ಬೆಂಗಳೂರು: ಉತ್ತಮ ನೀತಿಗಳನ್ನು ಒಳಗೊಂಡಿರುವುದರಿಂದ ಉತ್ಪಾದನೆಯ ಮೂಲಸೌಕರ್ಯ ಹೆಚ್ಚಿಸಲು ಬಜೆಟ್ ಸಹಾಯ ಮಾಡಲಿದೆ. ಆಡಳಿತ, ಅಭಿವೃದ್ಧಿ ಹಾಗೂ ಕಾರ್ಯಕ್ಷಮತೆಯ ಮೇಲೆ ಹೆಚ್ಚಿನ ಗಮನವನ್ನು ಈ ಬಜೆಟ್ ಕೇಂದ್ರಿಕರಿಸಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿ ಉಪಾಧ್ಯಕ್ಷೆ ಉಮಾ ರೆಡ್ದಿ ಹೇಳಿದರು.
ಈಟಿವಿ ಭಾರತದ ಜೊತೆ ಮಾತನಾಡಿರುವ ಅವರು 2024ರ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.6.5ರಿಂದ ಶೇ.5.8ಕ್ಕೆ ಇಳಿಸಿರುವುದರಿಂದ ಬಜೆಟ್ ಬೆಳವಣಿಗೆಯ ಮಾನದಂಡಗಳನ್ನು ಪೂರೈಸುವ ನಿರೀಕ್ಷೆಯಿದೆ. ಇದಲ್ಲದೇ, ಆರ್ಥಿಕತೆಯ ಒಟ್ಟಾರೆ ಬೆಳವಣಿಗೆಯು ಸತತ 3 ನೇ ಬಾರಿಗೆ ಶೇ 7 ಕ್ಕಿಂತ ಹೆಚ್ಚಾಗಿದೆ ಎಂದು ವಿಶ್ಲೇಷಿಸಿದರು. ಮಹಿಳೆಯರು, ಯುವಕರು, ರೈತರು ಮತ್ತು ಬಡವರನ್ನೊಳಗೊಂಡ ಆದ್ಯತಾ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿರುವ ಬಜೆಟ್ ಇದಾಗಿದೆ. ಇದು ಗಾತ್ರಕ್ಕಿಂತ ಗುಣಮಟ್ಟದ ಬೆಳವಣಿಗೆ ಗುರಿ ಹೊಂದಿದೆ ಎಂದು ಹೇಳಿದರು.
ಯಾವುದೇ ತೆರಿಗೆಗಳನ್ನು ವಿಧಿಸಲಾಗಿಲ್ಲದಿರುವುದು ಸ್ವಾಗತಾರ್ಹವಾಗಿದೆ. 1962 ರಿಂದ 2009 ರವರೆಗೆ 10 ವರ್ಷಗಳ ತೆರಿಗೆ ಪಾವತಿದಾರರ 25,000 ರೂ ಕ್ಕಿಂತ ಕಡಿಮೆ ಮೊತ್ತದ ದಂಡವನ್ನು ರದ್ದುಪಡಿಸಲಾಗಿದೆ. 2011 ರಿಂದ 2014-15 ವಿತ್ತೀಯ ವರ್ಷಗಳಿಗೆ ಅನ್ವಯವಾಗುವಂತೆ 10,000 ರೂ ಮತ್ತು ಅದಕ್ಕಿಂತ ಕಡಿಮೆ ಮೊತ್ತದ ವಿವಾದಿತ ಮೊತ್ತವನ್ನು ಬಜೆಟ್ನಲ್ಲಿ ಮನ್ನಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಂಪರ್ಕ, ಮೂಲಸೌಕರ್ಯ ಮತ್ತು ರೈಲ್ವೆ ಕಾರಿಡಾರ್ಗೆ ಆದ್ಯತೆ ನೀಡಲಾಗಿದೆ. ಉದ್ದೇಶಿತ ಯುರೋಪ್ ಮಧ್ಯಪ್ರಾಚ್ಯ ಕಾರಿಡಾರ್ ಸ್ವಾಗತಾರ್ಹ ಹೆಜ್ಜೆಯಾಗಿದ್ದು, ಇದು ದೇಶದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು. ರೈಲು ಮತ್ತು ರಸ್ತೆ ಸಂಪರ್ಕವನ್ನು ಹೆಚ್ಚಿಸುವ ಮೂಲಕ ಪ್ರವಾಸೋದ್ಯಮ ಉತ್ತೇಜಿಸುತ್ತಿರುವುದು ಎಫ್‍ಕೆಸಿಸಿಐ ಸ್ವಾಗತಿಸುತ್ತದೆ. ಇದರಿಂದಾಗಿ ಜನರು ನಮ್ಮ ದೇಶದಲ್ಲಿಯೇ ಮದುವೆ ಸಮಾರಂಭಗಳಿಗೆ ಅಥವಾ ರಜಾದಿನಗಳಲ್ಲಿ ಹಣ ವ್ಯಯ ಮಾಡಲು ಅನುವು ಮಾಡಕೊಟ್ಟಂತೆ ಆಗುತ್ತದೆ. ಒಟ್ಟಾರೆಯಾಗಿ ಪ್ರವಾಸೋದ್ಯಮ ಕ್ಷೇತ್ರವನ್ನು ಬೆಳೆಸಲು ಅನುವು ಮಾಡಿಕೊಡಲಾಗಿದೆ. ಧಾರ್ಮಿಕ, ಐತಿಹಾಸಿಕ ಹಾಗೂ ಇತರ ಪ್ರವಾಸಿ ತಾಣಗಳ ಪ್ರಾಮುಖ್ಯತೆಯನ್ನು ಬಜೆಟ್ ಉತ್ತೇಜಿಸಿದೆ ಎಂದು ತಿಳಿಸಿದರು.
ಈ ಬಜೆಟ್ 2024ರ ಮಾರ್ಚ್ ತಿಂಗಳಲ್ಲಿ ಏರ್ಪಡಿಸಲಾಗಿರುವ ಎಫ್‍ಕೆಸಿಸಿಐ ಉದ್ದೇಶಿತ ಯೋಜನೆಯಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಪ್ರವಾಸೋದ್ಯಮ ಉತ್ತೇಜಿಸುವ ಗುರಿ ಹೊಂದಿರುವ ದಕ್ಷಿಣ ಭಾರತ ಉತ್ಸವಕ್ಕೆ ಅನುಗುಣವಾಗಿದೆ. ಒಟ್ಟಿನಲ್ಲಿ ಬೆಳವಣಿಗೆ ಆಧಾರಿತ ಮಧ್ಯಂತರ ಬಜೆಟ್ ಮಂಡಿಸಿದ್ದಕ್ಕಾಗಿ ಕೇಂದ್ರ ಹಣಕಾಸು ಸಚಿವರನ್ನು ಅಭಿನಂದಿಸುತ್ತೇವೆ ಎಂದು ರೆಡ್ದಿ ಹೇಳಿದರು.
ಇದನ್ನೂ ಓದಿ: ವಿಕಸಿತ ಭಾರತ ಅಲ್ಲ, ವಿನಾಶಕಾರಿ ಭಾರತ ಮಾಡುವ ಬಜೆಟ್ ಇದು: ಸಿಎಂ ಸಿದ್ದರಾಮಯ್ಯ