ಬೆಂಗಳೂರು: ಚುನಾವಣಾ ಬಾಂಡ್ ಮೂಲಕ ಕಾರ್ಪೋರೇಟ್ ಕಂಪನಿಗಳಿಂದ ಸಾವಿರಾರು ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಕೆಲವರ ವಿರುದ್ಧ ಇಲ್ಲಿನ ತಿಲಕ್ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.
ಚುನಾವಣಾ ಬಾಂಡ್ ಮೂಲಕ 8 ಸಾವಿರ ಕೋಟಿ ರೂ. ಸುಲಿಗೆ ಮಾಡುವ ಮೂಲಕ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ದೂರುದಾರ ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ)ನ ಆದರ್ಶ ಆರ್. ಅಯ್ಯರ್ ಎಂಬವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್, ಎಫ್ಐಆರ್ ದಾಖಲಿಸುವಂತೆ ತಿಲಕ್ ನಗರ ಪೊಲೀಸರಿಗೆ ಶುಕ್ರವಾರ ಸೂಚನೆ ನೀಡಿತ್ತು.
ಆರೋಪ ಸಂಬಂಧ ನಿರ್ಮಲಾ ಸೀತಾರಾಮನ್ ವಿರುದ್ಧ ಅಪರಾಧಿಕ ಒಳಸಂಚು, ಸುಲಿಗೆಯಡಿ ಎಫ್ಐಆರ್ ದಾಖಲಾಗಿದೆ. ಅಲ್ಲದೇ, ಹಿಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿ ಬೇರೆ ಕಾರ್ಯಗಳಿಗೆ ಬಳಕೆ: ಹೈಕೋರ್ಟ್ ತೀವ್ರ ತರಾಟೆ - High Court
ದೂರಿನಲ್ಲಿ ಏನಿದೆ?: ಜಾರಿ ನಿರ್ದೇಶನಾಲಯ ಬಳಸಿಕೊಂಡು ದೇಶದ ಕಾರ್ಪೊರೇಟ್ ಕಂಪನಿಗಳ ಮೂಲಕ ದಾಳಿ ಮಾಡಿ, ಅವರಿಂದ ಚುನಾವಣಾ ಬಾಂಡ್ ಮೂಲಕ ಸುಮಾರು 8 ಸಾವಿರ ಕೋಟಿ ರೂ.ವರೆಗೂ ಹಣ ಸುಲಿಗೆ ಮಾಡಲಾಗಿದೆ. ರಾಜ್ಯದಲ್ಲಿ ನಳಿನ್ ಕುಮಾರ್ ಕಟೀಲ್ ರಹಸ್ಯ ಮಾರ್ಗವಾಗಿ ಹಣ ವರ್ಗಾವಣೆಗೆ ಸಹಕಾರಿಯಾಗಿದ್ದಾರೆ. ರಾಜಕೀಯ ಲಾಭಕ್ಕಾಗಿ ಇ.ಡಿ. ಬಳಸಿಕೊಂಡು ಕಂಪನಿಗಳ ಮೇಲೆ ದಾಳಿ ಮಾಡಿ, ಸಿಇಒ ಹಾಗೂ ಎಂ.ಡಿಯನ್ನು ಬಂಧಿಸಲಾಗಿತ್ತು. ಬಂಧನಕ್ಕೆ ಹೆದರಿದ ಕಂಪನಿ ಮಾಲೀಕರಿಗೆ ಚುನಾವಣಾ ಬಾಂಡ್ ಖರೀದಿಗೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಆದರ್ಶ ಆರ್. ಅಯ್ಯರ್ ವಿವರಿಸಿದ್ದಾರೆ.
ಕಾರ್ಪೋರೇಟ್ ಅಲ್ಯೂಮಿನಿಯಂ ಮತ್ತು ಕಾಫರ್ ಜೈಂಟ್, ಎಂ.ಎಸ್.ಸ್ಕೇರ್ ಲೈಟ್, ವೇದಾಂತ ಕಂಪನಿಗಳಿಂದ 2019ನೇ ಸಾಲಿನ ಏಪ್ರಿಲ್ನಿಂದ 2022ರ ಅಗಸ್ಟ್ವರೆಗೆ ಮತ್ತು 2023ರ ನವೆಂಬರ್ವರೆಗೆ ಒಟ್ಟು 230.15 ಕೋಟಿ ರೂ. ಪಡೆದುಕೊಂಡಿದ್ದಾರೆ. ಅರವಿಂದ ಫಾರ್ಮಾ ಕಂಪನಿಯಿಂದ 2022 ಹಾಗೂ 2023ರವರೆಗೆ 49.5 ಕೋಟಿ ರೂ. ಸೇರಿ ರಹಸ್ಯವಾಗಿ ಸುಮಾರು 8 ಸಾವಿರ ಕೋಟಿ ರೂ.ಗಳನ್ನು ಎಲ್ಲ ಆರೋಪಿಗಳು ಚುನಾವಣಾ ಬಾಂಡ್ಗೆ ಪರಿವರ್ತಿಸಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ.