಕೆ.ಜಿ.ಯಷ್ಟು ಗಂಧದ ಎಣ್ಣೆಯನ್ನು ಪೂರೈಕೆ ಮಾಡಿದ್ದಾರೆ. ಆದರೆ ಇವು ಸಕ್ರಮ ಮಾಲು ಎಂಬುದನ್ನು ಸಾಬೀತುಪಡಿಸುವ ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದ್ದು, ಗಂಧದ ಮರ ಮತ್ತು ಉತ್ಪನ್ನಗಳ ನಿರ್ವಹಣೆ ಸಂಬಂಧ ಕಾವೇರಿ ಎಂಪೋರಿಯಂಗೆ ನೀಡಿರುವ ಪರವಾನಗಿಯನ್ನು ರದ್ದು ಮಾಡಲು ಸಿದ್ಧತೆ ನಡೆದಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: 244 ಪ್ರಕರಣಗಳ ₹3.22 ಕೋಟಿ ಮೊತ್ತದ ಸ್ವತ್ತು ವಾರಸುದಾರರಿಗೆ ವಾಪಸ್