ದಾವಣಗೆರೆ: ದರೋಡೆ ಮಾಡುವ ಸಲುವಾಗಿ ಚಿನ್ನದ ವ್ಯಾಪಾರಿಯನ್ನು ಬೆಂಗಳೂರಿನಿಂದ ದಾವಣಗೆರೆಗೆ ಹಿಂಬಾಲಿಸಿಕೊಂಡು ಬಂದಿದ್ದ ಅಂತರ್ ರಾಜ್ಯ ಕಳ್ಳರು ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ಮೂಲದ ದುರ್ಯೊಧನ (50), ರಮೇಶ ಸೋಪಾನ (36), ಲಕ್ಷ್ಮಣ್(62), ಲಕ್ಷ್ಮಣ (32), ಗಣೇಶ (37) ಎಂದು ಗುರುತಿಸಲಾಗಿದೆ. ಈ ಸಂಬಂಧ ದಾವಣಗೆರೆ ಪಟ್ಟಣದ ಅಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನದ ವ್ಯಾಪಾರಿಯೊಬ್ಬರು ಬೆಂಗಳೂರಿನಲ್ಲಿ ಸುಮಾರು 11 ಕೆಜಿ ಗಿಂತ ಹೆಚ್ಚು ಬಂಗಾರದ ಆಭರಣಗಳನ್ನು ಖರೀದಿಸಿದ್ದಾರೆ. ಈ ಬಗ್ಗೆ ತಿಳಿದ ದರೋಡೆಕೋರರು ವ್ಯಾಪಾರಿಯನ್ನು ಬೆಂಗಳೂರಿನಿಂದ ದಾವಣಗೆರೆ ವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾರೆ. ಆದರೆ, ರಾತ್ರಿಯಾದ ಕಾರಣ ವ್ಯಾಪಾರಿಯೂ ದಾವಣಗೆರೆಯ ಲಾಡ್ಜ್ವೊಂದರಲ್ಲಿ ರೂಮ್ ಪಡೆದು ಉಳಿದುಕೊಂಡಿದ್ದಾರೆ.
ಇತ್ತ ದರೋಡೆ ಮಾಡಲು ಎಂದು ಹಿಂಬಾಲಿಸಿಕೊಂಡು ಬಂದಿದ್ದ ಖದೀಮರು ಲಾಡ್ಜ್ ಬಳಿ ಹೊಂಚು ಹಾಕಿ ಕುಳಿತಿದ್ದರು. ಸ್ವಲ್ಪ ಸಮಯದ ಬಳಿಕ ಈ ಕಾರ್ಯ ವಿಫಲವಾಗಿದೆ. ಹೀಗಾಗಿ ತಮ್ಮ ಊರುಗಳಿಗೆ ಹೋಗಲು ನಿರ್ಧರಿಸಿದ್ದಾರೆ. ವಾಪಸ್ ಹೋಗಲು ಖರ್ಚಿಗೆ ಹಣಕ್ಕಾಗಿ ದರೊಡೆ ಮಾಡಲು ದಾವಣಗೆರೆ ನಗರದ ಮಾಗನಹಳ್ಳಿ ರಸ್ತೆಯ ಚೌಡೇಶ್ವರಿ ದೇವಸ್ಥಾನದ ಬಳಿ ಸ್ಕಾರ್ಪಿಯೊ ಕಾರನ್ನು ನಿಲ್ಲಿಸಿಕೊಂಡು ನಿಂತಿದ್ದರು.
ಈ ಬಗ್ಗೆ ಸ್ಥಳೀಯರು ಜಿಲ್ಲಾ ಎಸ್ಪಿ ಉಮಾ ಪ್ರಶಾಂತ್ ಅವರಿಗೆ ಮಾಹಿತಿ ಬಂದಿದೆ. ಮಾಹಿತಿ ಆಧಾರಿಸಿ ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸ್ ಅಧಿಕಾರಿಗಳು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸುತ್ತಿದ್ದ ಸಲಕರಣೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಚಿಕ್ಕಮಗಳೂರು - ಮನೆಗೆ ನುಗ್ಗಿ ದರೋಡೆ ಪ್ರಕರಣ: ಐವರು ಆರೋಪಿಗಳ ಬಂಧನ