ಕೊಪ್ಪಳ: "ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಹಲವು ಬಗೆಯ ಹೋರಾಟ ಮಾಡಿದರೂ ಇನ್ನೂ ನಮಗೆ ಸ್ಪಂದನೆ ಸಿಕ್ಕಿಲ್ಲ. ಈಗ ನಾವು ನ್ಯಾಯಾಂಗದ ಮೂಲಕ ಹೋರಾಟಕ್ಕೆ ಧುಮುಕುತ್ತೇವೆ. ನಮ್ಮ ಜನಾಂಗದಲ್ಲಿಯೂ ಸಹ ನ್ಯಾಯವಾದಿಗಳು ಇದ್ದಾರೆ. ಅವರೆಲ್ಲರನ್ನೂ ಸಂಘಟಿಸಿ ಸಿಎಂ ಕಣ್ತೆರೆಸುವ ಪ್ರಯತ್ನ ಮಾಡುತ್ತೇವೆ" ಎಂದು ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಕೊಪ್ಪಳದಲ್ಲಿ ಶುಕ್ರವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, "ಇದೇ ಸೆಪ್ಟಂಬರ್ 22 ರಂದು ಪಂಚಮಸಾಲಿ ವಕೀಲರ ಮಹಾಪರಿಷತ್ತು ಸಭೆ ನಡೆಯಲಿದೆ. ಆ ಸಭೆಯಲ್ಲಿ ಈ ಸರ್ಕಾರದ ಗಮನ ಸೆಳೆಯುವ ಕುರಿತು ಚರ್ಚಿಸಲಾಗುತ್ತದೆ. ನಮ್ಮ ಸಮಾಜದ ಕಾನೂನು ತಜ್ಞರ ಸಮಿತಿ ಮಾಡಿ ಈ ಮೂಲಕ ಸರದಕಾರಕ್ಕೆ ಒತ್ತಡ ಹಾಕುವ ಪ್ರಯತ್ನ ಮಾಡಲಾಗುತ್ತದೆ. ಇದರ ತಯಾರಿಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ" ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಸರ್ಕಾರದಿಂದಲೂ ಸ್ಪಂದನೆ ಸಿಕ್ಕಿಲ್ಲ: "ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನಮಗೆ ಮೀಸಲಾತಿ ದೊರೆಯುತ್ತದೆ ಎಂಬ ಆಶಾಭಾವನೆ ಹೊಂದಿದ್ದೆವು. ಆದರೆ, ಸಿದ್ದರಾಮಯ್ಯ ಸರ್ಕಾರದಲ್ಲೂ ಸಹ ನಮಗೆ ಸ್ಪಂದನೆ ಸಿಗಲಿಲ್ಲ. ಅಧಿವೇಶನದಲ್ಲಿ ಈ ಬಗ್ಗೆ ಯಾರೂ ಮಾತನಾಡಲಿಲ್ಲ. ಈ ಸರ್ಕಾರದ ಯಾವ ಶಾಸಕರು ನಮ್ಮ ಬೇಡಿಕೆ ಬಗ್ಗೆ ಮಾತನಾಡಿಲ್ಲ. ನಮ್ಮ ಸಮಾಜದ ಶಾಸಕರು ಸ್ಪೀಕರ್ಗೆ ಪತ್ರ ನೀಡಿದರೂ ಕಿಮ್ಮತ್ತು ಸಿಕ್ಕಿಲ್ಲ. ನಮ್ಮ ಸಮಾಜದ ಶಾಸಕರು ಸಭಾತ್ಯಾಗ ಮಾಡಬೇಕಿತ್ತು. ಅದಿವೇಶನಕ್ಕೂ ಮೊದಲೇ ನಾವು ಅವರಿಗೆ ಮನವಿ ಮಾಡಿಕೊಂಡಿದ್ದೆವು. ಲಕ್ಷ್ಮೀ ಹೆಬ್ಬಾಳ್ಕರ್, ವಿಜಯಾನಂದ ಕಾಶಪ್ಪನವರ್ ಸಿಎಂ ಜೊತೆ ಈ ಕುರಿತು ಮಾತನಾಡುತ್ತಿದ್ದೇವೆ ಎನ್ನುತ್ತಾರೆ ಹೊರತು ಯಾವುದೇ ನಿರ್ಣಯದ ಕುರಿತು ಅವರು ಮಾತನಾಡುತ್ತಿಲ್ಲ. ಸಮಾಜದ ಒಳಿತಿಗಾಗಿ ನಾವು ಹೊರಗಡೆ ಇದ್ದು ಹೋರಾಟ ಮಾಡುತ್ತೇವೆ. ಸರ್ಕಾರದ ಒಳಗಿರುವ ನೀವು ಅಲ್ಲಿ ಹೋರಾಟ ಮಾಡಿ. ಸಮಾಜದ ಋಣ ನಿಮ್ಮ ಮೇಲೆ ಇದೆ ಎಂದು ಹೇಳಿದ್ದೇವೆ. ಸಮಾಜದ ಪರವಾಗಿ ಮಾತನಾಡಿ. ನಿಮ್ಮ ಗೆಲುವಿಗೆ ಪಕ್ಷದ ಚಿಹ್ನೆಗಳು ಮಾತ್ರ ಕಾರಣವಲ್ಲ. ಸಮಾಜದ ಜನರು ಮತ ಹಾಕಿದ್ದಾರೆ ಎಂದು ಒತ್ತಾಯಿಸಿದ್ದೇವೆ" ಎಂದರು.
ಕಾರ್ಖಾನೆಗಳನ್ನು ಮುಚ್ಚಿಸುವ ಕುರಿತು ಪ್ರತಿಕ್ರಿಯಿಸಿದ ಅವರು, "ರೈತ ಪರ ಕಾರ್ಖಾನೆ ತೆರೆದಾಗ ದುರುದ್ದೇಶದಿಂದ ಮುಚ್ಚಿಸುವ ಪ್ರಯತ್ನ ಯಾರೂ ಮಾಡಬಾರದು. ಪರಿಸರ ನಿಯಂತ್ರಣ ಮಂಡಳಿ ಸ್ವಾಯತ್ತ ಸಂಸ್ಥೆ. ಇಲ್ಲಿ ರಾಜಕಾರಣ ಮಾಡಬಾರದು" ಎಂದು ಹೇಳಿದರು.
ಇದನ್ನೂ ಓದಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಡಿಕೆಗಾಗಿ 7ನೇ ಹಂತದ ಹೋರಾಟ ಆರಂಭ: ಜಯಮೃತ್ಯುಂಜಯ ಸ್ವಾಮೀಜಿ - 2A reservation