ಬೆಂಗಳೂರು: ಶೌಚಕ್ಕೆಂದು ಹೋದಾಗ ಐದು ವರ್ಷದ ಬಾಲಕನ ಮೇಲೆ ಗೂಡ್ಸ್ ವಾಹನ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ನಗರದ ಉರ್ವಶಿ ಚಿತ್ರಮಂದಿರ ಬಳಿ ಸಂಭವಿಸಿದೆ. ಐದು ವರ್ಷದ ಅಶ್ವಿತ (5) ಮೃತ ಬಾಲಕ.
ಕೃತ್ಯ ನಡೆದ ಸಮೀಪದಲ್ಲೇ ಬಾಲಕನ ಕುಟುಂಬ ವಾಸವಾಗಿತ್ತು. ತಂದೆ ಶಶಿಕುಮಾರ್ ಅಲ್ಯುಮಿನಿಯಂ ಪ್ಯಾಬಿಗ್ರೇಟರ್ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಶೌಚಾಲಯಕ್ಕಾಗಿ ಬಾಲಕ ಬಂದಿದ್ದ. ಈ ವೇಳೆ ರಾಜಸ್ಥಾನ ಮೂಲದ ಗೂಡ್ಸ್ ವಾಹನದ ಚಾಲಕ ಅದರ ಹಿಂದೆ ಬಾಕ ಇರುವುದನ್ನು ಗಮನಿಸದೆ, ಹಿಂಬದಿಗೆ ಹಾಕುವಾಗ ಚಕ್ರಕ್ಕೆ ಬಾಲಕ ಸಿಲುಕಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸಿಟಿ ಮಾರ್ಕೆಟ್ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ವಾಹನ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಪ್ರತ್ಯೇಕ ಘಟನೆ- ನೀರಿನ ಬಕೆಟ್‌ಗೆ ಬಿದ್ದು ಮಗು ಸಾವು: ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಭಾನುವಾರ ನಡೆದಿತ್ತು. ಅಸೀಫ್ ಹಾಗೂ ಅಜುಂ ದಂಪತಿಯ ಪುತ್ರಿ ಆನಂ ಫಾತಿಮಾ (1.5 ವರ್ಷ) ಮೃತಪಟ್ಟ ಪುಟ್ಟ ಕಂದಮ್ಮ. ದಂಪತಿಯ ಸಾಗರದ ಜೋಸೆಫ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಫಾತಿಮಾ ಭಾನುವಾರ ಸಂಜೆ ಆಟವಾಡುತ್ತ, ಮನೆಯ ಬಚ್ಚಲು ಮನೆಯತ್ತ ಹೋಗಿದ್ದಳು. ಈ ವೇಳೆ ಅಲ್ಲಿ ನೀರು ತುಂಬಿದ್ದ ಬಕೆಟ್ನೊಳಗೆ ಆಕಸ್ಮಿಕವಾಗಿ ಬಿದ್ದಿದ್ದಾಳೆ. ಕೆಲ ಹೊತ್ತಿನ ಬಳಿಕ ದಂಪತಿಯು ಮಗುವನ್ನು ಹುಡುಕಾಡಿದಾಗ ಬಕೆಟ್ನಲ್ಲಿ ಬಿದ್ದಿರುವುದು ಗೊತ್ತಾಗಿತ್ತು. ತಕ್ಷಣ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದರು. ಸಾಗರ ಪೇಟೆ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಬಿಎಂಟಿಸಿ ಬಸ್ - ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸಾವು - Doddaballapur accident