ಬೆಳಗಾವಿ: ಹಿಡಕಲ್ ಡ್ಯಾಮ್ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡು 50 ವರ್ಷವಾದ್ರೂ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿ ಬೆಳಗಾವಿ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಕಚೇರಿ ಮುಂದೆ ಹುಕ್ಕೇರಿ ತಾಲೂಕಿನಲ್ಲಿ ಮಾಸ್ತಿಹೊಳಿ, ನರಸಿಂಗಪುರ, ಗುಡನಟ್ಟಿ, ಬೀರಹೊಳಿ ಗ್ರಾಮಸ್ಥರ ಹೋರಾಟ 2ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ನೀರಾವರಿ ಇಲಾಖೆ ಎಂಡಿ ರಾಜೇಶ್ ಅಮ್ಮಿನಭಾವಿ ಅವರನ್ನು ಪ್ರತಿಭಟನಾನಿರತರು ಎಳೆದಾಡಿದ ಘಟನೆ ಕೂಡ ನಡೆಯಿತು.
ನಿನ್ನೆ ರಾತ್ರಿ ನೀರಾವರಿ ಇಲಾಖೆ ಆವರಣದಲ್ಲೇ ಮಲಗಿ, ಬೆಳಗ್ಗೆ ಮತ್ತೆ ಪ್ರತಿಭಟನೆ ಮುಂದುವರಿಸಿದ ರೈತರು, ಇಂದು ಮಧ್ಯಾಹ್ನ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಕಚೇರಿಗೆ ಎಂಡಿ ರಾಜೇಶ್ ಅಮ್ಮಿನಭಾವಿ ಆಗಮಿಸುತ್ತಿದ್ದಂತೆ ಘೇರಾವ್ ಹಾಕಿ ಮಹಿಳೆಯರು, ಅಧಿಕಾರಿಯನ್ನು ಎಳೆದಾಡಿದರು. ಈ ವೇಳೆ ಎಂಡಿ ಅವರನ್ನು ರೈತರ ಕೈಯಿಂದ ಬಿಡಿಸಿ ಕಚೇರಿಗೆ ಕಳುಹಿಸಲು ಪೊಲೀಸರು ಹರಸಾಹಸ ಪಟ್ಟರು.
ಎಂಡಿ ರಾಜೇಶ್ ಅಮ್ಮಿನಭಾವಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಮಾಸ್ತಿಹೊಳಿ ಗ್ರಾಮದಲ್ಲಿ 394 ಎಕರೆಗೆ ಪರಿಹಾರ ಸಿಕ್ಕಿಲ್ಲ ಅಂತ ಕಚೇರಿ ಮುಂದೆ ಪ್ರತಿಭಟನೆ ಮಾಡ್ತಿದ್ದಾರೆ. ಬರುವಾಗ ತಮ್ಮ ಅಹವಾಲು ನನಗೆ ಹೇಳಿದರು. 24 ಗಂಟೆ ಆದ ಮೇಲೆ ಸ್ಥಳಕ್ಕೆ ನಾನು ಬಂದಿರುವೆ ಅದಕ್ಕೆ ಕ್ಷಮೆ ಕೇಳುತ್ತೇನೆ. 1972ರಲ್ಲಿ ಹಿಡಕಲ್ ಜಲಾಶಯ ಕಾಮಗಾರಿ ಆಗಿದೆ. ಹಿನ್ನೀರಿನಲ್ಲಿ ಮುಳುಗಡೆಯಾಗುವ ಎಲ್ಲಾ ಗ್ರಾಮಗಳ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆಗ ಪರಿಹಾರ ನೀಡಲು ಕರ್ನಾಟಕ ಸರ್ಕಾರದಿಂದ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ನೀರಾವರಿ ನಿಗಮ ಆಗುವ ಮುನ್ನ ಭೂ ಸ್ವಾಧೀನ ಆಗಿದೆ ಎಂದರು.
2018ರ ಬಳಿಕ ನೀರಾವರಿ ನಿಗಮ ಆಗಿದೆ. ಸದ್ಯ ನಮ್ಮ ಕಚೇರಿಗೆ ರೈತರು ಪರಿಹಾರಕ್ಕೆ ಅಹವಾಲು ಸಲ್ಲಿಸುತ್ತಿದ್ದಾರೆ ಪರಿಹಾರ ಕೊಡುವ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗ್ತಿರೋದು ನಿಜ. ಸುಮಾರು ರೈತರು ಹೆಚ್ಚುವರಿ ಪರಿಹಾರ ಧನ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಸಹಿ ಮಾಡಿ ಪರಿಹಾರ ತೆಗೆದುಕೊಂಡ ಸಹಿ ಮತ್ತು ಹೆಬ್ಬಟ್ಟಿನ ದಾಖಲೆಗಳು ನಮ್ಮ ಬಳಿ ಇವೆ. 1970ರಲ್ಲಿ ಕೆಲವು ರೈತರಿಗೆ ಪರಿಹಾರ ನೀಡಿರುವ ದಾಖಲಾತಿಗಳು ಇವೆ. ಸಂಪೂರ್ಣ ದಾಖಲೆಗಳು ನಮಗೆ ಸಿಕ್ಕಿಲ್ಲ ಹೀಗಾಗಿ ಅಧಿಕಾರಿಗಳು ಗೊಂದಲದಲ್ಲಿದ್ದಾರೆ. ಎಲ್ಲವೂ ಸಹ ಭೂ ಸ್ವಾಧೀನ ಆಗಿದೆ ಪರಿಹಾರ ಯಾವುದಕ್ಕೆ ಸಿಕ್ಕಿದೆ ಎಂದು ಪರಿಶೀಲನೆ ಮಾಡುತ್ತೇವೆ ಎಂದು ಎಂಡಿ ಅಮ್ಮಿನಭಾವಿ ಹೇಳಿದರು.
ಇದನ್ನೂ ಓದಿ: ಚುನಾವಣಾ ಬಾಂಡ್ ವಿವರ ಬಿಡುಗಡೆಗೆ ಒತ್ತಾಯ: ಎಸ್ಬಿಐ ಬ್ಯಾಂಕ್ಗೆ ಯುವ ಕಾಂಗ್ರೆಸ್ ಮುತ್ತಿಗೆ