ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಸರ್ಕಾರಿ ಹೆರಿಗೆ ಆಸ್ಪತ್ರೆಯು ಬಹುದೊಡ್ಡ ಇತಿಹಾಸ ಹೊಂದಿದೆ. ಮೈಸೂರು ಅರಸರ ಕಾಲದಲ್ಲಿ ಈ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಅಂದಿನಿಂದ ಇಂದಿನ ತನಕ ಈ ಸರ್ಕಾರಿ ಹೆರಿಗೆ ಆಸ್ಪತ್ರೆ ಸಹಜ ಹೆರಿಗೆಗಳಿಗೆ ಹೆಸರು ವಾಸಿಯಾಗಿದೆ. ತುಂಬಾ ಕಷ್ಟಕರ ಸಮಯದಲ್ಲಿ ಮಾತ್ರ ಇಲ್ಲಿ ಸಿಸೇರಿಯನ್ ಮಾಡಲಾಗುತ್ತದೆ. ಇಲ್ಲಿನ ನಿಪುಣ ವೈದ್ಯರ ತಂಡ ಇಂದಿಗೂ ಕೂಡ ಹೆಚ್ಚು ಸಹಜ ಹೆರಿಗೆಗಳನ್ನು ಮಾಡಿಸುತ್ತಾ ಬಂದಿದೆ.
ಸಿಸೇರಿಯನ್ ಹೆರಿಗೆಗೆ ಬೇಡ ಎನ್ನುವ ಗರ್ಭಿಣಿಯರು, ಆಸ್ಪತ್ರೆಗೆ ಬಂದು ಸಹಜ ಹೆರಿಗೆ ಮಾಡಿಸಿಕೊಳ್ಳುತ್ತಾರೆ. ದಾವಣಗೆರೆ ಜಿಲ್ಲೆಯ ಸುತ್ತ ಹತ್ತೂರುಗಳಿಂದ ಗರ್ಭಿಣಿಯರು ಇಲ್ಲಿಗೆ ಬಂದು ಸಹಜ ಹೆರಿಗೆಗೆ ಒಳಗಾಗಿ ಸಂತಸದಿಂದ ತಮ್ಮ ಮನೆಗಳಿಗೆ ಮರಳುತ್ತಾರೆ. ಅಷ್ಟೇ ಏಕೆ ಇಲ್ಲಿನ ವೈದರು ಸಹಜ ಹೆರಿಗೆಗೆ ಮೊದಲ ಆದ್ಯತೆ ನೀಡುತ್ತಾರೆ.
ಕಂಠೀರವ ನರಸಿಂಹರಾಜ ಒಡೆಯರ ಅಡಿಗಲ್ಲು ಹಾಕಿದ್ದ ಆಸ್ಪತ್ರೆ: ಕೇಂದ್ರ ಸರ್ಕಾರದಿಂದ 'ಲಕ್ಷ್ಯ' ಗರಿಯನ್ನು ಅಲಂಕರಿಸಿರುವ ದಾವಣಗೆರೆಯ ಚಾಮರಾಜಪೇಟೆಯಲ್ಲಿರುವ ಈ ಮಹಿಳೆಯರ ಮಕ್ಕಳ ಸರ್ಕಾರಿ ಆಸ್ಪತ್ರೆಯು ಸಹಜ ಹೆರಿಗೆಗಳನ್ನು ಮಾಡಿಸುವಲ್ಲಿ ಜಿಲ್ಲೆಯಲ್ಲೇ ಮೊದಲ ಆಸ್ಪತ್ರೆಯಾಗಿ ಹೊರಹೊಮ್ಮಿದೆ. ಇಲ್ಲಿ ಲಕ್ಷಾಂತರ ಸಂಖ್ಯೆಯ ಗರ್ಭಿಯಣಿಯರು ಸಹಜ ಹೆರಿಗೆ ಮಾಡಿಸಿಕೊಳ್ಳಲು ಇದೇ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. 1937ರ ಮಾರ್ಚ್ 1ರಂದು ಮೈಸೂರಿನ ಯುವರಾಜರಾಗಿದ್ದ ಕಂಠೀರವ ನರಸಿಂಹರಾಜ ಒಡೆಯರ ಅವರು ಈ ಆಸ್ಪತ್ರೆಗೆ ಅಡಿಗಲ್ಲು ಹಾಕಿದ್ದರು. ಅವರ ಕಾಲದಲ್ಲಿ ಆರಂಭವಾದ ಈ ಸರ್ಕಾರಿ ಆಸ್ಪತ್ರೆ ಇವತ್ತಿಗೂ ಅದೇ ಹೆಸರನ್ನು ಉಳಿಸಿಕೊಂಡು ಬಂದಿದೆ.
ದಿನವೊಂದಕ್ಕೆ 30ಕ್ಕೂ ಹೆಚ್ಚು ಹೆರಿಗೆ: ''ಈ ಆಸ್ಪತ್ರೆಯಲ್ಲಿ ಒಂದು ದಿನಕ್ಕೆ 30ಕ್ಕೂ ಹೆಚ್ಚು ಹೆರಿಗಳನ್ನು ಮಾಡಿಸಲಾಗುತ್ತಿದೆ. 30 ಹೆರಿಗೆಗಳ ಪೈಕಿ 25 ಸಹಜ ಹೆರಿಗೆ ಮಾಡಿಸಲಾಗುತ್ತದೆ. 8 ಕ್ಕೂ ಹೆಚ್ಚು ಸಿಸೇರಿಯನ್ ಡೆಲಿವರಿ ಮಾಡಿಸಲಾಗುತ್ತಿದೆ. ಪ್ರಸ್ತುತ ವರ್ಷದ ಅಂಕಿ - ಅಂಶವನ್ನು ನೋಡುವುದಾದರೆ, 3,500ರಿಂದ 3,800 ಹೆರಿಗೆಗಳನ್ನು ಮಾಡಿಸಲಾಗಿದೆ. ಅದರಲ್ಲಿ 3,000ಕ್ಕೂ ಹೆಚ್ಚು ಸಹಜ ಹೆರಿಗೆಗಳನ್ನು ಈ ಆಸ್ಪತ್ರೆಯಲ್ಲಿ ಮಾಡಿಸಲಾಗಿದೆ. ಅಲ್ಲದೇ 1,200 ರಷ್ಟು ಸಿಸೇರಿಯನ್ ಡೆಲಿವರಿ ಮಾಡಿಸಲಾಗಿದೆ. ಬಹಳ ಕ್ಲಿಷ್ಟಕರ ಸಮಯದಲ್ಲಿ ಸಿಸೇರಿಯನ್ ಮಾಡಲೇಬೇಕಾದ ಅನಿವಾರ್ಯ ಆಗಿದೆ. 200 ಬೆಡ್ಗಳ ಅಸ್ಪತ್ರೆ ಆಗಿದ್ದರಿಂದ ಸುಸ್ಸಜ್ಜಿತವಾದ ಸೌಲಭ್ಯವಿದೆ'' ಎನ್ನುತ್ತಿದ್ದಾರೆ ಆಸ್ಪತ್ರೆಯ ಅಧೀಕ್ಷಕ ಎಸ್.ಪಿ. ಮಧು.
ತಾಯಿ - ಮಗು ಸುರಕ್ಷತೆಯ ದೃಷ್ಠಿಯಿಂದ ಸಹಜ ಹೆರಿಗೆಗೆ ಆದ್ಯತೆ: ''ಹೆರಿಗೆ ಎನ್ನುವುದು ಪ್ರಕೃತಿಯ ಸಹಜ ಕ್ರಿಯೆ. ಈ ಆಸ್ಪತ್ರೆಯಲ್ಲಿ ಮೊದಲು ತಾಯಿ - ಮಗು ಇಬ್ಬರಿಗೆ ತೊಂದರೆ ಆಗಬಾರದು ಎಂಬ ದೃಷ್ಠಿಯಲ್ಲಿ ಶೇ 90 ರಷ್ಟು ಸಹಜ ಹೆರಿಗೆಗೆ ಪ್ರಯತ್ನ ಮಾಡಲಾಗುತ್ತದೆ. ಆಸ್ಪತ್ರೆಗೆ ಬರುವ ಗರ್ಭಿಣಿಯರಿಗೆ ವೈದ್ಯರು ಸಹಜ ಹೆರಿಗೆ ಮಾಡಿಸಲು ಬೇಕಾದ ಔಷಧಗಳನ್ನು ಕೊಟ್ಟು 8 ರಿಂದ 12 ಗಂಟೆಗಳ ಕಾಲ ಕಾಯಬೇಕಾಗುತ್ತದೆ. ಸ್ಥಳದಲ್ಲೇ ಪ್ರಸೂತಿ ಸ್ತ್ರೀ ರೋಗ ತಜ್ಞೆ ಇರಲಿದ್ದಾರೆ. ಸಹಜ ಹೆರಿಗೆ ಮಾಡಿಸಲು ಕೊಡುವ ಚಿಕಿತ್ಸೆಗೆ ಹಾಗೂ ನೋವಿಗೆ ಹೆಣ್ಣು ಮಕ್ಕಳು ತಡೆದುಕೊಳ್ಳುವ ಶಕ್ತಿ ಇದ್ದರೆ, ಮಾತ್ರ ಸಹಜ ಹೆರಿಗೆ ಮಾಡಿಸಲಾಗುತ್ತದೆ. ಕೆಲವರು ನೋವು ತಡೆಯದೇ ಸಿಸೇರಿಯನ್ ಮಾಡಿಸಿಕೊಂಡಿರುವ ಪರಿಸ್ಥತಿ ನಿರ್ಮಾಣ ಆಗಿದೆ. ಅಲ್ಲದೇ ಮಗು ಸುಸ್ತಾಗಿದೆ, ತಾಯಿಗೆ ತೊಂದರೆ ಆಗಲಿದೆ ಎಂದು ಗೊತ್ತಾದರೆ ಸಿಸೇರಿಯನ್ ಮಾಡಬೇಕಾಗುತ್ತದೆ. ಹೆರಿಗೆ ನೋವು ಬರುವ ಮಹಿಳೆ ಸಹಜ ಹೆರಿಗೆ ಆಗಲು 8ರಿಂದ 12 ತಾಸು ನೋವು ಅನ್ನು ತಡೆದುಕೊಳ್ಳಬೇಕಾಗುತ್ತದೆ. ಸಮಾಲೋಚನೆ ನಡೆಸಿ ಗರ್ಭಿಣಿಯರಿಗೆ ಧೈರ್ಯ ತುಂಬಲಾಗುತ್ತದೆ. ಇನ್ನು ಬಿಪಿ ಶುಗರ್ ಇದ್ದರೆ ಸಿಸೇರಿಯನ್ ಮಾಡಿಸುವುದು ಅನಿವಾರ್ಯ ಆಗಿರುತ್ತದೆ'' ಎಂದು ಆಸ್ಪತ್ರೆಯ ಅಧೀಕ್ಷಕ ಎಸ್.ಪಿ. ಮಧು ಎಂದು ವಿವರಿಸಿದರು.
ಮಾರ್ಕೆಟ್ ಆಸ್ಪತ್ರೆ ಎಂದೇ ಪ್ರಸಿದ್ಧಿ: 1937ರಲ್ಲಿಸ್ವತಂತ್ರ್ಯ ಪೂರ್ವದಲ್ಲಿ ಆರಂಭವಾದ ಈ ಆಸ್ಪತ್ರೆ ಅಂದಿನಿಂದಲ್ಲೂ ಮಾರ್ಕೆಟ್ ಆಸ್ಪತ್ರೆ ಎಂದೇ ಖ್ಯಾತಿ ಗಳಿಸಿದೆ. ಪ್ರತಿಯೊಂದು ಯಂತ್ರಗಳನ್ನು ಈ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ಮೊದಲ ಸಿಜಿ ಆಸ್ಪತ್ರೆ ಸಹಜ ಹೆರಿಗೆ ಮಾಡಿಸುವಲ್ಲಿ ಮುಂದೆ ಇತ್ತು. ಇದೀಗ ಮಹಿಳೆಯರ ಮಕ್ಕಳ ಆಸ್ಪತ್ರೆ ಅಂಕಿ - ಅಂಶಗಳಲ್ಲಿ ಫಸ್ಟ್ ಇದೆ. ಇಲ್ಲಿ ನಾಲ್ಕು ಜನ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು ಇದ್ದು, ಫಿಸಿಷಿಯನ್ ನೇಮಕಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ತೀವ್ರ ನಿಗಾ ಘಟಕ ಇದ್ದು, ನಮ್ಮಲ್ಲಿ ಸಹಜ ಹೆರಿಗೆಗೆ ಮೊದಲ ಆದ್ಯತೆ ಮತ್ತು ಪ್ರಯತ್ನ ಮಾಡಲಾಗುತ್ತದೆ ಎಂದು ಆಸ್ಪತ್ರೆಯ ಅಧೀಕ್ಷಕ ಎಸ್.ಪಿ. ಮಧು ತಿಳಿಸಿದರು.
ಇದನ್ನೂ ಓದಿ: ನೂತನ ಬೌರಿಂಗ್ ಆಸ್ಪತ್ರೆಗೆ ಮುಂದಿನ ತಿಂಗಳು ಶಂಕುಸ್ಥಾಪನೆ: ಸಚಿವ ಶರಣ ಪ್ರಕಾಶ್ ಪಾಟೀಲ್ - Bowring Hospital