ಆನೇಕಲ್: ಜಮೀನು ವಿವಾದ ಹಿನ್ನೆಲೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದವರಿಗೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ ಪ್ರಕರಣ ಕಳೆದ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬನ್ನೇರುಘಟ್ಟ ಸಮೀಪದ ಕನ್ನನಾಯಕನ ಅಗ್ರಹಾರದ ಮಂಜುನಾಥ, ರವಿಚಂದ್ರ, ಮನೋಜ್ ಮತ್ತು ನಾರಾಯಣಪ್ಪ ಹಲ್ಲೆಗೊಳಗಾಗಿದ್ದಾರೆ. ಪಕ್ಕದ ಗ್ರಾಮ ಕುಲುಮೆಪಾಳ್ಯದ ಕೃಷ್ಣಪ್ಪ, ಅವರ ಮಕ್ಕಳಾದ ಸಾಗರ್ ಆನಂದ್ ಎಂಬ ಆರೋಪಿಗಳನ್ನು ಬನ್ನೇರುಘಟ್ಟ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಗೊಲ್ಲಹಳ್ಳಿ ಸರ್ವೆ ನಂ 82ರ ಪೈಕಿ 2 ಎಕರೆ ಜಮೀನು ವಿವಾದದಲ್ಲಿ ಇಬ್ಬರಿಗೂ ಮೂರು ತಿಂಗಳಿಂದ ತಗಾದೆ ಇದೆ. ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ನಡುವೆ ಭಾನುವಾರ ಬೆಳಿಗ್ಗೆ ಆರೋಪಿಗಳಾದ ಕೃಷ್ಣಪ್ಪ ತನ್ನ ಮಗ ಸಾಗರ್ ಸೇರಿ ವಿವಾದಿತ ಜಾಗವನ್ನು ಚಿಂದಿ ಆಯುವವರಿಗೆ ಬಾಡಿಗೆಗೆ ಕೊಡುವ ಬಗ್ಗೆ ತಿಳಿದು ಸ್ಥಳಕ್ಕೆ ಬಂದ ಮಂಜುನಾಥ್ ಮತ್ತು ರವಿಚಂದ್ರ ಎಂಬವರ ನಡುವೆ ಮಾತಿನ ಚಕಮಕಿ ನಡೆದಿದೆ. ಬೈಕ್‌ನಲ್ಲಿ ವಾಪಸ್ ಹೋಗುತ್ತಿದ್ದ ಮಂಜುನಾಥ್ ಮತ್ತು ರವಿಚಂದ್ರ ಅವರಿಗೆ ಕೃಷ್ಣಪ್ಪ ತಮ್ಮ ಕಾರು ಡಿಕ್ಕಿ ಹೊಡೆಸಿ, ಕೊಲೆ ಯತ್ನಕ್ಕೆ ಪ್ರಯತ್ನಿಸಿದ್ದಾಗಿ ಗಾಯಾಳುವಿನ ತಂದೆ ನಾರಾಯಣಪ್ಪ ಬನ್ನೇರುಘಟ್ಟ ಠಾಣೆಯಲ್ಲಿ ದೂರು ನೀಡಿದ್ದಾರೆ.
''ಕಾರು ಗುದ್ದಿದ ಪರಿಣಾಮ ರವಿಚಂದ್ರನ್ ಕೆಳಗೆ ಬಿದ್ದಿದ್ದಾರೆ. ಆತನ ಮೇಲೆ ದೊಣ್ಣೆ, ಕಲ್ಲು ಹಾಗೂ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ" ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಾಯಾಳುವಿನ ಎಡ ಕಾಲು ಮುರಿದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರ ಆರೋಪದ ಅಧಿಕಾರಿಗಳ ವಿಚಾರಣೆ ಪಾರದರ್ಶಕವಾಗಿರಲಿ: ಹೈಕೋರ್ಟ್