ದಾವಣಗೆರೆ: ಪ್ರಸ್ತುತ ದಿನಗಳಲ್ಲಿ ಭೀಕರ ಬರದಿಂದಾಗಿ ರೈತ ತತ್ತರಿಸಿದ್ದಾನೆ. ಆಗಾಗ್ಗೆ ಮಳೆ ಕೈಕೊಟ್ಟು ಬೆಳೆ ಕೈ ಸಿಗದೇ ಅನ್ನದಾತ ಆರ್ಥಿಕ ಹೊಡೆತಕ್ಕೆ ಸಿಲುಕಿ ಕಂಗೆಟ್ಟಿದ್ದಾನೆ. ಅದರೆ ದಾವಣಗೆರೆ ಜಿಲ್ಲೆಯ ರೈತನೊಬ್ಬನು ನೀರು, ಗೊಬ್ಬರವಿಲ್ಲದೇ, ಸಾವಯವದಲ್ಲಿ ವಿವಿಧ ಬೆಳೆ ಬೆಳೆದು ಯಶಸ್ಸು ಕಂಡಿದ್ದಾನೆ. ಲಾಭ ತರುವ ಬೆಳೆ ಕಂಡುಕೊಂಡ ರೈತ ತನ್ನ ಆಡಕೆ ತೋಟದಲ್ಲಿ ಮಿಶ್ರಬೆಳೆಯಾಗಿ ವಿವಿಧ ಬೆಳೆ ಬೆಳೆದು ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾನೆ. ಅದರಲ್ಲಿಯೂ ಕೋ ಕೋ ಮಿಶ್ರಬೆಳೆಯಾಗಿ ಬೆಳೆದು ಇನ್ನಿತರ ರೈತರು ಬೆಳೆಯುವಂತೆ ಮಾದರಿ ಆಗಿದ್ದಾನೆ.
ಅಡಿಕೆ ತೋಟದಲ್ಲಿ ಮಿಶ್ರಬೆಳೆ ಕೋಕೋ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಬಹುತೇಕ ರೈತರು ಅಡಿಕೆ ಬೆಳೆಯುತ್ತಾರೆ. ಇದೇ ತಾಲೂಕಿನ ಕಾರಿಗನೂರು ಗ್ರಾಮದ ರೈತ ರುದ್ರೇಶ ಎಂಬುವರು ಸಾವಯವದಲ್ಲಿ ತಮ್ಮ ಒಂದು ಎಕರೆ ಅಡಕೆ ತೋಟದಲ್ಲಿ ಮಿಶ್ರಬೆಳೆಯಾಗಿ ಕೋಕೋ' ಬೆಳೆದು ಯಶಸ್ಸು ಕಂಡಿದ್ದಾರೆ.
ಚಾಕೊಲೇಟ್ನಲ್ಲಿ ಹೆಚ್ಚು ಉಪಯೋಗ ಆಗುವ 'ಕೋಕೋ' ಬೆಳೆಯಿಂದ ಪ್ರತಿವರ್ಷವೂ 1.50 ಲಕ್ಷ ರೂಪಾಯಿ ಲಾಭವನ್ನು ರೈತ ರುದ್ರೇಶ್ ಗಳಿಸುತ್ತಿದ್ದಾರೆ. ಒಂದು ಎಕರೆ ಅಡಕೆ ತೋಟದಲ್ಲಿ ಕಳೆದ 09 ವರ್ಷಗಳಿಂದ ಮಿಶ್ರ ಬೆಳೆಯಾಗಿ ರುದ್ರೇಶ್ ಕೋಕೋ ಬೆಳೆಯುತ್ತಿದ್ದು, ಆರಂಭದಲ್ಲಿ ನಷ್ಟ ಅನುಭವಿಸಿದ್ದರೂ, ಛಲ ಬಿಡದೆ ಕೋಕೋ ಬೆಳೆ ಬೆಳೆಯುವುದನ್ನು ಮುಂದುವರೆಸಿದರು.
ಈ ಬೆಳೆಗೆ ನೀರು, ಗೊಬ್ಬರವಿಲ್ಲದೇ ಕೇವಲ ಸಾವಯವದಲ್ಲಿ ಕೋಕೋವನ್ನು ಬೆಳೆದಿದ್ದಾರೆ. ಇಲ್ಲಿಯ ತನಕ 13-14 ಬೆಳೆ ಕಂಡಿರುವ ರುದ್ರೇಶ್ ಇಂದಿಗೂ ಲಕ್ಷಾಂತರ ರೂಪಾಯಿ ಲಾಭ ಪಡೆಯುತ್ತಿದ್ದಾರೆ. ಆರಂಭದಲ್ಲಿ ಎಕರೆಗೆ ಕೇವಲ 6 ಚೀಲ ಫಸಲು ಬರುತ್ತಿತ್ತು, ಇದೀಗ ಎಕರೆಗೆ 28 ಚೀಲ ಬರುತ್ತಿದೆ ಎಂದು ರೈತ ರುದ್ರೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.
'ಕೋಕೋ' ಜತೆ ವಿವಿಧ ಹಣ್ಣು ಬೆಳೆದ ರುದ್ರೇಶ್: ರುದ್ರೇಶ್ ರವರು ಬಾಲ್ಯದಿಂದಲೇ ಕೃಷಿಯನ್ನೇ ಜೀವನಾಧಾರವಾಗಿ ಮಾಡಿಕೊಂಡು ಬಂದಿದ್ದಾರೆ. ರುದ್ರೇಶ್ 5 ಎಕರೆ ಜಮೀನು ಹೊಂದಿದ್ದು, ಎಕರೆಯಲ್ಲಿ ಕೋಕೋ ಬೆಳೆದಿದ್ದಾರೆ. ಉಳಿದ ಜಮೀನಿನಲ್ಲಿ ಅಡಿಕೆ, ಹಲಸು, ಮಾವು, ಸಪೋಟ, ರಾಮ್ ಫಲ, ಲಕ್ಷ್ಮಣ ಫಲ, ನಿಂಬೆಹಣ್ಣು, ಬಾಳೆ ಹೀಗೆ ವಿವಿಧ ಹಣ್ಣುಗಳನ್ನು ಸಾವಯವ ಕೃಷಿಯಲ್ಲಿ ಬೆಳೆದಿದ್ದಾರೆ. ಒಂದು ಎಕರೆಯಲ್ಲಿ ಅಡಕೆ ತೋಟ ಮಾಡಿಕೊಂಡಿದ್ದ ರೈತ ರುದ್ರೇಶ್ ಮತ್ತೊಂದು ಎಕರೆಗೂ ಈಗ ಅಡಕೆ ನಾಟಿ ಮಾಡಿದ್ದಾರೆ. ಉಳಿದ 3 ಎಕರೆಯಲ್ಲಿ ಸಾವಯವ ಗೊಬ್ಬರ ಬಳಸಿ ಭತ್ತ ಬೆಳೆದಿದ್ದು, ಅದೇ ಭತ್ತವನ್ನು ಅಕ್ಕಿಯನ್ನಾಗಿ ಮಾಡಿಸಿ ತಾವೇ ಸ್ವತಃ ಮಾರಾಟ ಮಾಡುತ್ತಿದ್ದಾರೆ.
ಚಾಕೋಲೆಟ್ನಲ್ಲಿ ಬಳಸುವ ಕೋಕೋಗೆ ಡಿಮ್ಯಾಂಡ್ : ಕೋ ಕೋ ಬೆಳೆಯನ್ನು ಚಾಕೋಲೆಟ್ ತಯಾರಿಕೆಯಲ್ಲಿ ಬಳಸುವುದರಿಂದ ವರ್ಷದಿಂದ ವರ್ಷಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಅಲ್ಲದೆ ಈ ವರ್ಷ ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಕೆಜಿ ಒಂದಕ್ಕೆ ಸುಮಾರು ನಾಲ್ಕು ಪಟ್ಟು ಅಧಿಕ ಬೆಲೆಗೆ ಮಾರಾಟವಾಗಿದೆ. ಕಳೆದ ವರ್ಷ 200ರಿಂದ 220 ರೂ.ಗೆ ಒಂದು ಕೆಜಿ ಮಾರಾಟ ಆಗುತ್ತಿತ್ತು.
ಆದರೆ, ಈ ವರ್ಷ ಒಂದು ಕೆಜಿ ಗೆ 650- 750 ರೂ.ವರೆಗೆ ಮಾರಾಟವಾಗಿದೆ ಎನ್ನುತ್ತಾರೆ ರೈತ ರುದ್ರೇಶ್. ಇನ್ನು ಕೋಕೋಗೆ ನೀರು ಅಗತ್ಯವಿಲ್ಲ, ಸಾವಯವ ಗೊಬ್ಬರ ಬಳಸಿ 1 ಎಕರೆಯಲ್ಲಿ ಸುಮಾರು 2.50 ಕ್ಲಿಂಟಾಲ್ ವರೆಗೆ ಕೋಕೋ ಬೆಳೆಯಬಹುದಾಗಿದೆ. ಕೋ ಕೋ ದಟ್ಟವಾದ ಎಲೆಗಳನ್ನು ಬಿಡುವದರಿಂದ ಎಲೆ ಉದುರಿ ಅಡಕೆ ಗಿಡಗಳಿಗೆ ಅದೇ ಸಾವಯವ ಗೊಬ್ಬರ ಆಗಿ ವರದಾನ ಆಗ್ತಿದೆ. ಅಕ್ಕಪಕ್ಕದ ರೈತರು ಕೂಡ ರುದ್ರೇಶ ಅವರ ಮಿಶ್ರ ಬೆಳೆಗೆ ಮನಸೋತಿದ್ದು, ಅಡಿಕೆ ತೋಟದಲ್ಲಿ ಮಿಶ್ರಬೆಳೆಯಾಗಿ ಕೋಕೋ ನೆಟ್ಟಿದ್ದಾರೆ. ರುದ್ರೇಶ್ ಅವರ ಮಾರ್ಗದರ್ಶನದಲ್ಲಿ ಕೋಕೋ ಬೆಳೆಯುತ್ತಿದ್ದಾರೆ.
'ಕೃಷಿ ಪಂಡಿತ' ಪ್ರಶಸ್ತಿ ಪಡೆದಿರುವ ರುದ್ರೇಶ್: ರೈತ ರುದ್ರೇಶ್ ಅವರು ಮಣ್ಣಿನ ಫಲವತ್ತತೆ ಉಳಿಸಲು ಹಾಗೂ ಆರೋಗ್ಯಕರ ಕೃಷಿಗಾಗಿ ಸಾವಯವ ಕೃಷಿಯಲ್ಲಿ ತೊಡಗಿದ್ದರಿಂದ ಜಿಲ್ಲೆ, ತಾಲೂಕು, ಅಷ್ಟೇ ಅಲ್ಲದೆ ರಾಜ್ಯಮಟ್ಟದಿಂದ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ. 2021-22ರಲ್ಲಿ 'ಉದಯೋನ್ಮುಖ ಕೃಷಿ ಪಂಡಿತ' ಪ್ರಶಸ್ತಿ ನೀಡಿ ರೈತ ರುದ್ರೇಶ್ ಅವರನ್ನು ರಾಜ್ಯ ಸರ್ಕಾರ ಗೌರವಿಸಿದೆ.
ಕೋಕೋ ಬೆಳೆಯಿಂದ ಭರ್ಜರಿ ಲಾಭ:ಒಂದು ಎಕರೆಯಲ್ಲಿ ಕೋಕೋ ಬೆಳೆದಿದ್ದೇನೆ. 09 ವರ್ಷದಿಂದ ಬೆಳೆಯುತ್ತಿದ್ದು, 06 ವರ್ಷಗಳಿಂದ ಕೋಕೋ ಮಾರಾಟ ಮಾಡುತ್ತಿರುವೆ. ಪ್ರತಿವರ್ಷವೂ ಎರಡು ಕ್ವಿಂಟಾಲ್ ಕೋ ಕೋ ಕೈಗೆ ಬರುತ್ತಿದೆ. ಪ್ರಸಕ್ತ ವರ್ಷ ಒಂದು ಕೆಜಿಗೆ 650 ರಂತೆ ಮಾರಾಟ ಆಗಿದೆ. ಕೋಕೋವನ್ನು ಕ್ಯಾಂಪ್ಕೋ, ಹಾಗೂ ಕ್ಯಾಟ್ಬರಿ ಕಂಪನಿಗೆ ಮಾರಾಟ ಮಾಡಿರುವೆ, ಭರ್ಜರಿ ಲಾಭ ಸಿಕ್ಕಿದೆ.
ಶಿವಮೊಗ್ಗದಿಂದ ಸಸಿ ತಂದು ನೆಟ್ಟಿದ್ದೇವು, ಇದಕ್ಕೆ ಗೊಬ್ಬರ ಔಷಧ ಗೊಬ್ಬರ ಬಳಕೆ ಮಾಡಿಲ್ಲ, ಸಾವಯವ ಹೊಬ್ಬರ ಬಳಕೆ ಮಾಡಲಾಗಿದೆ. ಕೋಕೋ ಬೆಳೆಯಲು ಮತ್ಸ್ಯಜನ್ಯ, ಗೋಕೃಪಾಂಮೃತ, ಹುಳಿ ಮಜ್ಜಿಗೆ ಬಳಕೆ ಮಾಡಿರುವೆ ಎನ್ನುತ್ತಾರೆ ಪ್ರಗತಿ ಪರ ರೈತ ರುದ್ರೇಶ್.