ಮಂಗಳೂರು: ಮೀನುಗಾರಿಕೆಯೆಂಬುದು ಅಪಾಯದ ವೃತ್ತಿ. ಅಬ್ಬರಿಸುವ ಕಡಲಿಗಿಳಿದು ಮೀನುಗಾರಿಕೆ ನಡೆಸುವ ಕಾರ್ಯದಲ್ಲಿ ಕಡಲ ಮಕ್ಕಳು ಎಂದೇ ಕರೆಯಲ್ಪಡುವ ಮೊಗವೀರ ಸಮುದಾಯದ ಪುರುಷರು ತೊಡಗಿಸಿಕೊಳ್ಳುತ್ತಾರೆ. ತೀರಾ ಅಪಾಯದ ವೃತ್ತಿಯಾಗಿರುವುದರಿಂದ ಕಡಲಿಗಿಳಿದು ಮೀನು ಹಿಡಿಯುವ ಕಾಯಕಕ್ಕೆ ಮಹಿಳೆಯರು ಹೋಗುವುದಿಲ್ಲ. ಆದರೆ ಇದೀಗ ಮಂಗಳೂರಿನ ಯುವತಿ ಸಮುದ್ರಕ್ಕಿಳಿದು ಮೀನು ಹಿಡಿಯುವ ಅಪಾಯಕಾರಿ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕಲಿಕೆ ಜೊತೆ ಜೊತೆಗೆ ಮೀನುಗಾರಿಕೆ; ಪುರುಷ ಪ್ರಾಬಲ್ಯದ ಉದ್ಯೋಗವಾದ ಮೀನುಗಾರಿಕೆಯಲ್ಲಿ ಮಹಿಳೆಯರು ತೊಡಗಿಸಿಕೊಳ್ಳಬಹುದು ಎಂದು ಸಾಧಿಸಿ ತೋರಿಸಿದ ಈ ಯುವತಿ 23 ವರ್ಷದ ಪ್ರಾಪ್ತಿ ಮೆಂಡನ್. ಬೆಂಗ್ರೆಯ ಮತ್ಸ್ಯೋದ್ಯಮಿ ಜಯಪ್ರಕಾಶ್ ಮೆಂಡನ್ ಹಾಗೂ ಕಲಾವತಿ ಜೆ. ದಂಪತಿಯ ಪುತ್ರಿ ಪ್ರಾಪ್ತಿ ಮೆಂಡನ್ ಮಂಗಳೂರಿನ ಫಿಶರೀಸ್ ಕಾಲೇಜಿನಲ್ಲಿ ಫಿಶರೀಶ್ ಪದವಿ ಪಡೆದಿದ್ದು, ಇದೀಗ ಇದೇ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಕಾಲೇಜು ನಡುವೆಯೇ ಪ್ರಾಪ್ತಿ ತನ್ನ ತಂದೆಯ ಮಾಲೀಕತ್ವದ ಜೈ ವಿಕ್ರಾಂತ್ ಬೆಂಗ್ರೆ ರಾಣಿಬಲೆ ತಂಡದೊಂದಿಗೆ ಮಳೆಗಾಲದಲ್ಲೂ ಮೀನುಗಾರಿಕೆ ತೆರಳುತ್ತಾರೆ. ಕಳೆದ 10 ವರ್ಷಗಳಿಂದ ಕಡಲಾಚೆಗೆ ಹೋಗಿ ಮೀನುಗಾರಿಕೆ ಮಾಡುತ್ತಿರುವ ಇವರಿಗೆ ತನ್ನ ತಂದೆ ಜಯಪ್ರಕಾಶ್ ಮೆಂಡನ್ ಅವರ ಪ್ರೋತ್ಸಾಹವೇ ಪ್ರೇರಣೆ.
ಪುರುಷರಿಗೆ ಕಮ್ಮಿ ಇಲ್ಲದಂತೆ ಈಜು, ಸ್ಕೂಬಾ ಡೈವಿಂಗ್; ಪ್ರಾಪ್ತಿ ಮೀನುಗಾರಿಕೆಗೆ ಕಡಲಿಗಿಳಿದ ಮೊದಲ ಮಹಿಳೆ ಎಂದೇ ಹೇಳಬಹುದು. ಇವರು ಬೋಟ್ ಏರಿ ಮೀನುಗಾರಿಕೆಗೆ ಕಡಲಿನಾಳಕ್ಕೆ ಹೊರಟರೆ ಮತ್ತೆ ಕಡಲ ತೀರಕ್ಕೆ ಬರುವವರೆಗೆ ಅಪ್ಪಟ ಪುರುಷ ಮೀನುಗಾರರಂತೆ ಕರ್ತವ್ಯ ನಿರ್ವಹಿಸುತ್ತಾರೆ. ಬೋಟ್ ಚಲಾಯಿಸುವುದು, ಬಲೆ ಹಾಕುವುದು, ಮೀನು ಬೋಟಿಗೆ ಹಾಕುವುದು ಸೇರಿದಂತೆ ಮೀನುಗಾರರ ವೃತ್ತಿಯನ್ನು ಮಾಡುತ್ತಾರೆ. ಈಜು ಬಲ್ಲ ಪ್ರಾಪ್ತಿ ಸ್ಕೂಬಾ ಡೈವಿಂಗ್ನಲ್ಲೂ ಸೈ ಎನಿಸಿಕೊಂಡಿದ್ದಾರೆ.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಪ್ರಾಪ್ತಿ ಮೆಂಡನ್ "ನನ್ನ 13ನೇ ವರ್ಷದಿಂದ ಮೀನುಗಾರಿಕೆಗೆ ತೆರಳುತ್ತಿದ್ದೇನೆ. ರಾಣಿ ಬಲೆ ಮೀನುಗಾರಿಕೆ ಮಾಡುವುದು ಆಸಕ್ತಿ ಮೂಡಿಸಿತು. ಜೈ ವಿಕ್ರಾಂತ್ ಬೋಟ್ ಅವರ ಮತ್ತು ತಂದೆಯ ಸಹಕಾರ, ಪ್ರೋತ್ಸಾಹದಿಂದ ಇದು ಮಾಡಲು ಸಾಧ್ಯವಾಯಿತು. ಗಂಡು ಹೆಣ್ಣು ಎಂದು ನೋಡದೆ ಸಹಕಾರ ಕೊಟ್ಟರು. ಸಮುದ್ರದಲ್ಲಿ ತುಂಬಾ ಅಬ್ಬರ ಇರುತ್ತದೆ. ಆದರೆ ನನಗೆ ಕಡಲಿಗೆ ಹೋಗಿ ಅಭ್ಯಾಸವಿದೆ. ಸಣ್ಣವಳಿದ್ದಾಗದಿಂದ ತಂದೆ ಪ್ರೋತ್ಸಾಹ ನೀಡುತ್ತಾ ಬಂದಿದ್ದರಿಂದ ನನಗೆ ಈ ಧೈರ್ಯ ಬಂತು ಎಂದು ತನ್ನ ಸಾಹಸಗಾಥೆಯನ್ನು ಹಂಚಿಕೊಂಡರು.
ಪ್ರಾಪ್ತಿ ಮೆಂಡನ್ ತಂದೆ ಜಯಪ್ರಕಾಶ್ ಮೆಂಡನ್ ಮಾತನಾಡಿ, "ಅವಳಿಗೆ ನಾನು ಸಣ್ಣಂದಿನಿಂದಲೇ ಹುಡುಗ-ಹುಡುಗಿ ಎಂದು ಬೇಧ ಇಲ್ಲದೆ ಈ ಸಾಧನೆ ಮಾಡುವ ವಿಶ್ವಾಸ ಮೂಡಿಸಿದ್ದೇನೆ. ಅದರ ಜೊತೆಗೆ ಮೀನುಗಾರಿಕೆಗೆ ತೆರಳುತ್ತಿದ್ದ ನನ್ನ ಗೆಳೆಯರ ಸಹಕಾರದಿಂದ ಈ ರೀತಿ ಸಾಧನೆ ಮಾಡಲಾಯಿತು" ಎಂದು ಸಂತೋಷ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಇವರ ಕೆಲಸ ವಿಶೇಷ ಮತ್ತು ಸಾಹಸದಿಂದ ಕೂಡಿದ್ದು, ಎಲ್ಲಾ ಹೆಣ್ಣುಮಕ್ಕಳಿಗೂ ಮಾದರಿ ಎನಿಸಿದೆ. ಅವರ ಈ ಧೈರ್ಯಕ್ಕೆ ಸಲಾಂ ಹೇಳೋಣ.
ಇದನ್ನೂ ಓದಿ: ಚೋಟಾ ಸೈಂಟಿಸ್ಟ್ ಆವಿಷ್ಕಾರಕ್ಕೆ ನಿಬ್ಬೆರಗಾದ ಬೆಳಗಾವಿ ಜನ: ಈತನ ಪ್ಲಾನ್ ಸಕ್ಸಸ್ ಆದ್ರೆ ರೈತರಿಗೆ ವರದಾನ - Chota Scientist