ಮೈಸೂರು: ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಅಕ್ರಮವಾಗಿ ಹಣ ಇರಿಸಿಕೊಂಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಚೇರಿಯ ಪ್ರಥಮ ದರ್ಜೆ ಸಹಾಯಕನಿಗೆ(ಎಫ್‌ಡಿಎ) ಮೈಸೂರಿನ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಒಂದು ವರ್ಷ ಕಾರಾಗೃಹ ಶಿಕ್ಷೆಯೊಂದಿಗೆ 25 ಸಾವಿರ ರೂ. ದಂಡ ವಿಧಿಸಿದೆ. ಡಿ.ಕೆ.ರವಿ ಶಿಕ್ಷೆಗೆ ಗುರಿಯಾದವರು.
ಅಬಕಾರಿ ಲೈಸನ್ಸ್ ನವೀಕರಣಕ್ಕೆ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಲಂಚ ಸ್ವೀಕರಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ಮ್ಯೂಥ್ಯೂಸ್ ಥಾಮಸ್ ನೇತೃತ್ವದಲ್ಲಿ ಅಧಿಕಾರಿಗಳು, 2013ರ ಆಗಸ್ಟ್ 2ರಂದು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ರವಿ ಬಳಿ 40 ಸಾವಿರ ರೂ. ನಗದು ಪತ್ತೆಯಾಗಿತ್ತು. ವಿಚಾರಣೆ ಮಾಡಿದಾಗ ಸಮರ್ಪಕ ಮಾಹಿತಿ ನೀಡದ ಕಾರಣ ಭ್ರಷ್ಟಾಚಾರ ನಿರ್ಮೂಲನಾ ಕಾಯಿದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ.ಭಾಗ್ಯ ಇದೀಗ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಮುತ್ತಮ್ಮ ಪೂಣಚ್ಚ ವಾದ ಮಂಡಿಸಿದ್ದರು.
40 ಲಕ್ಷ ರೂ. ಮೌಲ್ಯದ ಗಾಂಜಾ ವಶ: ರೈಲಿನಲ್ಲಿ ಒಡಿಶಾದಿಂದ ಮೈಸೂರಿಗೆ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಡ್ರಗ್ಸ್ ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 40 ಲಕ್ಷ ರೂ. ಮೌಲ್ಯದ 85 ಕೆ.ಜಿ 730 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಗರದ ಸಾತಗಳ್ಳಿ 1ನೇ ಹಂತದ ಬಳಿಯ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಬೊಲೆರೊ ವಾಹನದಲ್ಲಿದ್ದ ಮಾಲು ವಶಪಡಿಸಿಕೊಂಡಿದ್ದಾರೆ. ವಾಹನದಲ್ಲಿದ್ದ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳು ಗಾಂಜಾವನ್ನು ರೈಲಿನಲ್ಲಿ ಸಾಗಿಸಿದ್ದು, ಇಲ್ಲಿ ಚಿಲ್ಲರೆಯಾಗಿ ಮಾರಾಟ ಮಾಡಲು ಉದ್ದೇಶಿಸಿದ್ದರು ಎಂದು ತಿಳಿದು ಬಂದಿದೆ.
ಸಿಸಿಬಿ ಘಟಕದ ಎಸಿಪಿ ಎಸ್.ಎನ್.ಸಂದೇಶ್ ಕುಮಾರ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಇನ್ಸ್‌ಪೆಕ್ಟರ್ ಎಂ.ಮೋಹನ್ ಕುಮಾರ್, ಎಸ್‌ಐಗಳಾದ ಮಾರುತಿ ಅಂತರಗಟ್ಟಿ, ಕಿರಣ್ ಎ. ಹಂಪಿಹೋಳಿ, ಎಎಸ್‌ಐಗಳಾದ ಅಸ್ಗರ್ ಖಾನ್, ಸಿಬ್ಬಂದಿಗಳಾದ ಸಲೀಂ ಪಾಷ, ರಾಮಸ್ವಾಮಿ, ಪಿ.ಎನ್.ಲಕ್ಷ್ಮೀಕಾಂತ, ಎ.ಉಮಾ ಮಹೇಶ್, ಟಿ.ಪ್ರಕಾಶ್, ಎಂ.ಆರ್.ಗಣೇಶ್, ಆರ್.ಮಹೇಶ್, ಆರ್.ಸುರೇಶ್, ಚಂದ್ರಶೇಖರ್, ನರಸಿಂಹ, ಗೋವಿಂದ, ಮೋಹನಾರಾಧ್ಯ ಕೆ.ಮಹೇಶ್, ಮಧುಸೂದನ್, ಶಿವಣ್ಣ, ರಮ್ಯ, ಮಮತಾ ಇದ್ದರು.
ಇದನ್ನೂ ಓದಿ: 10 ಸರ್ಕಾರಿ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ: ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ