ಬೆಳಗಾವಿ: ಮಧ್ಯ ಕರ್ನಾಟಕ ಭಾಗದ ಬಹುದಿನದ ಬೇಡಿಕೆಯಾದ ಭದ್ರಾ ಮೇಲ್ದಂಡೆ ಯೋಜನೆಯ ಮೊದಲನೇ ಹಂತವನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸುವುದಾಗಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಎಂ.ಚಂದ್ರಪ್ಪನವರ ಚುಕ್ಕೆ ಗುರುತಿನ ಪ್ರಶ್ನೆಗೆ ಉಪಮುಖ್ಯಮಂತ್ರಿಗಳ ಪರವಾಗಿ ಅವರು ಉತ್ತರಿಸಿದರು.
2003ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 2813 ಕೋಟಿ ರೂ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ನಂತರ 2015ರಲ್ಲಿ ಯೋಜನೆಯ ಪರಿಷ್ಕೃತ ಮೊತ್ತ 12340 ಕೋಟಿ ರೂಗೆ ಸರ್ಕಾರ ಅನುಮೋದನೆ ನೀಡಿದೆ. 2020ರಲ್ಲಿ ಪರಿಷ್ಕೃತ ಯೋಜನೆ ಮೊತ್ತ 21,473.67 ಕೋಟಿಗೆ ಏರಿಕೆಯಾಗಿದೆ. ಇದಕ್ಕೆ ತಕ್ಕ ಹಾಗೆ ಯೋಜನೆಯ ಮೂಲ ವ್ಯಾಪ್ತಿಯ ವಿಸ್ತೀರ್ಣ ಹಾಗೂ ಕುಡಿಯುವ ನೀರಿನ ಯೋಜನೆಗಳು ಸಹ ಸೇರ್ಪಡೆಯಾಗಿವೆ. 2027-28ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಯೋಜನೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದ್ದು, ಇನ್ನೂ 11,358.54 ಕೋಟಿ ರೂ ಅನುದಾನ ಬೇಕಾಗುತ್ತದೆ. ಕೇಂದ್ರ ಸರ್ಕಾರ ಆಯವ್ಯಯದಲ್ಲಿ ಘೋಷಿಸಿದಂತೆ 5300 ಕೋಟಿ ರೂ ಅನುದಾನವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಅನುದಾನ ಲಭಿಸಿದರೆ ಯೋಜನೆ ಪೂರ್ಣಗೊಳಿಸಲು ಸಹಾಯವಾಗಲಿದೆ ಎಂದು ಸಚಿವರು ಹೇಳಿದರು.
ದಿವಂಗತ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರು 1957ರಲ್ಲಿ ಮಧ್ಯ ಕರ್ನಾಟಕ ಬರ ಪೀಡಿತ ಜಿಲ್ಲೆಗಳಿಗೆ ನೀರು ನೀಡಲು ಮಹತ್ವಾಕಾಂಕ್ಷೆಯ ಭದ್ರಾ ಯೋಜನೆಯ ಬಗ್ಗೆ ಚಿಂತಿಸಿದ್ದರು. 2003ರಲ್ಲಿ ಅನುಮೊದನೆ ನೀಡಿದ ಯೋಜನಾ ವೆಚ್ಚ ಇಂದು 21,473.67 ಕೋಟಿಗಳಷ್ಟು ಹೆಚ್ಚಾಗಿದೆ. ಇನ್ನೂ ತಡವಾದರೆ ಎಸ್.ಆರ್.ರೇಟ್ ಏರಿಕೆಯಾಗಿ ಯೋಜನೆ ವೆಚ್ಚವು ಇನ್ನೂ ಹೆಚ್ಚಾಗಲಿದೆ. ಪಕ್ಕದ ತೆಲಂಗಾಣ ರಾಜ್ಯದಲ್ಲಿನ ಸರ್ಕಾರ 5 ವರ್ಷದಲ್ಲಿ 1.20 ಲಕ್ಷ ಕೋಟಿ ರೂ ಖರ್ಚು ಮಾಡಿ 18 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಿದೆ. ರಾಜ್ಯವೂ ಸಹ ಇಂತಹದೇ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಕೇಂದ್ರ ಸರ್ಕಾರ ಘೋಷಿಸಿದ ಅನುದಾನ ನೀಡಿಲ್ಲ ಎಂದು ನೆಪ ಹೇಳದೆ, ರಾಜ್ಯ ಸರ್ಕಾರವೇ ಅನುದಾನ ನೀಡಿ ಯೋಜನೆ ಪೂರ್ಣಗೊಳಿಸಬೇಕು ಎಂದು ಶಾಸಕ ಎಂ.ಚಂದ್ರಪ್ಪ ಒತ್ತಾಯಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ: ಉತ್ತರ ಕರ್ನಾಟಕ ಬಹುನಿರೀಕ್ಷಿತ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಯ ಬಗ್ಗೆ ಸಿಎಂ ಸಿದ್ದರಾಮಯ್ಯ ದೃಢ ಸಂಕಲ್ಪ ಮಾಡಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಸಚಿವ ಹೆಚ್.ಕೆ.ಪಾಟೀಲ್ ಪ್ರತಿಕ್ರಿಯೆ ನೀಡಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೋಮವಾರ ತಡರಾತ್ರಿವರಿಗೆ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ರೈತರ ಜೊತೆ ಸಿಎಂ ಸಭೆ ನಡೆಸಿದ್ದಾರೆ. 524 ಅಡಿ ಎತ್ತರ ಬಗ್ಗೆ ಹಾಗೂ ಅದಕ್ಕೆ ಬೇಕಾದ ಭೂಸ್ವಾಧೀನ ಪರಿಹಾರ ಪ್ರಕ್ರಿಯೆ ಚರ್ಚೆ ನಡೆದಿದೆ. ಈ ಯೋಜನೆಗೆ ಸುಗಮ ರೀತಿಯಲ್ಲಿ ಸಾಗುವುದಕ್ಕೆ ಚರ್ಚೆ ನಡೆದಿದೆ ಎಂದು ಹೆಚ್.ಕೆ.ಪಾಟೀಲ್ ತಿಳಿಸಿದರು.
ಇದನ್ನೂ ಓದಿ: ಸದನದಲ್ಲಿ ಪರಸ್ಪರ ನಮಸ್ಕರಿಸಿದ ವಿಜಯೇಂದ್ರ-ಯತ್ನಾಳ್: ಸಚಿವ ಜಮೀರ್ ಭೇಟಿಯಾದ ಯತ್ನಾಳ್