ಮೈಸೂರು: ಮುಖ್ಯಮಂತ್ರಿಗಳ ಬೆಂಗಾವಲು ವಾಹನಕ್ಕೆ ಅಡ್ಡ ಬಂದ ಬೈಕ್ ಸವಾರನ ವಿರುದ್ಧ ನಗರದ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಜೂನ್ 23ರಂದು ಮೈಸೂರು ಜಿಲ್ಲಾ ಪ್ರವಾಸದ ನಿಮಿತ್ತ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲಿಂದ ರಸ್ತೆ ಮಾರ್ಗವಾಗಿ ನಜರ್ಬಾದ್ನಲ್ಲಿರುವ ರಿಫ್ರೆಷ್ಮೆಂಟ್ನಲ್ಲಿ ಕಾಫಿ ಕುಡಿಯಲು ತೆರಳುತ್ತಿದ್ದರು. ಗನ್ ಹೌಸ್ ವೃತ್ತದ ಬಳಿ ವರುಣ ಗ್ರಾಮದ ಕುಂಬಾರಳ್ಳಿ ನಿವಾಸಿ ಶಿವು ಎಂಬಾತ ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸುತ್ತ ಗನ್ ಹೌಸ್ ವೃತ್ತದ ಬಳಿ ಹಾಕಿದ್ದ ಬ್ಯಾರಿಕೇಡ್ ದಾಟಿ ಬಂದಿದ್ದಾನೆ.
ಈ ಸಂದರ್ಭದಲ್ಲಿ ಅಲ್ಲೇ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯಾದ ಅಣ್ಣಯ್ಯ ಹಾಗೂ ಉಪೇಂದ್ರ ಆತನಿಗೆ ಬೈಕ್ ನಿಲ್ಲಿಸುವಂತೆ ಸೂಚಿಸಿದ್ದರು. ಆತ ವೇಗವಾಗಿ ಬಂದು ಮುಖ್ಯಮಂತ್ರಿಯವರ ಬೆಂಗಾವಲು ವಾಹನ ಬರುತ್ತಿದ್ದ ವಿರುದ್ಧ ದಿಕ್ಕಿನತ್ತ ಚಲಿಸಿ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಗಾಯಗೊಂಡ ಆತನನ್ನು ಆಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಇದೀಗ ಚೇತರಿಸಿಕೊಂಡಿದ್ದಾನೆ.
ಮುಖ್ಯಮಂತ್ರಿಗಳ ಕಾನ್ವಾಯ್‌ಗೆ ಅಡ್ಡಿಪಡಿಸಿ ಹಾಗೂ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪೊಲೀಸ್ ಕಾನ್ಸ್ಟೆಬಲ್ ಅಣ್ಣಯ್ಯ ನೀಡಿರುವ ದೂರಿನನ್ವಯ ಬೈಕ್ ಸವಾರನ ವಿರುದ್ಧ ಕೆ.ಆರ್.ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ನೆಲ-ಜಲ-ಭಾಷೆಯ ವಿಚಾರದಲ್ಲಿ ನಮಗೆ ಪಕ್ಷಗಳಿಲ್ಲ, ರಾಜ್ಯದ ಹಿತಾಸಕ್ತಿಗೆ ಆದ್ಯತೆ: ಸಿಎಂ - CM Siddaramaiah