ಶ್ರೀನಗರ: ಶ್ರೀನಗರದಲ್ಲಿ ಸೋಮವಾರ ಕನಿಷ್ಠ 2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಚಳಿಯಿಂದ ಜನರು ನಡುಗುತ್ತಿದ್ದಾರೆ. ರಾತ್ರಿ ವೇಳೆ ಉಷ್ಣಾಂಶ ಶೂನ್ಯಕ್ಕಿಂತ ಇನ್ನೂ ಕೆಳಗಿಳಿದಿದ್ದು, ಪ್ರವಾಸಿತಾಣಗಳಾದ ಗುಲ್ಮಾರ್ಗ್ ಮತ್ತು ಪಹಲ್ಗಾಮ್ ಗಿರಿಧಾಮಗಳಲ್ಲಿ ಕ್ರಮವಾಗಿ ಮೈನಸ್ 3 ಮತ್ತು 2.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಕಂಡುಬಂದಿದೆ. ಈ ವಾರ ಶುಷ್ಕ ಹವಾಮಾನ ಇರಲಿದೆ ಎಂದು ಇಲ್ಲಿನ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರದಲ್ಲಿ ರಾತ್ರಿ ವೇಳೆ ಕನಿಷ್ಠ ತಾಪಮಾನ 2 ಡಿಗ್ರಿ ಮತ್ತು ಕುಪ್ವಾರದಲ್ಲಿ 0.2 ಡಿಗ್ರಿ ಕಡಿಮೆ ತಾಪಮಾನ ದಾಖಲಾದರೆ, ಜಮ್ಮುವಿನಲ್ಲಿ 11 ಡಿಗ್ರಿ, ಕತ್ರಾ 11.2, ಬಟೋಟೆ 6.1, ಬನಿಹಾಲ್ 8.2 ಮತ್ತು ಭದೇರ್ವಾದಲ್ಲಿ 3.6 ಕನಿಷ್ಠ ತಾಪಮಾನ ದಾಖಲಾಗಿದೆ. ಚಿನಾರ್ ಮರಗಳು ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ಬದಲಾಗುತ್ತಿದ್ದು, ಎಲೆಗಳು ಉದರಲು ಆರಂಭಿಸಿವೆ. ಇದು ಇಲ್ಲಿನ ಚಳಿಗಾಲದ ಆರಂಭವನ್ನು ಸೂಚಿಸುತ್ತಿದೆ.
ಚಳಿಯ ನಡುವೆ ಕಾಶ್ಮೀರದ ಎತ್ತರದ ಪ್ರದೇಶ ಝೋಜಿಲಾ ಪಾಸ್‌ನಲ್ಲಿ ಭಾರೀ ಹಿಮಪಾತವೂ ಆಗಿದೆ. ಹಿಮಪಾತದಿಂದಾಗಿ ಅನಂತನಾಗ್-ಕಿಶ್ತ್ವಾರ್ ರಸ್ತೆ ವಾಹನ ಸಂಚಾರಕ್ಕೆ ಬಂದ್ ಆಗಿದೆ. ಹಿಮ ತೆಗೆಯುವ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋನಾಮಾರ್ಗ್‌ನಲ್ಲಿ ಕನಿಷ್ಠ ತಾಪಮಾನ ಮೈನಸ್ 5.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಶ್ರೀನಗರದ ಭಾಗಶಃ ಪ್ರದೇಶ ಬೆಳಗಿನ ಜಾವ ಮಂಜು ಕವಿದ ವಾತವಾರಣದಿಂದ ಆವರಿಸಿತ್ತು.
ಚಳಿ ಆವರಿಸಿಕೊಳ್ಳುತ್ತಿದ್ದಂತೆ ಜನರು 'ಫೆರನ್ಸ್' ಎಂದು ಕರೆಯಲ್ಪಡುವ ಉಡುಪುಗಳ ಖರೀದಿ ಹಾಗೂ 'ಕಾಂಗ್ರಿಸ್' ಎಂಬ ಸಾಂಪ್ರದಾಯಿಕ ಅಗ್ನಿಕುಂಡಗಳ ಖರೀದಿಯಲ್ಲಿ ನಿರತರಾಗಿದ್ದಾರೆ. ತೊರೆ, ಬುಗ್ಗೆ ಮತ್ತು ಬಾವಿಗಳಲ್ಲಿನ ನೀರು ನಿಧಾನವಾಗಿ ಹರಿಯಲು ಆರಂಭಿಸಿವೆ. ಸೈಬೀರಿಯಾ, ಚೀನಾ ಮತ್ತು ಪೂರ್ವ ಯೂರೋಪ್ ಸೇರಿದಂತೆ ವಿವಿಧ ದೇಶಗಳಿಂದ ತರಹೇವಾರು ಹಕ್ಕಿಗಳು ಕಾಶ್ಮೀರದತ್ತ ವಲಸೆ ಬರಲಾಂಬಿಸಿವೆ.
ಇದನ್ನೂ ಓದಿ: ಕಳಪೆಯಲ್ಲಿ ಕಳಪೆ ದೆಹಲಿ ವಾಯು ಗುಣಮಟ್ಟ: ಶಾಲೆಗಳು ಬಂದ್, ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್