ಚಾಮರಾಜನಗರ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮನೆಗಳನ್ನು ತೊರೆದ ಘಟನೆಗೆ ಸಂಬಂಧಿಸಿದಂತೆ ಪರಿಸ್ಥಿತಿ ಗಂಭೀರತೆ ಕಂಡು ಎಚ್ಚೆತ್ತ ಅಧಿಕಾರಿಗಳು ಇಂದು ಚಾಮರಾಜನಗರ ತಾಲೂಕಿನ ಹೆಗ್ಗವಾಡಿಪುರ ಮತ್ತು ದೇಶವಳ್ಳಿ ಗ್ರಾಮಗಳಿಗೆ ಭೇಟಿ ನೀಡಿದರು. ಈ ವೇಳೆ ಅಧಿಕಾರಿಗಳ ಮುಂದೆ ಗ್ರಾಮಸ್ಥರು ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಕಿರುಕುಳದ ವಿರುದ್ಧ ಅಳಲು ತೋಡಿಕೊಂಡರು.
ಮೈಕ್ರೋ ಫೈನಾನ್ಸ್ನವರ ಕಿರುಕುಳಕ್ಕೆ ಬೇಸತ್ತು ಊರು ತೊರೆದ ಬಗ್ಗೆ ಈಟಿವಿ ಭಾರತ ವರದಿ ಬಿತ್ತರಿಸಿದ್ದನ್ನು ಕಂಡ ಅಧಿಕಾರಿಗಳು ಊರುಗಳಿಗೆ ದೌಡಾಯಿಸಿ ಜನರ ಸಮಸ್ಯೆ ಆಲಿಸಿದರು. ಊರಿಗೆ ಬಂದ ಚಾಮರಾಜನಗರ ತಹಶೀಲ್ದಾರ್ ಗಿರಿಜಾ ಸೇರಿದಂತೆ ಇತರೆ ಅಧಿಕಾರಿಗಳನ್ನು ಕಂಡ ಜನರು ಸಾಲು ಸಾಲು ಸಮಸ್ಯೆಗಳನ್ನು ಮುಂದಿಟ್ಟರು. ರಾತ್ರಿ ಬಂದು ಬಾಗಿಲು ತಟ್ಟಿ ಹಣ ಕೊಡಿ ಅಂತಾರೆ, ಒಂದು ದಿನ ತಡವಾದರೂ ಬಾಯಿಗೆ ಬಂದಂತೆ ಬೈಯುತ್ತಾರೆ, ಅವಾಚ್ಯವಾಗಿ ನಿಂದಿಸುತ್ತಾರೆ. ಯಾಕಾದರೂ ಸಾಲ ಮಾಡಿದೆವೋ ಎಂಬ ಪರಿಸ್ಥಿತಿಗೆ ತಂದು ನಮ್ಮನ್ನು ನಿಲ್ಲಿಸಿದ್ದಾರೆಂದು ಜನರು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಹೆದರಿ ಹೆಗ್ಗವಾಡಿಪುರ ಮತ್ತು ದೇಶವಳ್ಳಿ ಗ್ರಾಮಗಳಿಂದ ಊರು ಬಿಟ್ಟು ಹೋಗಿರುವವರ ಮನೆಗಳನ್ನು ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ದೇಶವಳ್ಳಿ ಗ್ರಾಮದಲ್ಲಿ ಒಟ್ಟು 6 ಕುಟುಂಬಗಳು ಮಕ್ಕಳನ್ನು ಶಾಲೆ ಬಿಡಿಸಿ ಊರು ಬಿಟ್ಟಿರುವುದು ಅಧಿಕಾರಿಗಳ ಭೇಟಿಯಲ್ಲಿ ಗೊತ್ತಾಯಿತು.
ಹೆಗ್ಗವಾಡಿಪುರ ಗ್ರಾಮದ ವಿದ್ಯಾರ್ಥಿಯೋರ್ವ ತಮ್ಮ ಕುಟುಂಬಕ್ಕೆ ಆಗುತ್ತಿರುವ ಕಿರುಕುಳವನ್ನು ತಹಶೀಲ್ದಾರ್ಗೆ ತಿಳಿಸಿದನು. ದೇಶವಳ್ಳಿ ಗ್ರಾಮದ ಶೋಶಾ, ಸುಮಾ, ಶಾರದಾ, ಹೆಗ್ಗವಾಡಿಪುರ ಗ್ರಾಮದ ನಾಗಮ್ಮ ಮತ್ತು ಪುಟ್ಟತಾಯಮ್ಮ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಹೆದರಿ ಊರು ಬಿಟ್ಟಿರುವುದು ತಹಶೀಲ್ದಾರ್ ಭೇಟಿ ವೇಳೆ ಗೊತ್ತಾಯಿತು.
ಭಯ ಪಡಬೇಡಿ : ತಹಶೀಲ್ದಾರ್ ಗಿರಿಜಾ ಮಾತನಾಡಿ, ಮೈಕ್ರೋ ಫೈನಾನ್ಸ್ ಕುರಿತು ಜಾಗೃತಿ ನೀಡಲು ಮುಂದಿನ ವಾರ ಒಂದು ದಿನ ಗ್ರಾಮಸಭೆ ನಡೆಸಲಾಗುತ್ತದೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿ ಭಯ ಪಡಬೇಡಿ. ಯಾರಾದರೂ ಕಿರುಕುಳ ನೀಡಿದ್ದಲ್ಲಿ ಜಿಲ್ಲಾಡಳಿತ ಸಹಾಯವಾಣಿ/ಪೊಲೀಸ್ ಸಹಾಯವಾಣಿಗೆ ಅಥವಾ ಸ್ಥಳೀಯ ಅಧಿಕಾರಿಗಳಿಗೆ ದೂರು ಸಲ್ಲಿಸಿ, ಜನರ ಜೊತೆ ಜಿಲ್ಲಾಡಳಿತ ಇರಲಿದೆ ಎಂದು ಅಭಯ ನೀಡಿದರು.
ಉಡಿಗಾಲದಲ್ಲೂ 5 ಕುಟುಂಬಗಳು ನಾಪತ್ತೆ : ಇನ್ನು, ಈಟಿವಿ ಭಾರತದ ವರದಿ ಕಂಡು ಉಡಿಗಾಲದ ನಾಗೇಶ್ ಎಂಬವರು ತಮ್ಮ ಊರಿನಲ್ಲೂ 5 ಕುಟುಂಬಗಳು ಮೈಕ್ರೋ ಫೈನಾನ್ಸ್ ಕಿರುಕುಳ ತಾಳಲಾರದೆ ಊರು ತೊರೆದಿದ್ದಾರೆಂದು ತಿಳಿಸಿದರು.
ಸಹಾಯವಾಣಿ ಸ್ಥಾಪನೆ : ಖಾಸಗಿ ಮೈಕ್ರೋ ಫೈನಾನ್ಸ್ಗಳಿಂದ ಸಾಲ ವಸೂಲಾತಿಗೆ ಕಿರುಕುಳ ನೀಡಿದ್ದಲ್ಲಿ ದೂರವಾಣಿ ಮೂಲಕ ದೂರು ಸಲ್ಲಿಸಿ ಎಂದು ಜಿಲ್ಲಾಡಳಿತ ಸಹಾಯವಾಣಿ ಸ್ಥಾಪಿಸಿದೆ.
ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿರುವ ಹಣಕಾಸು ಸಂಸ್ಥೆಗಳಾದ ಖಾಸಗಿ ಫೈನಾನ್ಸ್ಗಳು, ಸಂಘ ಸಂಸ್ಥೆಗಳು, ಮೈಕ್ರೋ ಫೈನಾನ್ಸ್ಗಳು ಹಾಗೂ ಇತರೆ ಬ್ಯಾಂಕ್‍ಗಳಿಂದ ಸಾಲ ವಸೂಲಿಗಾಗಿ ಬ್ಯಾಂಕ್‍ನ ರಿಕವರಿ ಏಜೆಂಟ್‍ಗಳು ದೌರ್ಜನ್ಯ, ಕಿರುಕುಳ, ಮಾನಸಿಕ ಹಿಂಸೆ ನೀಡುತ್ತಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ದೂರವಾಣಿ ಹಾಗೂ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ಸಲ್ಲಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.
ಸಾಲದ ವಸೂಲಿಗಾಗಿ ಬ್ಯಾಂಕ್‍ನ ರಿಕವರಿ ಏಜೆಂಟ್‍ಗಳು ದೌರ್ಜನ್ಯ, ಕಿರುಕುಳ, ಮಾನಸಿಕ ಹಿಂಸೆ ನೀಡುತ್ತಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ದೂರವಾಣಿ ಸಂಖ್ಯೆ 08226-223160 ಹಾಗೂ ವಾಟ್ಸ್ಯಾಪ್ ಸಂಖ್ಯೆ 9740942901, ಇಮೇಲ್- ffmcchamarajanagar@gmail.com ಗೆ ಮತ್ತು ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 9480804600 ಗೆ ದೂರು ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಊರು ತೊರೆದ ಜನ: ಕಣ್ಣೀರಿಟ್ಟ ಬಾಲಕ